ಮಾಸ್ಕ್ ಧರಿಸದ ಸರ್ಕಾರಿ ಬಸ್ ಕಂಡಕ್ಟರ್‌ಗೆ ದಂಡ : ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಖಡಕ್ ವಾರ್ನಿಂಗ್

ಉಡುಪಿ : ಕೊರೊನಾ ವೈರಸ್ ಸೋಂಕಿನ ವಿರುದ್ದ ಸಮರ ಸಾರಿರುವ ಉಡುಪಿ ಜಿಲ್ಲಾಡಳಿತ ಖಡಕ್ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಅದ್ರಲ್ಲೂ ಮಾಸ್ಕ್ ಧರಿಸದ ಸರಕಾರಿ ಬಸ್ ಕಂಡಕ್ಟರ್ ಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ದಂಡ ವಿಧಿಸೋ ಮೂಲಕ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಉಡುಪಿ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ನಡೆದ ಕೋವಿಡ್ ಜನಾಂದೋಲನ ಮಾಹಿತಿ ಕಾರ್ಯಕ್ರಮದ ನಂತರ, ಸಮೀಪದ ವಸತಿ ಸಂಕೀರ್ಣದ ಮನೆಗೆ “ನನ್ನ ಕುಟುಂಬ ನನ್ ಜವಾಬ್ದಾರಿ”ಅಭಿಯಾನ ಕಾರ್ಯಕ್ರಮದ ಮೂಲಕ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಸ್ಟಿಕ್ಕರ್ ಅಳವಡಿಸಿದ್ರು.

ನಂತರ ರಸ್ತೆ ದಾಟುವ ವೇಳೆಯಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಕಂಡಕ್ಟರ್ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಬಸ್ ನಿಲ್ಲಿಸುವಂತೆ ಸೂಚಿಸಿದ್ದಾರೆ. ಕಂಡಕ್ಟರ್ ಗೆ ಸ್ಥಳದಲ್ಲಿಯೇ ದಂಡ ವಿಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

ನಂತರ ಬಸ್ಸನ್ನೇರಿದ ಜಿಲ್ಲಾಧಿಕಾರಿಗಳು ಮಾಸ್ಕ್ ಧರಿಸದೇ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೂ ದಂಡ ವಿಧಿಸಿದ್ದಾರೆ. ಮಾಸ್ಕ್ ಧರಿಸದವರ ವಿರುದ್ದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಉಡುಪಿ ಜಿಲ್ಲಾಧಿಕಾರಿಗಳು ಕಂಡಕ್ಟರ್ ಹಾಗೂ ಪ್ರಯಾಣಿಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Comments are closed.