ಇಪಿಎಫ್‌ಒನ ಹೊಸ ಯೋಜನೆ: ಇನ್ಮುಂದೆ ಕಾರ್ಡ್‌, ಯುಪಿಐ ಬಳಸಿ ಸುಲಭವಾಗಿ ಹಣ ಹಿಂಪಡೆಯಬಹುದು

ಪಿಎಫ್‌ ಖಾತೆಯನ್ನು ಸಹ ಬ್ಯಾಂಕ್‌ ಖಾತೆಯಂತೆ ಸುಲಭವಾಗಿ ನಿರ್ವಹಿಸುವಂತೆ ಮಾಡಲು ಇಪಿಎಫ್‌ಒ ಮುಂದಾಗಿದೆ. ಹೇಗೆ? ಇಲ್ಲಿದೆ ಓದಿ.

EPFO: ಇಪಿಎಫ್‌ಒ ಅಥವಾ ನೌಕರರ ಭವಿಷ್ಯ ನಿಧಿ ದೇಶದ ಲಕ್ಷಾಂತರ ನೌಕರರ ಆಧಾರಸ್ತಂಭವೆಂದರೂ ತಪ್ಪಾಗಲಾರದು. ಕಷ್ಟದ ದಿನಗಳಲ್ಲಿ ಆಪತ್ಭಾಂದವನಂತೆ ಇದು ಕೆಲಸ ಮಾಡುತ್ತದೆ. ನೌಕರರು ಭವಿಷ್ಯದ ಅಗತ್ಯಗಳಿಗಾಗಿ ಇದರಲ್ಲಿ ಹಣ ಕೂಡಿಡುತ್ತಾರೆ. ಹಾಗೆ ಕೂಡಿಟ್ಟ ಹಣವನ್ನು ಹಿಂಪಡೆಯಲು ಸುದೀರ್ಘ ಪ್ರಕ್ರಿಯೆಯನ್ನು ಕೈಗೊಳ್ಳಬೇಕಾಗಿತ್ತದೆ ಎಂಬುದೂ ಅಷ್ಟೇ ನಿಜ. ಇದರಲ್ಲಿ ಕಾಗದಪತ್ರಗಳು, ಕಂಪನಿಯ ಅನುಮೋದನೆ, ದಿನಗಟ್ಟಲೆ ಕಾಯುವಿಕೆ ಹೀಗೆ ಹತ್ತು ಹಲವು ತೊಡಕುಗಳಿವೆ. ಇದನ್ನೆಲ್ಲಾ ಬಗೆಹರಿಸುವ ಸಲುವಾಗಿ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ವ್ಯವಸ್ಥೆಯನ್ನು ಅಪ್‌ಗ್ರೇಡ್‌ ಮಾಡಲು ಮತ್ತು ಇಪಿಎಫ್‌ಒ 3.0 ಪರಿಚಯಿಸಲು ತಯಾರಿ ನಡೆಸುತ್ತಿದೆ. ಪಿಎಫ್‌ ಖಾತೆಯನ್ನು ಸಹ ಬ್ಯಾಂಕ್‌ ಖಾತೆಯಂತೆ ಸುಲಭವಾಗಿ ನಿರ್ವಹಿಸುವಂತೆ ಮಾಡಲು ಮುಂದಾಗಿದೆ. ಇದರಿಂದ ತೊಡಕು ಎನಿಸಿದ್ದ ಹಣ ಹಿಂಪಡೆಯುವ ಪ್ರಕ್ರಿಯೆ ಬಹಳ ಸುಲಭವಾಗಲಿದೆ. ಹೇಗೆ ಇಲ್ಲಿದೆ ಓದಿ.

ಪಿಎಫ್‌ನಿಂದ ಹಣ ಹಿಂಪಡೆಯುದು ಹೇಗೆ?

ಪಿಎಫ್‌ನಲ್ಲಿ ಕೂಡಿಟ್ಟ ಹಣ ಹಿಂಪಡೆಯುವುದು ಅಷ್ಟು ಸುಲಭವಲ್ಲ. ಅದಕ್ಕೆ ಕಾಗದಪತ್ರಗಳನ್ನು ಒದಗಿಸುವುದು, ಕಂಪನಿಯ ಅನುಮತಿ ಇತ್ಯಾದಿ ಪ್ರಮಖ ಕೆಲಸಗಳನ್ನು ಮಾಡಬೇಕು. ಇದರಿಂದ ಬಹಳಷ್ಟು ಸಮಯ ವ್ಯಯವಾಗುತ್ತಿತ್ತು. ತಕ್ಷಣಕ್ಕೆ ಹಣ ಬೇಕಾದಾಗ ಪಡೆಯುವುದು ಕಷ್ಟವಾಗಿತ್ತು. ಇದಕ್ಕಾಗಿ ಇಪಿಎಫ್‌ಒ 3.0 ಅಡಿಯಲ್ಲಿ ಡಿಜಿಟಲ್‌, ಕೋರ್‌–ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಇದರಿಂದ ಪಿಎಫ್‌ ಬ್ಯಾಲೆನ್ಸ್‌ ಪರೀಕ್ಷಿಸಿ, ತಕ್ಷಣ ಕ್ಲೈಮ್‌ ಸಲ್ಲಿಸಿ, ಹಣವನ್ನು ತ್ವರಿತವಾಗಿ ಪಡೆಯಬಹುದು.

ಕಾರ್ಡ್ ಅಥವಾ ಯುಪಿಐ ಮೂಲಕವೂ ಹಣ ಹಿಂಪಡೆಯಬಹುದು

ಹೊಸ ವ್ಯವಸ್ಥೆಯ ಅತಿ ದೊಡ್ಡ ಬದಲಾವಣೆಯೆಂದರೆ ಪಿಎಫ್‌ ಹಣವನ್ನು ಕಾರ್ಡ್‌ ಅಥವಾ ಯುಪಿಎ ಬಳಸಿ ಹಿಂಪಡೆಯಬಹುದು. ಆದರೆ ಈ ಸೌಲಭ್ಯ ಸಂಪೂರ್ಣ ಉಚಿತವಲ್ಲ. ಅದನ್ನು ವೈದ್ಯಕೀಯ ತುರ್ತು ಪರಿಸ್ಥಿತಿಗಳು, ಮನೆ ಖರೀದಿ, ಶಿಕ್ಷಣ ಇತ್ಯಾದಿ ನಿಯಮಗಳ ಅಡಿಯಲ್ಲಿ ಮಾತ್ರ ಹಣ ಹಿಂಪಡೆಯಬಹುದು. ಅಂದರೆ ತ್ವರಿತವಾಗಿ ಹಿಂಪಡೆಯುವ ಅನುಕೂಲವಿದ್ದರೂ ನಿಯಮಗಳು ಅನ್ವಯವಾಗುತ್ತವೆ. ಇದರಲ್ಲಿ ಒಂದು ಅನುಕೂಲವೆಂದರೆ ಕ್ಲೈಮ್‌ ಮಾಡಿಕೊಳ್ಳುವ ಪ್ರಕ್ರಿಯೆ ವೇಗವಾಗಿರುತ್ತದೆ. ಆಧಾರ್‌ ಮತ್ತು ಇಕೆವೈಸಿ ಯಿಂದ ಈ ಪ್ರಕ್ರಿಯೆಯನ್ನು ಸ್ವಯಂಚಾಲನೆಗೊಳ್ಳುವಂತೆ ಮಾಡಲಾಗುತ್ತದೆ. ಇದರಿಂದ ಉದ್ಯೋಗ ಬದಲಾಯಿಸಿದರೆ ಪಿಎಫ್‌ ಸ್ವಯಂಚಾಲಿತವಾಗಿ ವರ್ಗಾವಣೆಗೊಳ್ಳುತ್ತದೆ. ಪದೇ ಪದೇ ಅರ್ಜಿ ಸಲ್ಲಿಸುವುದು ತಪ್ಪುತ್ತದೆ.

ಇದನ್ನೂ ಓದಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2026: ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ್ರೆ ರೈತರಿಗೆ ಸಿಗಲಿದೆ ಪರಿಹಾರ

ಹೊಸ ಬದಲಾವಣೆಯಿಂದ ಆಗುವ ನಷ್ಟವೇನು?

ತಜ್ಞರ ಪ್ರಕಾರ, ಇದು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಹೇಗೆಂದರೆ ಮೂಲಭೂತವಾಗಿ ಪಿಎಫ್‌ ಹಣ ಇರುವುದು ನಿವೃತ್ತಿಯ ನಂತರದ ಜೀವನ ನಡೆಸುವ ಸಲುವಾಗಿ. ಹೀಗೆ ಹಿಂಪಡೆಯುವ ಪ್ರಕ್ರಿಯೆ ಸುಲಭಗೊಳಿಸಿದಾಗ, ಚಿಕ್ಕಪುಟ್ಟ ಅಗತ್ಯಗಳಿಗೂ ಪಿಎಫ್‌ ಹಣ ಹಿಂಪಡೆದು ಭವಿಷ್ಯದಲ್ಲಿ ತೊಂದರೆ ಎದುರಾಗುವ ಸಂಭವವಿರುತ್ತದೆ. ಡಿಜಟಲ್‌ ಆಗುವುದರಿಂದ ಸೈಬರ್‌ ವಂಚನೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಇದಕ್ಕೂ ಕೂಡಾ ಬ್ಯಾಂಕ್‌ ಖಾತೆಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವಂತೆ ಇದಕ್ಕೂ ಎಚ್ಚರಿಕೆ ಅಗ್ಯವಾಗಬಹುದು.

 

 

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories