puneeth rajkumar :ಅಪ್ಪು ಇಲ್ಲದ ಒಂದು ವರ್ಷ : ವಿಧಿ ಒಂದು ಪವಾಡ ಮಾಡಬಾರದೇ ಅಂತಿದ್ದಾರೆ ಕರುನಾಡಿನ ಜನ

puneeth rajkumar : ಕರುನಾಡಿನ ಪಾಲಿಗೆ ಎಂದಿಗೂ ಮರೆಯದ ಧೃವ ತಾರೆ, ಅಭಿಮಾನಿಗಳ ಪಾಲಿನ ನೆಚ್ಚಿನ ಅಪ್ಪು, ಆಕಾಶ ನೋಡದ ಕೈ, ಬೇಡಿ ಬಂದವರನ್ನು ಬರಿಗೈಲಿ ಕಳಿಸದ ಸಾಹುಕಾರ ಕರ್ನಾಟಕ ರತ್ನ ಪುನೀತ್​ ರಾಜ್​ಕುಮಾರ್​ ನಮ್ಮನ್ನೆಲ್ಲ ಅಗಲಿ ಭರ್ತಿ ಒಂದು ವರ್ಷ ತುಂಬಿದೆ . ಪುನೀತ್​ ಇನ್ನಿಲ್ಲ ಎಂಬ ಕಹಿಸತ್ಯವನ್ನು ಅರಗಿಸಿಕೊಳ್ಳುತ್ತಿರುವ ಪ್ರಯತ್ನದಲ್ಲಿರುವಾಗಲೇ ಅದಾಗಲೇ ಒಂದು ವರ್ಷವೇ ಕಳೆದುಹೋಗಿದೆ. ವಿಧಿಯ ಜೊತೆ ಗಲಾಟೆ ಮಾಡಿಕೊಂಡು ಅಪ್ಪು ಒಮ್ಮೆ ಮರಳಿ ಬರಬಾರದೇ ಎಂಬ ಪ್ರಾರ್ಥನೆ ಪ್ರತಿಯೊಬ್ಬ ಕನ್ನಡಿಗನ ಎದೆಯಲ್ಲಿ ಮೊಳಗುತ್ತಿದೆ.


ಆ ನಿಷ್ಕಲ್ಮಶ ನಗು, ದೊಡ್ಮನೆಯ ಕುಡಿಯಾಗದರೂ ಭೂಮಿ ತೂಕದ ಸರಳತೆ, ನಟನೆಂಬ ಯಾವುದೇ ಹಮ್ಮು ಬಿಮ್ಮು ಇಲ್ಲದ ಸಿಂಪಲ್​ ವ್ಯಕ್ತಿತ್ವ ಪುನೀತ್​ರದ್ದು. ಅವರು ವಿಧಿವಶರಾಗುವವರೆಗೂ ಪುನೀತ್​ ಇಷ್ಟು ದೊಡ್ಡ ಮಟ್ಟದಲ್ಲಿ ಶಿಕ್ಷಣಕ್ಕೆ, ಅನಾಥರಿಗೆ ಸೇವೆ ಮಾಡುತ್ತಿದ್ದರು ಎಂಬ ವಿಚಾರ ಸ್ವತಃ ಅವರ ಕುಟುಂಬಕ್ಕೇ ತಿಳಿದಿರಲಿಲ್ಲ. ಅಷ್ಟರ ಮಟ್ಟಿಗೆ ಪ್ರಚಾರವನ್ನು ಇಷ್ಟಪಡದ ವ್ಯಕ್ತಿ ಪುನೀತ್​ ದಿವ್ಯ ಚೇತನ ದೇವರಂತೆ ಬದುಕಿ ದೇವರಾಗಿಯೇ ತೆರಳಿದ್ದಾರೆ.


ಪುನೀತ್​ ದೈಹಿಕವಾಗಿ ನಮ್ಮೊಂದಿಗಿಲ್ಲ ಅನ್ನೋದನ್ನು ಎಷ್ಟು ಕಷ್ಟಪಟ್ಟರೂ ಜೀರ್ಣಮಾಡಿಕೊಳ್ಳಲು ಸಾಧ್ಯವಾಗೋದೇ ಇಲ್ಲ. ಕಳೆದ ವರ್ಷ ಈ ದಿನದಂದು ಇಡೀ ಕರುನಾಡೇ ದುಃಖದ ಕೋಡಿಯಲ್ಲಿ ತೇಲಿತ್ತು. ಇಂದೂ ಕೂಡ ಪ್ರತಿ ಮನೆಯಲ್ಲಿಯೂ ಸ್ವಂತ ಮಗನನ್ನೇ ಕಳೆದುಕೊಂಡು ನೋವು ಹಾಗೆಯೇ ಇದೆ. ಒಮ್ಮೆ ಅಪ್ಪು ಮರಳಿ ಬಂದು ಬಿಡಬಾರದೇ..? ಅಭಿಮಾನಿಗಳ ಎದುರು ಮತ್ತೊಮ್ಮೆ ಪ್ರತ್ಯಕ್ಷವಾಗಬಾರದೇ ಎಂಬ ಸಣ್ಣ ಆಸೆ ಎಲ್ಲರಲ್ಲೂ ಇದೆ.
ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್​​ ನಿವಾಸದಲ್ಲಿ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಪುನೀತ್​ ಮಾರನೇ ದಿನ ಜಿಮ್​ ಮಾಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ವಿಧಿಯಾಟವನ್ನು ಗೆಲ್ಲಲು ಪುನೀತ್​ರಿಂದ ಸಾಧ್ಯವಾಗಿರಲಿಲ್ಲ. ಪುನೀತ್​ ಇನ್ನಿಲ್ಲ ಎಂಬ ಕಹಿಸತ್ಯ ಬರಿಸಿಡಿಲಿನಂತೆ ಬಂದೆರಗಿತ್ತು. ಇಂದು ಈ ಅಪ್ಪು ಅಗಲಿ ಒಂದು ವರ್ಷ ಕಳೆದಿದೆ.


ಪುನೀತ್​ ಪ್ರಥಮ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಪ್ಪು ಸಮಾಧಿಯನ್ನು ವಿಶೇಷ ಪುಷ್ಪಾಲಂಕಾರದ ಮೂಲಕ ಸಿಂಗರಿಸಲಾಗಿದೆ. ರಾತ್ರಿಯಿಂದಲೇ ಅಭಿಮಾನಿಗಳ ದಂಡು ಪುನೀತ್​​ ಸಮಾಧಿಯತ್ತ ಆಗಮಿಸುತ್ತಿದೆ. ವೀರ ಕನ್ನಡಿಗನ ಸಮಾಧಿಯನ್ನು ಶ್ವೇತ ವರ್ಣದ ಹೂವುಗಳಿಂದ ಸಿಂಗರಸಲಾಗಿದೆ. ಅಪ್ಪು ಪುಣ್ಯಸ್ಮರಣೆ ನಿಮಿತ್ತ ಸಮಾಧಿ ಬಳಿಯಲ್ಲಿ ಹಲವು ಕಾರ್ಯಕ್ರಮಗಳು ರಾತ್ರಿಯಿಂದಲೇ ನಡೆಯುತ್ತಿದೆ. ಕರ್ನಾಟಕ ಫಿಲಂ ಮ್ಯೂಸಿಕ್​ ಅಸೋಸಿಯೇಷನ್​ ವತಿಯಿಂದ 24 ಗಂಟೆಗಳ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ. ಅಪ್ಪು ಇಂದು ನಮ್ಮೊಂದಿಗಿಲ್ಲ ಅನ್ನೋದು ಕಹಿ ಸತ್ಯ. ಆದರೆ ಅಪ್ಪು ತನ್ನ ವ್ಯಕ್ತಿತ್ವದ ಮೂಲಕ ನಿಧನರಾದ ಬಳಿಕವೂ ಮತ್ತೆ ಜೀವಿಸಿದ್ದಾರೆ ಅನ್ನೋದು ಅಷ್ಟೇ ಸತ್ಯ.

ಇದನ್ನು ಓದಿ : Kannada Rajyotsava 2022 : ಕನ್ನಡ ರಾಜ್ಯೋತ್ಸವದ ಬಗ್ಗೆ ನಿಮಗೆಷ್ಟು ಗೊತ್ತು ?

ಇದನ್ನೂ ಓದಿ : IPL 2023 RCB TEAM : ಟೀಂ ಇಂಡಿಯಾದ 3 ಆಟಗಾರರಿಗೆ ಕೋಕ್ ಕೊಡಲಿದೆ ಆರ್ ಸಿಬಿ

first year death anniversary of power star puneeth rajkumar

Comments are closed.