ಇರಾನ್ ಯುದ್ಧದ ಎಫೆಕ್ಟ್ : ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಮಾಡಲಾಗಿದೆ ಈ ಬಹುಮುಖ್ಯ ಬದಲಾವಣೆ
ಭಾರತಕ್ಕೆ ಇಂಧನ ಪೂರೈಕೆ ಮಾಡುತ್ತಿದ್ದ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಭಾರತದಲ್ಲಿ ತೈಲ ಬೆಲೆ ಏರಿಕೆ ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಎಫೆಕ್ಟ್ ಭಾರತಕ್ಕೂ ತಟ್ಟುತ್ತಿದೆ. ಇರಾನ್ನಲ್ಲಿ ಯುದ್ಧದ ಭೀತಿಯಿಂದಾಗಿ ಇಂಧನ ಬಿಕ್ಕಟ್ಟು ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್ ರಿಫಿಲ್ಲಿಂಗ್ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಏರಿಕೆ ಮಾಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಭಾರತಕ್ಕೆ ಇಂಧನ ಪೂರೈಕೆ ಮಾಡುತ್ತಿದ್ದ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಭಾರತದಲ್ಲಿ ತೈಲ ಬೆಲೆ ಏರಿಕೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಇರಾನ್ ಈ ಮಾರ್ಗವು ಅಮೆರಿಕ, ಇಸ್ರೇಲ್, ಯುರೋಪ್ ಹಾಗೂ ಅಮೆರಿಕದ ಮಿತ್ರ ರಾಷ್ಟ್ರಗಳಿಗೆ ಮಾತ್ರ ಮುಚ್ಚಲ್ಪಟ್ಟಿದೆ ಎಂದು ಹೇಳಿದೆ. ಶೀಘ್ರದಲ್ಲೇ ಹಾರ್ಮೋಜ್ ಜಲಸಂಧಿಯನ್ನು ಪುನಾರಂಭಿಸುವ ಯಾವುದೇ ಸಾಧ್ಯತೆಯಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.
ಆದರೆ ಭಾರತೀಯರು ಇದರಿಂದ ಭಯಪಡುವ ಅಗತ್ಯವಿಲ್ಲ. ಅಮೆರಿಕದ ಮೇಲಾದ ಪರಿಣಾಮ ಭಾರತದ ಮೇಲಾಗುವುದಿಲ್ಲ. ನಾವು ಇತರೆ ಅನೇಕ ದೇಶಗಳಿಗಿಂತ ಉತ್ತಮ ಸ್ಥಾನದಲ್ಲಿದ್ದೇವೆ. ಉದಾಹರಣೆಗೆ ಪಾಕಿಸ್ತಾನವನ್ನೇ ನೋಡಿ ಎಂದು ಇರಾನ್ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ .
ದೇಶದ ಪ್ರತಿಯೊಂದು ಪೆಟ್ರೋಲ್ ಪಂಪ್ಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ ಸದ್ಯಕ್ಕೆ ಸಾಕಷ್ಟು ದಾಸ್ತಾನು ಇದೆ. ಭಾರತವು ವಿಮಾನದ ಟರ್ಬೈನ್ ಇಂಧನ ಅಥವಾ ಎಟಿಎಫ್ನ ಸಾಕಷ್ಟು ದಾಸ್ತಾನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ಎಲ್ಲಾ ಸಂಸ್ಕರಣಾಗಾರಗಳಿಗೆ ಸರ್ಕಾರ ನಿರ್ದೇಶನ ನೀಡಿರುವುದರಿಂದ ಎಲ್‌ಪಿಜಿ ಸಂಗ್ರಹಣೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಸಂಸ್ಕರಣಾಗಾರಗಳು ವಾಣಿಜ್ಯ ಅಥವಾ ಕೈಗಾರಿಕಾ ಬಳಕೆಗೆ ಬದಲಾಗಿ ದೇಶೀಯ ಬಳಕೆಗೆ ಎಲ್‌ಪಿಜಿಗೆ ಆದ್ಯತೆ ನೀಡುವಂತೆ ಆದೇಶ ನೀಡಲಾಗಿದೆ.
ಇದನ್ನೂ ಓದಿ: ಅಡುಗೆ ಮನೆಗೆ ಬೆಲೆ ಏರಿಕೆ ಶಾಕ್: ಸಿಲಿಂಡರ್ ಬೆಲೆ ₹ 900 ದಾಟಿದೆ ! ಏಪ್ರಿಲ್‌ನಲ್ಲಿ ಮತ್ತಷ್ಟು ಹೆಚ್ಚಳ ?
ಕಚ್ಚಾತೈಲದ ಬೆಲೆ ಬ್ಯಾರೆಲ್ 130 ಡಾಲರ್ ಮೀರದ ಹೊರತು ದೇಶದಲ್ಲಿ ಎಂದಿಗೂ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆ ಕಂಡುಬರುವ ಸಾಧ್ಯತೆಯಿಲ್ಲ. ಕಚ್ಚಾತೈಲದ ಬೆಲೆಯು ಬ್ಯಾರೆಲ್ಗೆ 100 ಡಾಲರ್ನ ಆಸುಪಾಸು ಇರಬಹುದು ಎಂದು ಮೂಲಗಳು ಮಾಹಿತಿ ನೀಡಿವೆ. ಹೀಗಾಗಿ ಭಾರತದ ಯಾವುದೇ ಪೆಟ್ರೋಲ್ ಪಂಪ್ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಸಮಸ್ಯೆ ಇಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.



