ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ವಿಳಂಬ ದಾಖಲಾತಿಗೂ ದಂಡ ಇಲ್ಲ
ರಾಜ್ಯ ಸರ್ಕಾರವು 2026 27ನೇ ಶೈಕ್ಷಣಿಕ ಸಾಲಿನಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪಿಯುಸಿ ವಿಳಂಬ ದಾಖಲಾತಿಗೆ ವಿಧಿಸಲಾಗುತ್ತಿದ್ದ ದಂಡವನ್ನು ರದ್ದುಪಡಿಸಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ.

ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ. 2026 27ನೇ ಶೈಕ್ಷಣಿಕ ವರ್ಷದಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ವಿಳಂಬವಾಗಿ ದಾಖಲಾಗುವ ವಿದ್ಯಾರ್ಥಿಗಳಿಂದ ದಂಡ ಶುಲ್ಕ ವಸೂಲಿ ಮಾಡುವ ಪದ್ಧತಿಯನ್ನು ಸರ್ಕಾರ ಸಂಪೂರ್ಣವಾಗಿ ಹಿಂಪಡೆದಿದೆ.
ಇದುವರೆಗೆ ದಾಖಲಾತಿ ಅವಧಿ ಮುಗಿದ ಬಳಿಕ 10 ದಿನಗಳೊಳಗೆ ಪ್ರವೇಶ ಪಡೆದರೆ 670 ರೂ. ಹಾಗೂ 20 ದಿನಗಳೊಳಗೆ ದಾಖಲಾತಿ ಮಾಡಿಕೊಂಡರೆ 2,220 ರೂ. ವಿಶೇಷ ದಂಡವನ್ನು ಪಾವತಿಸಬೇಕಾಗುತ್ತಿತ್ತು. ಈಗ ಈ ಎರಡೂ ದಂಡಗಳನ್ನು ರದ್ದುಪಡಿಸಲಾಗಿದ್ದು, ಸಾಮಾನ್ಯ ದಾಖಲಾತಿ ಶುಲ್ಕವನ್ನು ಮಾತ್ರ ಪಾವತಿಸಿದರೆ ಸಾಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಕ್ರಮಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪದವಿ ಪೂರ್ವ ವಿಭಾಗದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಆರ್ಥಿಕ ಇಲಾಖೆಯ ಅನುಮತಿಯೊಂದಿಗೆ ರಾಜ್ಯಪಾಲರ ಆದೇಶದಂತೆ ಜಾರಿಗೆ ತರಲಾಗಿದೆ.
ಸರ್ಕಾರದ ಪ್ರಕಾರ, ಹೆಚ್ಚಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬರುತ್ತಿದ್ದಾರೆ. ವಿಳಂಬ ದಾಖಲಾತಿ ದಂಡ ಪಾವತಿಸಲು ಸಾಧ್ಯವಾಗದೆ ಕೆಲವರು ಶಿಕ್ಷಣದಿಂದ ದೂರ ಉಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.
ಈ ನಿರ್ಧಾರದಿಂದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ದೊರೆಯಲಿದೆ. ಹೆಚ್ಚುವರಿ ದಂಡದ ಹೊರೆ ತಪ್ಪುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ದಾಖಲಾತಿ ಮಾಡಿಕೊಳ್ಳಲು ಮುಂದಾಗುವ ನಿರೀಕ್ಷೆಯಿದೆ.
ಶಿಕ್ಷಣ ಎಲ್ಲರಿಗೂ ಸುಲಭವಾಗಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಿಂದ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಕಡಿಮೆಯಾಗಲಿದ್ದು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ದಾಖಲಾತಿ ಪ್ರಮಾಣವೂ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.

