ರವಿ-ಆರತಿ ದಾಂಪತ್ಯ ಕಲಹ: ₹40 ಲಕ್ಷ ಜೀವನಾಂಶ ಬೇಡಿಕೆ ತಳ್ಳಿಹಾಕಿದ ಕೋರ್ಟ್, ನಟನಿಗೆ ಬಿಗ್ ರಿಲೀಫ್!

ಪತ್ನಿಜನಪ್ರಿಯ ನಟ ರವಿ ಮೋಹನ್ ಹಾಗೂ ಪತ್ನಿ ಆರತಿ ನಡುವಿನ ವಿಚ್ಛೇದನ ಪ್ರಕರಣದಲ್ಲಿ ಚೆನ್ನೈನ ಕೌಟುಂಬಿಕ ನ್ಯಾಯಾಲಯವು ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ. ಪತ್ನಿಯ ಭರ್ಜರಿ ಬೇಡಿಕೆಗೆ ಕೋರ್ಟ್ ಬ್ರೇಕ್

ಚೆನ್ನೈ: ಜನಪ್ರಿಯ ನಟ ರವಿ ಮೋಹನ್ ಹಾಗೂ ಪತ್ನಿ ಆರತಿ ನಡುವಿನ ವಿಚ್ಛೇದನ ಪ್ರಕರಣದಲ್ಲಿ ಚೆನ್ನೈನ ಕೌಟುಂಬಿಕ ನ್ಯಾಯಾಲಯವು ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ. ಪತ್ನಿ ಆರತಿ ಸಲ್ಲಿಸಿದ್ದ ತಿಂಗಳ ₹40 ಲಕ್ಷ ಜೀವನಾಂಶದ ಬೃಹತ್ ಬೇಡಿಕೆಯನ್ನು ಕೋರ್ಟ್ ತಿರಸ್ಕರಿಸಿದ್ದು, ಮಾಸಿಕ ₹3 ಲಕ್ಷ ಜೀವನಾಂಶ ನಿಗದಿಪಡಿಸಿದೆ. ಇದರೊಂದಿಗೆ ಮಕ್ಕಳ ಭೇಟಿಗೂ ಮುಕ್ತ ಅವಕಾಶ ಕಲ್ಪಿಸಿರುವುದರಿಂದ ನಟ ಜಯಂ ರವಿಗೆ ದೊಡ್ಡ ಮಟ್ಟದ ನಿರಾಳತೆ ಸಿಕ್ಕಂತಾಗಿದೆ.

 ಪತ್ನಿ ಆರತಿ ಪ್ರತಿ ತಿಂಗಳು ₹40 ಲಕ್ಷ ಜೀವನಾಂಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿರುವ ಕೋರ್ಟ್, ಅಂತಿಮ ತೀರ್ಪು ಬರುವವರೆಗೆ ಪ್ರತಿ ತಿಂಗಳು ₹3 ಲಕ್ಷ ಮಾತ್ರ ನೀಡುವಂತೆ ನಟನಿಗೆ ನಿರ್ದೇಶನ ನೀಡಿದೆ. ಹಣದ ವಿಚಾರದ ಜೊತೆಗೆ ಮಕ್ಕಳ ಭೇಟಿಗೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ನಟ ರವಿ ಮೋಹನ್ ತಮ್ಮ ಇಬ್ಬರು ಮಕ್ಕಳಾದ ಆರವ್ ಮತ್ತು ಅಯಾನ್ ಅವರನ್ನು ಭೇಟಿ ಮಾಡಲು ಯಾವುದೇ ನಿರ್ಬಂಧ ಇರಬಾರದು ಎಂದು ಸ್ಪಷ್ಟಪಡಿಸಿದೆ.

ಪತ್ನಿ ಆರತಿ ತಮಗೆ ಮಕ್ಕಳನ್ನು ಭೇಟಿ ಮಾಡಲು ಬಿಡುತ್ತಿಲ್ಲ ಎಂದು ನಟ ರವಿ ಮೋಹನ್ ಈ ಹಿಂದೆ ಬಹಿರಂಗವಾಗಿ ಅಳಲು ತೋಡಿಕೊಂಡಿದ್ದರು. ಮಕ್ಕಳಿಗೆ ಭದ್ರತೆ ನೀಡಿ ಶಾಲೆಗೆ ಕಳುಹಿಸಲಾಗುತ್ತಿದೆ ಎಂದು ದೂರಿದ್ದ ಅವರು, ಮಕ್ಕಳು ಕಾರು ಅಪಘಾತಕ್ಕೆ ಒಳಗಾದಾಗಲೂ ತಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ತೀವ್ರ ಆತಂಕ ಹಾಗೂ ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಕೋರ್ಟ್ ಆದೇಶದಿಂದ ನಟನಿಗೆ ಕಾನೂನು ಹೋರಾಟದಲ್ಲಿ ದೊಡ್ಡ ರಿಲೀಫ್ ಸಿಕ್ಕಿದೆ.

ರವಿ ಮೋಹನ್ ಹಾಗೂ ಆರತಿ ಜೋಡಿಯು 2009ರ ಜೂನ್‌ನಲ್ಲಿ ವಿವಾಹವಾಗಿದ್ದರು. ಸುಮಾರು 15 ವರ್ಷಗಳ ಕಾಲ ಅನ್ಯೋನ್ಯವಾಗಿದ್ದ ಇವರ ಸಂಸಾರದಲ್ಲಿ ನಂತರ ಭಿನ್ನಾಭಿಪ್ರಾಯಗಳು ತಲೆದೋರಿದವು. ಪರಿಣಾಮವಾಗಿ, 2024ರ ಸೆಪ್ಟೆಂಬರ್‌ನಲ್ಲಿ ರವಿ ಮೋಹನ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ತಮ್ಮ ಗಮನಕ್ಕೆ ಬಾರದೆ ಏಕಾಏಕಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರತಿ ಆರೋಪಿಸಿದ್ದರು. ಸದ್ಯ ಮಧ್ಯಂತರ ಆದೇಶ ಹೊರಬಿದ್ದಿದ್ದು, ಮುಖ್ಯ ವಿಚ್ಛೇದನ ಪ್ರಕರಣದ ವಿಚಾರಣೆ ಮುಂದುವರಿದಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.