ಪಿಎಂ ಕಿಸಾನ್ 22ನೇ ಕಂತು: 2,000 ಪಡೆಯಲು ಹೀಗೆ ಮಾಡುವುದು ಕಡ್ಡಾಯ
PM-KISAN 22nd instalment: ದೇಶದ ಕೋಟ್ಯಂತರ ರೈತರು ಎದುರುನೋಡುತ್ತಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 22ನೇ ಕಂತಿನ ಹಣ ಬಿಡುಗಡೆಗೆ ಸಿದ್ಧತೆಗಳು ಆರಂಭವಾಗಿವೆ. ಆದರೆ, ಈ ಬಾರಿ ಹಣ ಪಡೆಯಲು ಕೇವಲ e-KYC ಮಾತ್ರವಲ್ಲದೆ, ‘ವಿಶಿಷ್ಟ ರೈತ ಗುರುತಿನ ಚೀಟಿ’ (Unique Farmer ID) ಹೊಂದುವುದು ಕಡ್ಡಾಯವಾಗಿದೆ.
22ನೇ ಕಂತು ಯಾವಾಗ?: 21ನೇ ಕಂತಿನ ಹಣ ನವೆಂಬರ್ 19, 2025ರಂದು ಬಿಡುಗಡೆಯಾಗಿತ್ತು. ನಿಯಮದಂತೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹಣ ಬರುವುದರಿಂದ, 22ನೇ ಕಂತಿನ ₹2,000 ಮೊತ್ತವು ಫೆಬ್ರವರಿ ಅಥವಾ ಮಾರ್ಚ್ 2026 ರ ಅವಧಿಯಲ್ಲಿ ರೈತರ ಖಾತೆಗೆ ಜಮೆಯಾಗುವ ಸಾಧ್ಯತೆಯಿದೆ.
ರೈತ ಐಡಿ ಕಡ್ಡಾಯ: ನೀವು ಈಗಾಗಲೇ e-KYC ಪೂರ್ಣಗೊಳಿಸಿದ್ದರೂ ಸಹ, ಸರ್ಕಾರ ನೀಡುವ ‘ವಿಶಿಷ್ಟ ರೈತ ಐಡಿ’ ಇಲ್ಲದಿದ್ದರೆ ಹಣ ಸ್ಥಗಿತಗೊಳ್ಳಬಹುದು. ಯೋಜನೆಯಲ್ಲಿ ಪಾರದರ್ಶಕತೆ ತರಲು ಮತ್ತು ಅನರ್ಹರನ್ನು ಕೈಬಿಡಲು ಕೇಂದ್ರ ಸರ್ಕಾರ ಈ ಹೊಸ ಡಿಜಿಟಲ್ ಐಡಿಯನ್ನು ಪರಿಚಯಿಸಿದೆ.
ಕರ್ನಾಟಕದ ರೈತರಿಗೆ ಲಾಭ: ಕರ್ನಾಟಕದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ‘ಫ್ರೂಟ್ಸ್’ (FRUITS) ಐಡಿಯನ್ನೇ ಮಾದರಿಯಾಗಿಟ್ಟುಕೊಂಡು ದೇಶಾದ್ಯಂತ ಈ ವಿಶಿಷ್ಟ ಐಡಿ ಜಾರಿಗೊಳಿಸಲಾಗುತ್ತಿದೆ.
ಹಣ ಸಿಗಬೇಕಾದರೆ ರೈತರು ಮಾಡಬೇಕಾದ ಕೆಲಸಗಳು:
e-KYC ಪೂರ್ಣಗೊಳಿಸಿ: ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಒಟಿಪಿ (OTP) ಮೂಲಕ ಅಥವಾ ಸಿಎಸ್‌ಸಿ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಮಾಡಿಸಿ.
ಆಧಾರ್ ಸೀಡಿಂಗ್: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದನ್ನು (NPCI Mapping) ಖಚಿತಪಡಿಸಿಕೊಳ್ಳಿ.
ರೈತ ಐಡಿ ಪಡೆಯಿರಿ: ಅಧಿಕೃತ ವೆಬ್‌ಸೈಟ್ ಅಥವಾ ಹತ್ತಿರದ ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ನಿಮ್ಮ ವಿಶಿಷ್ಟ ರೈತ ಐಡಿ ಸಕ್ರಿಯವಾಗಿದೆಯೇ ಎಂದು ಪರೀಕ್ಷಿಸಿ.
ಫೆಬ್ರವರಿ 24, 2019 ರಂದು ಆರಂಭವಾದ ಈ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕವಾಗಿ ₹6,000 (ಮೂರು ಕಂತುಗಳಲ್ಲಿ) ನೀಡಲಾಗುತ್ತದೆ. ಇದುವರೆಗೆ 21 ಕಂತುಗಳನ್ನು ಯಶಸ್ವಿಯಾಗಿ ವಿತರಿಸಲಾಗಿದ್ದು, ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಬ್ಯಾಂಕ್ ಖಾತೆಗೆ ಹಣ ತಲುಪುತ್ತಿದೆ.



