ಭದ್ರಗಿರಿಯಿಂದ ಮಾಬುಕಳ ವರೆಗೆ ಸರ್ವಿಸ್‌ ರಸ್ತೆಗೆ ಆಗ್ರಹ : ಬ್ರಹ್ಮಾವರದಲ್ಲಿ ಬೃಹತ್‌ ಪ್ರತಿಭಟನೆ

ಬ್ರಹ್ಮಾವರ : (Brahmavar News) ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಸಾರ್ವಜನಿಕರು ಸಮಸ್ಯೆ ಯನ್ನು ಎದುರಿಸುತ್ತಿದ್ದಾರೆ. ಅದ್ರಲ್ಲೂ ಬ್ರಹ್ಮಾವರದಿಂದ ಕುಂದಾಪುರದ ವರೆಗೆ ಸರ್ವಿಸ್‌ ರಸ್ತೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಉಪ್ಪಿನಕೋಟೆ, ಸಾಲಿಕೇರಿ, ಹಾರಾಡಿ, ಹೊನ್ನಾಳ, ಬೈಕಾಡಿ ಮುಂತಾದ ಪ್ರದೇಶಗಳಲ್ಲಿನ ಜನರು ನಿತ್ಯವೂ ಪರದಾಡುತ್ತಿದ್ದಾರೆ. ಇದೇ ಕಾರಣದಿಂದಾಗಿ ಬ್ರಹ್ಮಾವರದ ಭದ್ರಗಿರಿಯಿಂದ ಮಾಬುಕಳದ ವರೆಗೆ ಸರ್ವಿಸ್‌ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಇಂದು ಉಪ್ಪಿನಕೋಟೆಯಲ್ಲಿ ಬೃಹತ್‌ ಪ್ರತಿಭಟನಾ ಸಭೆ ನಡೆಯಿತು. ಬ್ರಹ್ಮಾವರ ತಹಶೀಲ್ದಾರ್‌ ಅವರ ಮೂಲಕ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66 ಉಳಿಸಿ ಸಮಿತಿಯ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಭದ್ರಗಿರಿಯಿಂದ ಮಾಬುಕಳ ಸೇತುವೆಯ ವರೆಗೆ ಸರ್ವಿಸ್‌ ರಸ್ತೆ ನಿರ್ಮಾಣ ಮಾಡುವುದು. ಉಪ್ಪಿನಕೋಟೆ ಮತ್ತು ದೂಪದಕಟ್ಟೆಯಲ್ಲಿ ವಾಹನ ತಿರುವು ಪಡೆಯಲು ಅವಕಾಶ ಕಲ್ಪಿಸುವುದು ಸೇರಿದಂತೆ ಹಲವು ಬೇಡಿಕೆಗಾಗಿ ಆಗ್ರಹಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66 ಉಳಿಸಿ ಸಮಿತಿಯ ಸಂಚಾಲಕ ಬಿ.ಗೋವಿಂದರಾಜ್‌ ಹೆಗ್ಡೆ, ಉಡುಪಿ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಬಿ.ಭುಜಂಗ ಶೆಟ್ಟಿ, ಬಿ.ಎನ್.ಶಂಕರ ಪೂಜಾರಿ, ಕೆನರಾ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಸದಾನಂದ ಛಾತ್ರ, ಬ್ರಹ್ಮಾವರ ಎಸ್.ಎಂ.ಎಸ್.‌ ಚರ್ಚ್‌ ನ ಧರ್ಮಗುರು ರೆ.ಫಾ.ಲಾರೆನ್ಸ್‌ ಡೇವಿಡ್‌ ಕ್ರಾಸ್ತಾ, ಸಿಐಟಿಯು ರಾಜ್ಯ ಮತ್ತು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಟ್ಯಾಕ್ಸಿಮನ್‌ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ರಮೇಶ್‌ ಕೋಟ್ಯಾನ್‌, ವಾರಂಬಳ್ಳಿ ಗ್ರಾಮ ಪಂಚಾಯತ್‌ ಮಾಜಿ ಸದಸ್ಯ ರಾಜು ಶ್ರೀಯಾನ್‌ ಮುಂತಾದವರು ಉಪಸ್ಥಿತರಿದ್ದರು.

nh-66-demand-for-service-road-from-bhadragiri-to-mabukala-massive-protest-in-brahmavara

ಭದ್ರಗಿರಿಯಿಂದ ಮಾಬುಕಳದ ವರೆಗೆ ಸರ್ವಿಸ್‌ ರಸ್ತೆ ನಿರ್ಮಾಣದ ಕುರಿತು ಈ ಹಿಂದೆ ಉಡುಪಿಯ ಜಿಲ್ಲಾಧಿಕಾರಿಗಳಾಗಿದ್ದ ಡಾ.ವಿಶಾಲ್‌ ಅವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಅಲಲದೇ ಕೇಂದ್ರ ಭೂ ಸಾರಿಗೆ ಸಚಿವರಿಗೂ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಒಂದೊಮ್ಮೆ ಸರ್ವಿಸ್‌ ರಸ್ತೆ ನಿರ್ಮಾಣ ಮಾಡಿದ್ರೆ, ಕುಂದಾಪುರ ಕಡೆಯಿಂದ ಉಪ್ಪಿನಕೋಟೆ, ಸಾಲಿಕೇರಿ, ಹಾರಾಡಿ, ಹೊನ್ನಾಳ, ಬೈಕಾಡಿ ಮುಂತಾದ ಸ್ಥಳಗಳಿಗೆ ತೆರಳುವ ವಾಹನಗಳಿಗೆ ಅನುಕೂಲವಾಗಲಿದೆ. ಇನ್ನು ಹೊನ್ನಾಳ, ಬೈಕಾಡಿ, ಹಾರಾಡಿ, ಸಾಲಿಕೇರಿಯಿಂದ ಬಂದು ಉಪ್ಪಿನಕೋಟೆಯ ಮೂಲಕ ಬ್ರಹ್ಮಾವರ, ಬಾರಕೂರು, ಉಡುಪಿಗೆ ನಿತ್ಯವೂ ಪ್ರಯಾಣ ಬೆಳೆಸುವ ಬಸ್ಸುಗಳು, ಶಾಲಾ ವಾಹನಗಳಿಗೆ ಅನುಕೂಲವಾಗುತ್ತದೆ.

nh-66-demand-for-service-road-from-bhadragiri-to-mabukala-massive-protest-in-brahmavara

ಈ ಭಾಗದಲ್ಲಿರುವ ಶಾಲೆಗಳಿಗೆ ನಿತ್ಯವೂ ೩,೫೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಸಂಚಾರ ನಡೆಸುತ್ತಿದ್ದು, ಸರ್ವಿಸ್‌ ರಸ್ತೆಯಿಲ್ಲದೇ ಪ್ರಾಣ ಭಯದಲ್ಲಿಯೇ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗದ ಜನರೇ ಹೆಚ್ಚಾಗಿ ವಾಸಿಸುತ್ತಿರುವ ಬೈಕಾಡಿ, ಗಾಂಧಿನಗರದಲ್ಲಿನ ಜನರಿಗೂ ಕೂಡ ಅನುಕೂಲವಾಗಲಿದ್ದು, ಬ್ರಹ್ಮಾವರದಿಂದ ಪ್ರಯಾಣಿಕರನ್ನು ಉಪ್ಪಿನಕೋಟೆ ಪರಿಸರಕ್ಕೆ ಕರೆತರುವ ರಿಕ್ಷಾ ಚಾಲಕರಿಗೂ ಪ್ರಯೋಜನಕಾರಿಯಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

nh-66-demand-for-service-road-from-bhadragiri-to-mabukala-massive-protest-in-brahmavara

ಇದನ್ನೂ ಓದಿ : ಐಸ್ ಕ್ರೀಂ ಗೋದಾಮಿಗೆ ಆಕಸ್ಮಿಕ ಬೆಂಕಿ : ಕೋಟ್ಯಾಂತರ ರೂಪಾಯಿ ನಷ್ಟ

ಇದನ್ನೂ ಓದಿ : ನಂದಳಿಕೆ ಸಿರಿ ಜಾತ್ರೆ : ಪ್ರಚಾರದ ಜೊತೆಯಲ್ಲಿ ಪಕ್ಷಿ ಸಂಕುಲಕ್ಕೆ ನೀರುಣಿಸಲು ಮುಂದಾದ ಪ್ರಚಾರ ಫಲಕ

Comments are closed.