Vijay: ನನ್ನ ಹೆಸರು ಬಳಸಲು‌ನಿರ್ಬಂಧ ಹೇರಿ: ತಂದೆ-ತಾಯಿ ವಿರುದ್ಧವೇ ನ್ಯಾಯಾಲಯದ ಮೊರೆ ಹೋದ ನಟ

ತಮಿಳಿನ ಸೂಪರ್ ಸ್ಟಾರ್ ವಿಜಯ್ ತಂದೆ ತಾಯಿ ವಿರುದ್ಧವೇ ತಿರುಗಿ ಬಿದ್ದಿದ್ದು, ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪೋಷಕರು ಹಾಗೂ ೧೭ ಜನರ ವಿರುದ್ಧ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ತನ್ನ ಹೆಸರು ಬಳಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.ನನ್ನ ಹೆಸರಿನಲ್ಲಿ ಪಕ್ಷ ಸ್ಥಾಪಿಸಲಾಗಿದೆ. ಇದ್ಯಾವುದು ನನಗೆ ಸಂಬಂಧವಿಲ್ಲ. ಹಾಗಾಗಿ ನನ್ನ ಹೆಸರನ್ನು ಬಳಸಿಕೊಳ್ಳದಂತೆ ತಂದೆ ,ತಾಯಿ ಹಾಗೂ ಪಕ್ಷದ ಇತರ ಪದಾಧಿಕಾರಿಗಳಿಗೆ ಆದೇಶ ನೀಡುವಂತೆ ವಿಜಯ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಚೈನೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಅರ್ಜಿ ಸೆ.೨೭ ರಂದು ರಂದು ವಿಚಾರಣೆಗೆ ಬರಲಿದೆ.ನಟ ವಿಜಯ್ ತಂದೆ ಹಾಗೂ ನಿರ್ದೇಶಕ ಎಸ್.ಎ.ಚಂದ್ರಶೇಖರ್ ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಳಮ್ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ಚುನಾವಣಾ ಅಯೋಗದಲ್ಲಿ ನೋಂದಣಿ ಮಾಡಿಸಿದ್ದರು.

ಈ ಪಕ್ಷದ ಕಾರ್ಯದರ್ಶಿಯಾಗಿ ಎಸ್.ಎ.ಚಂದ್ರಶೇಖರ್ ಹಾಗೂ ಖಜಾಂಚಿಯಾಗಿ ವಿಜಯ್ ತಾಯಿ ಶೋಭಾ ಚಂದ್ರಶೇಖರ್ ಇದ್ದಾರೆ. ಅಲ್ಲದೇ ವಿವಿಧ ಹುದ್ದೆಗಳಲ್ಲಿ ಒಟ್ಟು ೧೭ ಪದಾಧಿಕಾರಿಗಳಿದ್ದು ಎಲ್ಲರ ವಿರುದ್ಧವೂ ವಿಜಯ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಪಕ್ಷ ಸ್ಥಾಪನೆಯಾದಾಗಲೇ ಈ ಪಕ್ಷದ ಹಿಂದೆ ವಿಜಯ್ ಇದ್ದಾರೆ. ಅವರು ಪಕ್ಷವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿತ್ತು. ಈ ವೇಳೆಯೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ನಟ ವಿಜಯ್, ನನಗೂ ನನ್ನ ತಂದೆ ಚಂದ್ರಶೇಖರನ್ ಸ್ಥಾಪಿಸಿರುವ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ ಎಂದಿದ್ದರು.

ಮಾತ್ರವಲ್ಲ ಈ ಪಕ್ಷದೊಂದಿಗೆ ನೇರ ಅಥವಾ ಪರೋಕ್ಷ ಸಂಬಂಧವನ್ನು ನಾನು ಹೊಂದಿಲ್ಲ. ಯಾರದ್ದೋ ರಾಜಕೀಯ ಆಸಕ್ತಿಗಳನ್ನು ಪೊರೈಸಲು ನಾನು ಸಿದ್ಧನಿಲ್ಲ ಎಂದಿದ್ದರು.ಅಲ್ಲದೇ ಈ ಪಕ್ಷವೂ ನನ್ನ ಹೆಸರು,ಭಾವಚಿತ್ರ ಫ್ಯಾನ್ಸ್ ಕ್ಲಬ್ ಹೆಸರು ಬಳಸಿದ್ರೇ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು.

ಆದರೆ ಇದು ನನ್ನ ಮಗನ ಮಾತಲ್ಲ. ನನ್ನ ಹಾಗೂ ನನ್ನ ಮಗನನ್ನು ದೂರ ಮಾಡುವ ಪ್ರಯತ್ನ ನಡೆದಿದೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ. ಒಟ್ಟಿನಲ್ಲಿ ನಟ ವಿಜಯ್ ಕುಟುಂಬದ ಗಲಾಟೆ ಬೀದಿಗೆ ಬಿದ್ದಿದೆ.

(Beast’ actor Vijay files a case against parents)

Comments are closed.