ನಾಟಿ ಕೋಳಿ ಮೊಟ್ಟೆಗೆ ಫುಲ್ ಡಿಮ್ಯಾಂಟ್ : ಗಗನಕ್ಕೇರಿದ ಮೊಟ್ಟೆ ದರ..!
ಕೋಳಿ ಮೊಟ್ಟೆಯಲ್ಲಿ ಕ್ಯಾನ್ಸರ್ಕಾರಕ ಅಂಶ ಇದೆ ಎಂಬ ಅಪವಾದ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದಾದ ಬಳಿಕ ಈ ರೀತಿಯ ಯಾವುದೇ ಹಾನಿಕಾರಕ ಅಂಶ ಮೊಟ್ಟೆಯಲ್ಲಿಲ್ಲ ಎಂಬುದೂ ಸಾಬೀತಾಗಿತ್ತು. ಈ ಎಲ್ಲದರ ನಡುವೆ ಇದೀಗ ನಾಟಿಕೋಳಿ ಮೊಟ್ಟೆಗೆ ಡಿಮ್ಯಾಂಡ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಫಾರಂ ಕೋಳಿ ಮೊಟ್ಟೆಯ ದರಕ್ಕಿಂತ ನಾಟಿ ಕೋಳಿ ಮೊಟ್ಟೆಯ ದರ ದುಪ್ಪಾಟಾದರೂ ಸಹ ಜನ ಮುಗಿಬಿದ್ದು ಖರೀದಿ ಮಾಡ್ತಿದ್ದಾರೆ.
ನಾಟಿ ಕೋಳಿ ಮೊಟ್ಟೆಗಳು ಸದ್ಯ ಮಾರುಕಟ್ಟೆಯಲ್ಲಿ ಒಂದಕ್ಕೆ 15 ರಿಂದ 20 ರೂಪಾಯಿ ಇದೆ. ಫಾರಂ ಕೋಳಿ ಮೊಟ್ಟೆ ದರವು ಹೋಲ್ಸೇಲ್ನಲ್ಲಿ 6.50 ರೂಪಾಯಿಗೆ ಲಭ್ಯವಿದ್ದು , ಅಂಗಡಿಗಳಲ್ಲಿ 7.50 ರೂಪಾಯಿಗೆ ಲಭ್ಯವಿದೆ. ನಾಟಿಕೋಳಿ ಮೊಟ್ಟೆಗಳು ಎಲ್ಲಾ ಕಡೆ ಸಿಗುವುದದಿಲ್ಲ. ಗ್ರಾಮೀಣ ಭಾಗದಲ್ಲಿ ಮಾತ್ರ ನಾಟಿ ಕೋಳಿ ಮೊಟ್ಟೆ ಹೆಚ್ಚಾಗಿ ಲಭ್ಯವಿರುತ್ತದೆ. ಆದರೂ ಜನರು ಹುಡುಕಿಕೊಂಡು ಹೋಗಿ ನಾಟಿಕೋಳಿ ಮೊಟ್ಟೆ ಖರೀದಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಾವು ಬೆಳೆಗಾರರಿಗೆ ಕಂಟಕವಾಯ್ತು ಕೊರೆಯುವ ಚಳಿ : ಈ ಬಾರಿ ಇಳುವರಿ ಭಾರೀ ಕುಸಿತ
ಮೂಳೆಯ ಬೆಳವಣಿಗೆ, ಉತ್ತಮ ಪೌಷ್ಠಿಕಾಂಶ, ಆರೋಗ್ಯಕ್ಕೆ ಉತ್ತಮ ಎಂದು ವೈದ್ಯರು ಮನವರಿಕೆ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ನಾಟಿಕೋಳಿ ಮೊಟ್ಟೆಗಳಿಗೆ ಡಿಮ್ಯಾಂಡ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಾಟಿಕೋಳಿ ಮೊಟ್ಟೆ ಖರೀದಿ ಪ್ರಕ್ರಿಯೆ ಹೆಚ್ಚಾದ ಬೆನ್ನಲ್ಲೇ ಫಾರಂ ಕೋಳಿ ಮೊಟ್ಟೆಯ ದರ ಸದ್ಯಕ್ಕೆ ಸ್ಥಿರತೆ ಕಾಯ್ದುಕೊಂಡಿದೆ.



