ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೊಸ ನಿಯಮ! ಜುಲೈ 1 ರಿಂದ ಹೊಸ ರೂಲ್ಸ್ ಜಾರಿ

ಎಸ್‌ಬಿಐ ಹಾಗೂ ಫೋನ್‌ಪೇ ಸಹಭಾಗಿತ್ವದ ಕೆಲವು ಕ್ರೆಡಿಟ್ ಕಾರ್ಡ್‌ಗಳ ರಿವಾರ್ಡ್ ಪಾಯಿಂಟ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಜುಲೈ 1ರಿಂದ ಹೊಸ ನಿಯಮ ಜಾರಿಗೆ ಬಂದು ಗ್ರಾಹಕರಿಗೆ ಕಡಿಮೆ ಲಾಭ ಸಿಗಲಿದೆ.

ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಫೋನ್‌ಪೇ ಸಹಭಾಗಿತ್ವದಲ್ಲಿ ನೀಡಲಾಗುತ್ತಿರುವ ಕೆಲವು ಕ್ರೆಡಿಟ್ ಕಾರ್ಡ್‌ಗಳ ರಿವಾರ್ಡ್ ಪಾಯಿಂಟ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಜುಲೈ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.

ಈ ಬದಲಾವಣೆಯಿಂದ ಫೋನ್‌ಪೇ ಎಸ್‌ಬಿಐ ಪರ್ಪಲ್ ಹಾಗೂ ಫೋನ್‌ಪೇ ಎಸ್‌ಬಿಐ ಸೆಲೆಕ್ಟ್ ಬ್ಲಾಕ್ ಕಾರ್ಡ್ ಬಳಕೆದಾರರ ಮೇಲೆ ನೇರ ಪರಿಣಾಮ ಬೀಳಲಿದೆ. ಇದುವರೆಗೆ ಲಭ್ಯವಾಗುತ್ತಿದ್ದ ರಿವಾರ್ಡ್ ಪಾಯಿಂಟ್‌ಗಳನ್ನು ಕಡಿಮೆ ಮಾಡುವ ನಿರ್ಧಾರವನ್ನು ಎಸ್‌ಬಿಐ ಕಾರ್ಡ್ ಪ್ರಕಟಿಸಿದೆ.

ಫೋನ್‌ಪೇ ಎಸ್‌ಬಿಐ ಪರ್ಪಲ್ ಕಾರ್ಡ್ ಹೊಂದಿರುವ ಗ್ರಾಹಕರು ಹಿಂದೆ ಆನ್‌ಲೈನ್ ಖರೀದಿಗಳ ಮೇಲೆ ತಿಂಗಳಿಗೆ 1,000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುತ್ತಿದ್ದರು. ಫೋನ್‌ಪೇ ಮೂಲಕ ಮಾಡಿದ ವಹಿವಾಟುಗಳಿಗೂ ಹೆಚ್ಚುವರಿ 1,000 ಪಾಯಿಂಟ್‌ಗಳು ಸಿಗುತ್ತಿತ್ತು. ಆದರೆ ಹೊಸ ನಿಯಮದಂತೆ ಆನ್‌ಲೈನ್ ಖರ್ಚಿನ ರಿವಾರ್ಡ್ ಮಿತಿ 1,000ರಿಂದ 750 ಪಾಯಿಂಟ್‌ಗಳಿಗೆ ಇಳಿಕೆಯಾಗಿದೆ.

ಇದಲ್ಲದೆ, ಫೋನ್‌ಪೇ ಮೂಲಕ ಮಾಡುವ ವಿಮೆ ಸಂಬಂಧಿತ ಪಾವತಿಗಳಿಗೆ ಗರಿಷ್ಠ 250 ಪಾಯಿಂಟ್‌ಗಳು ಹಾಗೂ ಇತರೆ ವಹಿವಾಟುಗಳಿಗೆ 750 ಪಾಯಿಂಟ್‌ಗಳ ಮಿತಿಯನ್ನು ನಿಗದಿಪಡಿಸಲಾಗಿದೆ. ಈ ಬದಲಾವಣೆ ಜುಲೈ 1ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

ಫೋನ್‌ಪೇ ಎಸ್‌ಬಿಐ ಸೆಲೆಕ್ಟ್ ಬ್ಲಾಕ್ ಕಾರ್ಡ್ ಬಳಕೆದಾರರಿಗೂ ಇದೇ ರೀತಿಯ ಹೊಡೆತ ಬಿದ್ದಿದೆ. ಮೊದಲು ಫೋನ್‌ಪೇ ವಹಿವಾಟುಗಳ ಮೇಲೆ 2,000 ರಿವಾರ್ಡ್ ಪಾಯಿಂಟ್‌ಗಳು ದೊರೆಯುತ್ತಿದ್ದರೆ, ಈಗ ಆನ್‌ಲೈನ್ ಖರ್ಚುಗಳಿಗೆ 1,000 ಪಾಯಿಂಟ್‌ಗಳಷ್ಟೇ ಸಿಗಲಿವೆ. ವಿಮೆ ಪಾವತಿಗಳಿಗೆ 500 ಪಾಯಿಂಟ್ ಹಾಗೂ ಇತರೆ ವೆಚ್ಚಗಳಿಗೆ 1,500 ಪಾಯಿಂಟ್‌ಗಳ ಮಿತಿ ವಿಧಿಸಲಾಗಿದೆ.

ಕೆಲವು ವಹಿವಾಟುಗಳಿಗೆ ರಿವಾರ್ಡ್ ಪಾಯಿಂಟ್ ಸೌಲಭ್ಯವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಟೋಲ್ ಮತ್ತು ಬ್ರಿಡ್ಜ್ ಪಾವತಿಗಳು, ಗಿಫ್ಟ್ ಮತ್ತು ಸುವಿನೀರ್ ಖರೀದಿಗಳು, ಆಭರಣ ವಹಿವಾಟುಗಳು, ಶಿಕ್ಷಣ ಸಂಸ್ಥೆಗಳ ಪಾವತಿಗಳು, ಫೋನ್‌ಪೇ ಹೊರತಾಗಿ ಮಾಡುವ ಯುಟಿಲಿಟಿ, ವಿಮೆ ಹಾಗೂ ಯುಪಿಐ ವಹಿವಾಟುಗಳಿಗೆ ಇನ್ನು ಮುಂದೆ ಯಾವುದೇ ರಿವಾರ್ಡ್ ಪಾಯಿಂಟ್‌ಗಳು ಸಿಗುವುದಿಲ್ಲ.

ಈ ಬದಲಾವಣೆಗಳ ಬಗ್ಗೆ ಎಸ್‌ಬಿಐ ಕಾರ್ಡ್ ತನ್ನ ಗ್ರಾಹಕರಿಗೆ ಈಗಾಗಲೇ ಸಂದೇಶಗಳನ್ನು ಕಳುಹಿಸುತ್ತಿದ್ದು, ಹೊಸ ನಿಯಮಗಳ ಕುರಿತು ಮಾಹಿತಿ ನೀಡುತ್ತಿದೆ. ರಿವಾರ್ಡ್ ಪಾಯಿಂಟ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದ ಬಳಕೆದಾರರಿಗೆ ಈ ನಿರ್ಧಾರ ನಿರಾಸೆ ಉಂಟುಮಾಡಿದೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories