ಮಾಂಸಾಹಾರ ಪ್ರಿಯರಿಗೆ ಶಾಕ್! ಚಿಕನ್, ಮೊಟ್ಟೆ ಬೆಲೆ ಭಾರೀ ಏರಿಕೆಗೆ ಕೌಂಟ್‌ಡೌನ್
ಕೋಳಿ ದಾಣಾ ವೆಚ್ಚ ಏರಿಕೆ, ಸಾರಿಗೆ ಖರ್ಚಿನ ಹೆಚ್ಚಳ ಹಾಗೂ ಹಬ್ಬಗಳ ಮುನ್ನ ಉತ್ಪಾದನೆ ಕಡಿತಗೊಳಿಸುವ ನಿರ್ಧಾರದಿಂದ ದೇಶಾದ್ಯಂತ ಚಿಕನ್ ಮತ್ತು ಕೋಳಿ ಮೊಟ್ಟೆಗಳ ಬೆಲೆ ಮುಂದಿನ ತಿಂಗಳುಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಮಾಂಸಾಹಾರ ಪ್ರಿಯರಿಗೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಖರ್ಚಿನ ಭಾರ ಬೀಳುವ ಸಾಧ್ಯತೆ ಕಾಣಿಸುತ್ತಿದೆ. ದೇಶದ ಹಲವು ಭಾಗಗಳಲ್ಲಿ ಚಿಕನ್ ಮತ್ತು ಕೋಳಿ ಮೊಟ್ಟೆಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಮುನ್ಸೂಚನೆ ದೊರೆತಿದ್ದು, ಕೋಳಿ ಉತ್ಪಾದನೆ ಕಡಿತಗೊಳಿಸುವ ನಿರ್ಧಾರ ಇದಕ್ಕೆ ಪ್ರಮುಖ ಕಾರಣವಾಗಿದೆ.
ಕೋಳಿ ಸಾಕಾಣಿಕೆ ಕ್ಷೇತ್ರದ ಪ್ರತಿನಿಧಿಗಳು ಉತ್ಪಾದನೆಯನ್ನು ಸುಮಾರು 25 ಶೇಕಡಾ ಮಟ್ಟಿಗೆ ಕಡಿಮೆ ಮಾಡಲು ಸಿದ್ಧತೆ ನಡೆಸಿದ್ದಾರೆ. ದಾಣಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವುದು ಹಾಗೂ ನಿರ್ವಹಣಾ ಖರ್ಚು ಏರಿಕೆಯಾಗಿರುವುದರಿಂದ ಸಾಕಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಉತ್ಪಾದನೆ ಕಡಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ಉದ್ಯಮ ವಲಯ ತಿಳಿಸಿದೆ.
ಇತ್ತೀಚಿನ ತಿಂಗಳಲ್ಲಿ ಕೋಳಿಗಳಿಗೆ ಬಳಸುವ ಸೊಯಾಬೀನ್ ಮೀಲ್ ಬೆಲೆಯಲ್ಲಿ ಭಾರೀ ಏರಿಕೆ ದಾಖಲಾಗಿದೆ. ಕೆಲವೇ ವಾರಗಳಲ್ಲಿ ಇದರ ಬೆಲೆ 40 ಶೇಕಡಕ್ಕೂ ಹೆಚ್ಚು ಹೆಚ್ಚಾಗಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಸಾಗಣೆ ವೆಚ್ಚವೂ ಹೆಚ್ಚಾಗಿದ್ದು, ಉತ್ಪಾದನಾ ವೆಚ್ಚ ಮತ್ತಷ್ಟು ಏರಿದೆ.
ಜುಲೈದಿಂದ ಅಕ್ಟೋಬರ್ ಅವಧಿಯಲ್ಲಿ ಶ್ರಾವಣ ಮಾಸ, ನವರಾತ್ರಿ ಸೇರಿದಂತೆ ಹಲವು ಹಬ್ಬಗಳು ಬರುವ ಹಿನ್ನೆಲೆಯಲ್ಲಿ ಮಾಂಸಾಹಾರ ಬಳಕೆ ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಬೇಡಿಕೆ ಇಳಿಮುಖವಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಉತ್ಪಾದನೆ ಕಡಿಮೆ ಮಾಡಲು ಉದ್ಯಮ ವಲಯ ಮುಂದಾಗಿದೆ.
ಉತ್ಪಾದನೆ ಇಳಿದರೆ ಮಾರುಕಟ್ಟೆಯಲ್ಲಿ ಲಭ್ಯತೆ ಕಡಿಮೆಯಾಗಲಿದ್ದು, ಅದರ ಪರಿಣಾಮವಾಗಿ ಚಿಕನ್ ಹಾಗೂ ಮೊಟ್ಟೆಗಳ ದರ ಏರಿಕೆಯಾಗಬಹುದು ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ. ಈಗಾಗಲೇ ಕೆಲವು ಪ್ರದೇಶಗಳಲ್ಲಿ ಚಿಕನ್ ಬೆಲೆ ಪ್ರತಿ ಕಿಲೋಗ್ರಾಂಗೆ ₹250 ರಿಂದ ₹300ರ ನಡುವೆ ಮಾರಾಟವಾಗುತ್ತಿದೆ.
ಇನ್ನೊಂದೆಡೆ, ಕೋಳಿ ಸಾಕಾಣಿಕೆ ಕ್ಷೇತ್ರವು ಸೊಯಾಬೀನ್ ಮೀಲ್ ಆಮದುಗೆ ಸರ್ಕಾರ ಅನುಮತಿ ನೀಡಬೇಕು ಎಂದು ಒತ್ತಾಯಿಸಿದೆ. ಕೆಲವರು ಕೃತಕ ಕೊರತೆ ಸೃಷ್ಟಿಸಿ ದರ ಹೆಚ್ಚಳಕ್ಕೆ ಕಾರಣರಾಗುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಉದ್ಯಮ ವಲಯ ಸರ್ಕಾರವನ್ನು ಆಗ್ರಹಿಸಿದೆ.
ಉತ್ಪಾದನೆ ಕಡಿತದ ಭಾಗವಾಗಿ ಮರಿಗಳನ್ನು ಉತ್ಪಾದಿಸುವ ತಾಯಿ ಕೋಳಿಗಳ ಸಂಖ್ಯೆಯನ್ನು ಕೂಡ ಕಡಿಮೆ ಮಾಡಲಾಗುತ್ತಿದೆ. ಇದರಿಂದ ಬ್ರೀಡರ್ ಕೋಳಿಗಳ ಮಾರುಕಟ್ಟೆ ಬೆಲೆ ಕುಸಿದಿದ್ದು, ಹಿಂದೆ ₹140ಕ್ಕೆ ಮಾರಾಟವಾಗುತ್ತಿದ್ದ ಕೋಳಿ ಈಗ ಸುಮಾರು ₹65ಕ್ಕೆ ಇಳಿದಿರುವುದಾಗಿ ವರದಿಯಾಗಿದೆ.



