‘ಟಾಕ್ಸಿಕ್’ನ ‘ಮನಮೋಹಕ’ ಗೀತೆಗೆ ಭಾರಿ ಮೆಚ್ಚುಗೆ: ಗಮನ ಸೆಳೆದ ಪ್ರಮೋದ್ ಮರವಂತೆ ಸಾಹಿತ್ಯ

'ಟಾಕ್ಸಿಕ್' ಸಿನಿಮಾದ ಎರಡನೇ ಹಾಡಾಗಿ ಹೊರಬಂದಿರುವ ‘ಮನಮೋಹಕ’ ಸದ್ಯ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಸೊಷಿಯಲ್‌ ಮಿಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಈ ಅದ್ಭುತ ಪ್ರಣಯಗೀತೆ ಕನ್ನಡದಲ್ಲಿ ಪ್ರಮೋದ್ ಮರವಂತೆ ಸಾಹಿತ್ಯ ಪೊಣಿಸಿದ್ದಾರೆ .

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಒಂದು ಹಾಡು ಬ್ಲಾಕ್‌ಬಸ್ಟರ್ ಹಿಟ್ ಆಗಬೇಕಾದರೆ ಅದರ ಹಿಂದೆ ಗೀತಸಾಹಿತಿಯ ಶ್ರಮ ಅಪಾರವಾಗಿರುತ್ತದೆ. ಶಬ್ದಗಳ ಜೊತೆ ಭಾವನೆಗಳನ್ನು ಪೊಣಿಸಿ ಕೇಳುಗರ ಮನಮುಟ್ಟುವುದು ಸುಲಭದ ಮಾತಲ್ಲ. ಈ ಕಲೆಯಲ್ಲಿ ಸದಾ ವಿಜಯ ಸಾಧಿಸುತ್ತಾ, ತಮ್ಮ ವಿಭಿನ್ನ ಸಾಹಿತ್ಯದ ಮೂಲಕ ಕನ್ನಡಿಗರ ಹೃದಯ ಗೆದ್ದಿರುವ ಪ್ರತಿಭಾವಂತ ಸಾಹಿತಿ ಪ್ರಮೋದ್ ಮರವಂತೆ. ಇದೀಗ ಅವರು ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ‘ಮನಮೋಹಕ’ ಹಾಡಿನ ಮೂಲಕ ಮತ್ತೊಮ್ಮೆ ಟ್ರೆಂಡಿಂಗ್‌ನಲ್ಲಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಎರಡನೇ ಹಾಡಾಗಿ ಹೊರಬಂದಿರುವ ‘ಮನಮೋಹಕ’ ಸದ್ಯ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಸೊಷಿಯಲ್‌ ಮಿಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಈ ಅದ್ಭುತ ಪ್ರಣಯಗೀತೆ ಕನ್ನಡದಲ್ಲಿ ಪ್ರಮೋದ್ ಮರವಂತೆ ಸಾಹಿತ್ಯ ಪೊಣಿಸಿದ್ದಾರೆ . ತೆರೆಯ ಮೇಲೆ ಯಶ್ ಮತ್ತು ತಾರಾ ಸುತಾರಿಯಾ ಅವರ ಕೆಮಿಸ್ಟ್ರಿಗೆ ಪ್ರಮೋದ್ ಅವರ ಗೀಚಿದ ಸಾಲುಗಳು ಕಳೆಕಟ್ಟಿದ್ದು, ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಗ್ರಾಮದವರಾದ ಪ್ರಮೋದ್, ಇಂದು ಕನ್ನಡ ಚಿತ್ರರಂಗದ ‘ಮೋಸ್ಟ್ ವಾಂಟೆಡ್’ ಲಿರಿಸಿಸ್ಟ್ ಆಗಿ ಹೊರಹೊಮ್ಮಿದ್ದಾರೆ. ಆರಂಭದ ದಿನಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ಇವರು, ಕರಾವಳಿಯ ಸೊಗಡನ್ನು ತಮ್ಮ ಹೆಸರಿನಲ್ಲೇ ಇಟ್ಟುಕೊಂಡು ಸ್ಯಾಂಡಲ್‌ವುಡ್‌ನ ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳಿಗೆ ಸಾಹಿತ್ಯ ಬರೆಯುವ ಎತ್ತರಕ್ಕೆ ಬೆಳೆದಿದ್ದಾರೆ.

 ಪ್ರಮೋದ್ ಮರವಂತೆ ಕೇವಲ ‘ಟಾಕ್ಸಿಕ್’ಗೆ ಮಾತ್ರ ಸೀಮಿತವಾಗಿಲ್ಲ. ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ‘ಕಾಂತಾರ’ ಚಿತ್ರದ ಸೂಪರ್ ಹಿಟ್ ‘ಸಿಂಗಾರ ಸಿರಿಯೇ’ ಹಾಡಿಗೆ ಸಾಹಿತ್ಯ ಬರೆದಿದ್ದು ಇದೇ ಪ್ರಮೋದ್. ಈ ಹಾಡು ಇವರ ವೃತ್ತಿಜೀವನಕ್ಕೆ ದೊಡ್ದ ಮಟ್ಟದ ಬ್ರೇಕ್ ನೀಡಿತ್ತು. ರಕ್ಷಿತ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಸೇರಿದಂತೆ ಕನ್ನಡದ ಅನೇಕ ಪ್ರಮುಖ ನಟ-ನಿರ್ದೇಶಕರ ಸಿನಿಮಾಗಳಿಗೆ ಸಾಹಿತ್ಯ ಬರೆದು ಭರವಸೆಯ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ.

ಪ್ರಮೋದ್ ಮರವಂತೆ ಅವರ ಸಾಹಿತ್ಯದ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅವರ ವರ್ಸಟಾಲಿಟಿ. ಒಂದು ಕಡೆ ‘ಸಿಂಗಾರ ಸಿರಿಯೇ’ ಅಥವಾ ‘ಮನಮೋಹಕ’ದಂತಹ ಮಧುರ ಪ್ರಣಯಗೀತೆಗಳನ್ನು ಹೆಣೆಯುವ ಇವರು, ಇನ್ನೊಂದೆಡೆ ಹಳ್ಳಿ ಸೊಗಡಿನ ಹಾಗೂ ಮಾಸ್ ಆಡಿಯನ್ಸ್ ಇಷ್ಟಪಡುವ ಜಾನಪದ ಮಾದರಿಯ ಹಾಡುಗಳನ್ನೂ ಬರೆದು ಸೈ ಎನಿಸಿಕೊಂಡಿದ್ದಾರೆ.

‘ಟಾಕ್ಸಿಕ್’ ನಂತಹ ಬೃಹತ್ ಕ್ಯಾನ್ವಾಸ್‌ನ ಸಿನಿಮಾದಲ್ಲಿ ಪ್ರಮೋದ್ ಅವರ ಸಾಹಿತ್ಯ ಮೂಡಿಬಂದಿರುವುದು ಅವರ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿಯಿಟ್ಟಂತಾಗಿದೆ. ಮುಂಬರುವ ದಿನಗಳಲ್ಲಿ ಇವರಿಂದ ಮತ್ತಷ್ಟು ಅದ್ಭುತ ಕನ್ನಡ ಗೀತೆಗಳು ಹೊರಬರಲಿ ಎಂಬುದು ಪ್ರೇಕ್ಷಕರ ಆಶಯ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.