ಡಾ.ವಿಷ್ಣುವರ್ಧನ್ ಸ್ಮಾರಕದ ವೈಶಿಷ್ಟ್ಯನಿಮಗೆ ಗೊತ್ತಾ ! ಅಭಿಮಾನಿಗಳಲ್ಲಿ ಭಾರತಿ ಅವರು ಮನವಿ ಮಾಡಿದ್ದೇಕೆ ?

0

ಮೈಸೂರು : ಸಾಹಸ ಸಿಂಹ, ಕನ್ನಡ ಚಿತ್ರರಂಗ ಕಂಡ ಶ್ರೇಷ್ಟ ಕಲಾವಿದ ಡಾ.ವಿಷ್ಣುವರ್ಧನ್ ಅವರು ನಮ್ಮೊಂದಿಗಿಲ್ಲ. ವಿಷ್ಣುವರ್ಧನ್ ಅವರು ಮರೆಯಾಗಿ ಬರೋಬ್ಬರಿ 11 ವರ್ಷಗಳೇ ಕಳೆದು ಹೋಗಿದೆ. ಆದ್ರೀಗ ವಿಷ್ಣು ಅವರ ನೆನಪಿನಲ್ಲಿ ಅವರ ಹುಟ್ಟೂರಲ್ಲೇ ಇದೀಗ ಸ್ಮಾರಕ ನಿರ್ಮಾಣವಾಗಲಿದೆ. ಕಳೆದೊಂದು ದಶಕದ ಹೋರಾಟಕ್ಕೆ ಫಲದೊರೆತಿದ್ದು, ವಿಷ್ಣುವರ್ಧನ್ ಅವರ ಅಭಿಮಾನಿಗಳು ಸಂಭ್ರಮದ ಅಲೆಯಲ್ಲಿ ತೇಲಾಡುತ್ತಿದ್ದಾರೆ.

ಡಾ.ವಿಷ್ಣುವರ್ಧನ್ ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಇಂದಿಗೂ ಆರಾಧ್ಯ ದೇವರು. ಅದೆಷ್ಟೋ ಮನೆಯಲ್ಲಿ ಇಂದಿಗೂ ವಿಷ್ಣು ಅವರನ್ನು ಪೂಜಿಸಲಾಗುತ್ತಿದೆ. ಸಾಹಸ ಸಿಂಹನ ಗುಣಗಾನ ಮಾಡಲಾಗುತ್ತಿದೆ. ವಿಷ್ಣುದಾದಾ ಹಾಕಿಕೊಟ್ಟ ಹಾದಿಯಲ್ಲಿಯೇ ಅದೆಷ್ಟೋ ಮಂದಿ ಬದುಕು ಕಟ್ಟಿಕೊಂಡಿದ್ದಾರೆ.

ಓರ್ವ ಕಲಾವಿದನಾಗಿಯಷ್ಟೇ ಅಲ್ಲಾ ಸಮಾಜ ಸೇವಕರಾಗಿ, ನೊಂದವರ ಕಣ್ಣಿರು ಒರಿಸಿದ್ದ ವಿಷ್ಣು ಅಗಲಿಕೆ ಅಭಿಮಾನಿಗಳಿಗೆ ಇಂದಿಗೂ ಕಾಡುತ್ತಲೇ ಇದೆ. 2009ರಲ್ಲಿ ವಿಷ್ಣುವರ್ಧನ್ ಅವರು ನಿಧನರಾಗುತ್ತಿದ್ದಂತೆಯೇ ಬೆಂಗಳೂರಲ್ಲಿ ಸ್ಮಾರಕ ನಿರ್ಮಾಣದ ಕೂಗು ಕೇಳಿ ಬಂದಿತ್ತು. ಆದರೆ ನಾನಾ ಕಾರಣಗಳಿಂದಾಗಿ ಸ್ಮಾರಕ ನಿರ್ಮಾಣವಾಗಲಿಲ್ಲ.

ಆದರೆ ವಿಷ್ಣು ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಅವರ ನಿರಂತರ ಹೋರಾಟದ ಜೊತೆಗೆ 2016ರಲ್ಲಿ ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2017ರಲ್ಲಿ ರಾಜ್ಯ ಸರಕಾರ ಮೈಸೂರು ಹೊರವಲಯದ ಎಚ್.ಡಿ.ಕೋಟೆ ರಸ್ತೆಯ ಉದ್ಭೂರು ಗೇಟ್ ಬಳಿಯ ಹಾಲಾಳುವಿನಲ್ಲಿರುವ 5 ಎಕರೆ ಸ್ಮಾರಕ ನಿರ್ಮಾಣಕ್ಕೆ ಜಾಗವನ್ನು ಮಂಜೂರು ಮಾಡಿತ್ತು.

ಆದರೆ ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಕೆಲ ರೈತರು ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ ಕಂಡಿತ್ತು. ಇದೀಗ ಸ್ಮಾರಕ ನಿರ್ಮಾಣಕ್ಕೆ ಕಾಲ ಕೂಡಿಬಂದಿದೆ. ವಿಷ್ಣುದಾದಾ ಅವರ ಹುಟ್ಟುಹಬ್ಬಕ್ಕೆ ಮೂರು ದಿನಗಳ ಮೊದಲು ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುತ್ತಿದೆ.

ಸತತ 11 ವರ್ಷಗಳ ಹೋರಾಟದ ಫಲವಾಗಿ ವಿಷ್ಣುವರ್ಧನ್‌ ಹುಟ್ಟೂರಲ್ಲೇ ಸ್ಮಾರಕ ನಿರ್ಮಾಣವಾಗುತ್ತಿದೆ. ಸಾಹಸಸಿಂಹ ಡಾ. ವಿಷ್ಣುವರ್ಧನ್‌ ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣವನ್ನು ಮೈಸೂರಿನಲ್ಲೇ ಮುಗಿಸಿದ್ದರು. ಇಲ್ಲಿನ ಚಾಮುಂಡಿಪುರಂನಲ್ಲೇ ವಾಸವಿದ್ದರು. ತಮ್ಮ ಚಿತ್ರದ ಶೂಟಿಂಗ್‌ ಅನ್ನು ಮೈಸೂರಿನಲ್ಲಿ ಇಟ್ಟುಕೊಂಡರೆ ಸಂಭ್ರಮಿಸುತ್ತಿದ್ದರು. ಚಾಮುಂಡಿಬೆಟ್ಟ ಅಂದ್ರೆ ವಿಷ್ಣುವರ್ಧನ್‌ ಅವರ ನೆಚ್ಚಿನ ತಾಣವಾಗಿತ್ತು.ದೈಹಿಕ ಕಸರತ್ತಿಗೆ ವಿಷ್ಣುವರ್ಧನ್‌ ತಂದೆ ಚಾಮುಂಡಿಬೆಟ್ಟವನ್ನು ಹತ್ತಿ ಇಳಿಯುತ್ತಿದ್ದರು. ಇಂತಹ ವಿಷ್ಣುವರ್ಧನ್‌ ನೆಚ್ಚಿನ ಊರಿನಲ್ಲೇ ಸ್ಮಾರಕ ನಿರ್ಮಾಣ ಆಗುತ್ತಿದೆ.

ವಿಷ್ಣುವರ್ಧನ್‌ ಸ್ಮಾರಕ ರಾಜ್ಯಕ್ಕೆ ದೊಡ್ಡ ಕೊಡುಗೆ ಎನಿಸಲಿದೆ. ದಕ್ಷಿಣ ಭಾರತದಲ್ಲೇ ಮಾದರಿಯಾದ ಅತ್ಯದ್ಭುತ ಸ್ಮಾರಕ ತಲೆ ಎತ್ತಲಿದೆ. ವಿಷ್ಣುವರ್ಧನ್‌ ಅವರು ಕಲೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು. ಹಾಗಾಗಿ ಸ್ಮಾರಕದ ಜತೆಗೆ ದಕ್ಷಿಣದಲ್ಲೇ ಮೊದಲ ಬಾರಿಗೆ ಪುಣೆಯ ಫಿಲ್ಮ್‌ ಅಂಡ್‌ ಟೆಲಿವಿಷನ್‌ ಇನ್ಸಿಟಿಟ್ಯೂಟ್‌ ಆಫ್‌ ಇಂಡಿಯಾದ ಶಾಖೆ ಇಲ್ಲಿ ಕಾರ್ಯಾರಂಭ ಮಾಡಲಿದೆ. ಇದರಿಂದ ಸಾಕಷ್ಟು ಕಲಾವಿದರಿಗೆ ಮಾರ್ಗದರ್ಶನ ಸಿಗಲಿದೆ. ಅಲ್ಲದೆ, ನಾಟಕ ತರಬೇತಿ ಶಾಲೆಯೂ ತೆರೆದುಕೊಳ್ಳಲಿದೆ.

ಸುಮಾರು 11 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ. ಸ್ಮಾರಕ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ 5.5 ಎಕರೆ ಜಾಗದಲ್ಲಿ ಸುಮಾರು 2 ಎಕರೆ ಜಾಗವನ್ನು ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ. ಸ್ಮಾರಕದಲ್ಲಿ ವಿಷ್ಣುವರ್ಧನ್ ಅವರ 6 ಅಡಿ ಎತ್ತರ ಪುತ್ಥಳಿ ನಿರ್ಮಾಣವಾಗಲಿದೆ.

ಅದಲ್ಲೇ ಸ್ಮಾರಕದಲ್ಲಿ ವಸ್ತು ಸಂಗ್ರಹಾಲಯ, ಅಭಿನಯ ತರಬೇತಿ ಶಾಲೆ, ನಾಟಕೋತ್ಸವ, ಚಿತ್ರೋತ್ಸವಗಳನ್ನು ಆಯೋಜಿಸಲು ಅನುಕೂಲವಾಗುವಂತಹ ವೇದಿಕೆಗಳನ್ನು ಸಿದ್ದಪಡಿಸಲಾಗುತ್ತಿದೆ. ಸ್ಮಾರಕದಲ್ಲಿ ವಿಷ್ಣುವರ್ಧನ್‌ ಅವರ ಅಪರೂಪದ ಫೋಟೋ, ಅವರು ವಸ್ತುಗಳು, ಬಟ್ಟೆ, ವಿಷ್ಣುವರ್ಧನ್ ಅವರ ಸಾಧನೆಗೆ ಸಿಕ್ಕ ಪ್ರಶಸ್ತಿಗಳನ್ನು ಕಾಣಬಹುದಾಗಿದೆ.

ಸಪ್ಟೆಂಬರ್ 15ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಮಾರಕ ನಿರ್ಮಾಣದ ಭೂಮಿ ಪೂಜೆಗೆ ಚಾಲನೆ ನೀಡಲಿದ್ದಾರೆ. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಪತ್ನಿ ಡಾ.ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ದ್, ಮಗಳು ಕೀರ್ತಿ ವಿಷ್ಣುವರ್ಧನ್, ಮೊಮ್ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕೇವಲ ಒಂದು ವರ್ಷದ ಒಳಗಾಗಿ ಸ್ಮಾರಕದ ಕೆಲಸ ಸಂಪೂರ್ಣವಾಗಿ ಮುಕ್ತಾಯವಾಗಲಿದೆ.

ಹಲವು ವರ್ಷಗಳ ನಂತರ ಸ್ಮಾರಕ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಸ್ಮಾರಕ ನಿರ್ಮಾಣವಾಗಬೇಕೆಂದು ಹಲವರು ಹೋರಾಟ ಮಾಡಿದ್ದರು. ಅಭಿಮಾನಿಗಳು ಸಹ ಇಲ್ಲಿಯೇ ಸ್ಮಾರಕ ಆಗಬೇಕೆಂದು ಆಸೆ ಪಟ್ಟಿದ್ದರು. ಅವರ ಆಸೆಯಂತೆ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ಆಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಡಿ ಎಂದು ಮನವಿ ಮಾಡಿದ್ದಾರೆ.

Leave A Reply

Your email address will not be published.