ದಕ್ಷಿಣ ಕನ್ನಡ, ಉಡುಪಿಯಲ್ಲಿ ಕೊರೊನಾ ಆರ್ಭಟ : 5 ದಿನದಲ್ಲಿ 502 ಕೋವಿಡ್‌ ಪ್ರಕರಣ ದಾಖಲು

ಮಂಗಳೂರು / ಉಡುಪಿ : ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಕೊರೊನಾ ವೈರಸ್‌ ಸೋಂಕಿನ ಆತಂಕ ಶುರುವಾಗಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ (Dakshina Kannada, Udupi) ಜಿಲ್ಲೆಯಲ್ಲಿ ದಿನ ಕಳೆದಂತೆ ದಾಖಲಾಗುತ್ತಿರುವ ಕೊರೊನಾ ವೈರಸ್‌ ಸೋಂಕಿನ ಪ್ರಮಾಣದಲ್ಲಿಯೂ ಏರಿಕೆಯನ್ನು ಕಾಣುತ್ತಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿಯೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕೊರೊನಾ ಸೋಂಕಿತ ಪ್ರಕರಣ ದಾಖಲಾಗುತ್ತಿದೆ.

ಕೊರೊನಾ ಮೊದಲ ಹಾಗೂ ಎರಡನೆ ಅಲೆಯ ಸಂದರ್ಭದಲ್ಲಿ ಅತೀ ಹೆಚ್ಚು ಕೊರೊನಾಕ್ಕೆ ತತ್ತರಿಸಿದ್ದು ಕರಾವಳಿ ಜಿಲ್ಲೆಗಳು. ದಕ್ಷಿಣ ಕನ್ನಡ ಜಿಲ್ಲೆ ಮೊದಲ ಅಲೆಗೆ ತತ್ತರಿಸಿ ಹೋಗಿದ್ರೆ, ಉಡುಪಿ ಜಿಲ್ಲೆಯಲ್ಲಿ ಎರಡನೇ ಅಲೆ ಆತಂಕವನ್ನು ಮೂಡಿಸಿತ್ತು. ಇದೀಗ ಮೂರನೇ ಅಲೆಯ ಹೊತ್ತಲೇ ಮತ್ತೆ ಕರಾವಳಿ ಜಿಲ್ಲೆಗಳು ಕೊರೊನಾ ಸೋಂಕಿಗೆ ಟಾರ್ಗೆಟ್‌ ಆಗುವ ಲಕ್ಷಣ ಗೋಚರಿಸುತ್ತಿದೆ.

ಜನವರಿ 4 ರಂದು ಕರ್ನಾಟಕ ಆರೋಗ್ಯ ಇಲಾಖೆ ನೀಡಿದರುವ ಮಾಹಿತಿಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 75 ಪ್ರಕರಣ ಹಾಗೂ ಉಡುಪಿ ಜಿಲ್ಲೆಯಲ್ಲಿ 72 ಪ್ರಕರಣ ದಾಖಲಾಗಿತ್ತು. ಕಳೆದ ಐದು ದಿನಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 232 ಕೊರೊನಾ ಸೋಂಕಿತ ಪ್ರಕರಣ ದಾಖಲಾಗಿದ್ರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 270 ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಸೆಂಬರ್‌ 31 ರಂದು 31, ಜನವರಿ 1ರಂದು 48, ಜನವರಿ 2 ರಂದು 63, ಜನವರಿ 3 ರಂದು 53 , ಜನವರಿ 4 ರಂದು 75 ಕೊರೊನಾ ಪ್ರಕರಣ ದಾಖಲಾಗಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಡಿಸೆಂಬರ್‌ 31 ರಂದು 35 ಜನವರಿ 1 ರಂದು 28, ಜನವರಿ 2 ರಂದು 54, ಜನವರಿ 3ರಂದು 43 ಹಾಗೂ ಜನವರಿ 4 ರಂದು 72 ಪ್ರಕರಣ ಪತ್ತೆಯಾಗಿದೆ. ಎರಡೂ ಜಿಲ್ಲೆಗಳಲ್ಲಿಯೂ ಕಳೆದ ಮೂರು ದಿನಗಳಿಂದ ನೂರಕ್ಕೂ ಅಧಿಕ ಪ್ರಕರಣ ಪತ್ತೆಯಾಗುತ್ತಿರುವುದು ಆತಂಕವನ್ನು ಮೂಡಿಸಿದೆ.

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 77335 ಕೊರೊನಾ ಪ್ರಕರಣ ದಾಖಲಾಗಿದ್ದು, ಸದ್ಯ 290 ಸಕ್ರೀಯ ಪ್ರಕರಣಗಳಿವೆ. ಜೊತೆಗೆ ಇದುವರೆಗೆ ಒಟ್ಟು 491 ಮಂದಿಯನ್ನು ಹೆಮ್ಮಾರಿ ಕೊರೊನಾ ಬಲಿ ಪಡೆದಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,16,620 ಕೊರೊನಾ ಪ್ರಕರಣ ದೃಢಪಟ್ಟಿದ್ದು, ಸದ್ಯ 341 ಸಕ್ರೀಯ ಕೊರೊನಾ ಪ್ರಕರಣಗಳಿವೆ. ಅಲ್ಲದೇ ಇದುವರೆಗೆ ಒಟ್ಟು 1696 ಮಂದಿ ಕೊರೊನಾ ವೈರಸ್‌ ಸೋಂಕಿನಿಂದ ಮೃತಪಟ್ಟಿದ್ದಾರೆ. ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳಲ್ಲಿಯೇ ಓಮಿಕ್ರಾನ್‌ ಸೋಂಕು ಪತ್ತೆಯಾಗಿತ್ತು. ಕೇರಳ ರಾಜ್ಯದ ಅತೀ ಹೆಚ್ಚು ವಿದ್ಯಾರ್ಥಿಗಳು ಎರಡೂ ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳನ್ನೇ ಆಶ್ರಯಿಸಿದ್ದಾರೆ. ನಿತ್ಯವೂ ಸಾವಿರಾರು ಮಂದಿ ನಾನಾ ಕಾರಣಗಳಿಂದಾಗಿ ಕೇರಳದಿಂದ ಆಗಮಿಸುತ್ತಿದ್ದಾರೆ. ಹೀಗಾಗಿ ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಇದೀಗ ಅವಳಿ ಜಿಲ್ಲೆಗಳಿಗೆ ವ್ಯಾಪಿಸುವ ಆತಂಕ ಶುರುವಾಗಿದೆ.

ರಾಜ್ಯ ಸರಕಾರ ಬೆಂಗಳೂರು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ವೀಕೆಂಡ್‌ ಕರ್ಪ್ಯೂ, ನೈಟ್‌ ಕರ್ಪ್ಯೂ ಸೇರಿದಂತೆ ಕೆಲವೊಂದು ನಿರ್ಬಂಧಗಳನ್ನು ಹೇರಿದೆ. ಆದರೆ ಕರಾವಳಿ ಜಿಲ್ಲೆಗಳ ಶಾಲೆಗಳ ವಿಚಾರದಲ್ಲಿ ಯಾವುದೇ ನಿರ್ಬಂಧಗಳನ್ನೂ ಹೇರಿಕೆ ಮಾಡಿಲ್ಲ. ಈಗಾಗಲೇ ಶಾಲೆ, ಕಾಲೇಜುಗಳಲ್ಲಿ ಓಮಿಕ್ರಾನ್‌ ಸೋಂಕು ಪತ್ತೆಯಾಗಿತ್ತು. ಜೊತೆಗೆ ಶಾಲೆಯಲ್ಲಿನ ಮಕ್ಕಳ ನಾನಾ ರೀತಿಯ ಜ್ವರದಿಂದ ಬಳಲುತ್ತಿದ್ದಾರೆ. ಕೆಲವೊಂದು ಶಾಲೆಗಳಲ್ಲಿ ಮಕ್ಕಳು ಮಾಸ್ಕ್‌ ಇಲ್ಲದೇ ಪಾಠ ಕೇಳುತ್ತಿದ್ದಾರೆ. ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸಿದ ನಂತರದಲ್ಲಿ ನಿರ್ಬಂಧ ಹೇರುವ ಮೊದಲೇ ಸರಕಾರ ಎಚ್ಚೆತ್ತುಕೊಳ್ಳುವುದು ಒಳಿತು.

ಮೊದಲ ಹಾಗೂ ಎರಡನೇ ಅಲೆಯ ಅವಧಿಯಲ್ಲಿಯೂ ರಾಜ್ಯ ಸರಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕರಾವಳಿ ಭಾಗದಲ್ಲಿ ಸಾವಿರಾರು ಜನರು ಬಲಿಯಾಗಿದ್ದಾರೆ. ಬೆಂಗಳೂರು ಹೊರತು ಪಡಿಸಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಸಾವುಗಳು ದಾಖಲಾಗಿವೆ. ಇದೀಗ ಸಕ್ರೀಯ ಪ್ರಕರಣ ಸಂಖ್ಯೆಯಲ್ಲಿಯೂ ಕರಾವಳಿ ಜಿಲ್ಲೆಗಳು ಮುಂಚೂಣಿಯಲ್ಲಿವೆ.

ಇದನ್ನೂ ಓದಿ : ಗುರುವಾರದಿಂದ ಶಾಲೆಗಳು ಬಂದ್‌, ರಾಜ್ಯದಾದ್ಯಂತ ವೀಕೆಂಡ್‌ ಕರ್ಪ್ಯೂ ಜಾರಿ

ಇದನ್ನೂ ಓದಿ : ಪರ್ಯಾಯೋತ್ಸವ ಸುವ್ಯವಸ್ಥಿತವಾಗಿ ನಡೆಸಲು ಎಲ್ಲಾ ಕ್ರಮ ಕೈಗೊಳ್ಳಿ : ಸಚಿವ ಸುನಿಲ್ ಕುಮಾರ್ ಸೂಚನೆ

(502 Covid cases registered in Udupi, Dakshina Kannada in 5 days)

Comments are closed.