ಕೊರೊನಾ ಹಾಟ್ ಸ್ಪಾಟ್ ಆಗ್ತಿದೆಯಾ ಬ್ರಹ್ಮಾವರ, ಕುಂದಾಪುರ, ಬೈಂದೂರು ತಾಲೂಕು ..?

ಉಡುಪಿ : ದಿನ ಕಳೆಯುತ್ತಿದ್ದಂತೆಯೇ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅದ್ರಲ್ಲೂ ಜಿಲ್ಲೆಯ ಬ್ರಹ್ಮಾವರ, ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಪ್ರಕರಣ ದಾಖಲಾಗುವ ಸಾಧ್ಯತೆ ಕಂಡುಬರುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 35365 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3,926 ಸಕ್ರೀಯ ಪ್ರಕರಣಗಳಿದ್ದು, 206 ಮಂದಿಯನ್ನು ಕೊರೊನಾ ಹೆಮ್ಮಾರಿ ಬಲಿ ಪಡೆದಿದೆ. ಅದ್ರಲ್ಲೂ ಬುಧವಾರ ಬರೋಬ್ಬರಿ 1,655 ಪ್ರಕರಣ ದಾಖಲಾಗಿರೋದು ಉಡುಪಿ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ. ಮಾತ್ರವಲ್ಲ ಸೋಂಕಿನ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿಯೇ ಕುಂದಾಪುರ, ಬ್ರಹ್ಮಾವರ, ಬೈಂದೂರು ತಾಲೂಕಿನ ವ್ಯಾಪ್ತಿಯಲ್ಲಿಯೇ ಅತೀ ಹೆಚ್ಚು ಕೊರೊನಾ ಪ್ರಕರಣ ದಾಖಲಾಗಿದೆ. ಇದೀಗ ಎರಡನೇ ಅಲೆಯ ಸಂದರ್ಭದಲ್ಲಿಯೂ ಅದೇ ಸ್ಥಿತಿ ಮರುಕಳಿಸುವ ಮನ್ಸೂಚನೆ ಲಭಿಸುತ್ತಿದೆ. ಈ ತಾಲೂಕುಗಳ ವ್ಯಾಪ್ತಿಯಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಬೆಂಗಳೂರು, ಮುಂಬೈನಲ್ಲಿ ನಡೆಸಿದ್ದಾರೆ. ಕೊರೊನಾ ಸೋಂಕು ಹೆಚ್ಚುತ್ತಿದ್ದಂತೆಯೇ ಬಹುತೇಕರು ತವರಿಗೆ ಮರಳಿದ್ದಾರೆ. ಹೀಗೆ ಮರಳಿದವರು ಯಾವುದೇ ತಪಾಸಣೆಗೆ ಒಳಗಾಗುತ್ತಿಲ್ಲ. ಅಷ್ಟೇ ಯಾಕೆ ಕ್ವಾರಂಟೈನ್ ನಿಯಮವನ್ನೂ ಪಾಲಿಸುತ್ತಿಲ್ಲ.

ಕೊರೊನಾ ಕರ್ಪ್ಯೂ ಇದ್ದರೂ ಕೂಡ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿ ಅವಕಾಶ ಕಲ್ಪಿಸಿದ್ದರೂ ಕೂಡ ಎಲ್ಲೆಡೆಗಳಲ್ಲಿ ಜನರು ಕಂಡು ಬರುತ್ತಿದ್ದಾರೆ. ಕರ್ಪ್ಯೂ ಇದ್ದರೂ ಯಾವುದೇ ಬದಲಾವಣೆ ಕಂಡು ಬರುತ್ತಿಲ್ಲ. ಬಹುತೇಕರಿಗೆ ರಜೆ ಇರೋದ್ರಿಂದಾಗಿ ಪೇಟೆ, ಅಂಗಡಿಗಳ ಮುಂಭಾಗದಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿಯೇ ಜನರು ಕಂಡುಬರುತ್ತಿದ್ದಾರೆ.

ದುರಂತವೆಂದರೆ ಕೊರೊನಾ ಹಿನ್ನೆಲೆಯಲ್ಲಿ ಮದುವೆಗೆ 50 ಜನರಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ. ಆದರೆ ಬಹುತೇಕ ಮದುವೆಗಳಲ್ಲಿ ಸರಕಾರದ ನಿಯಮ ಪಾಲನೆಯಾಗುತ್ತಿಲ್ಲ. ಮದುವೆಗೆ ಪಾಸ್ ಕಡ್ಡಾಯಗೊಳಿಸಿದ್ರೂ ಕೂಡ ಮದುವೆಗಳ ಮೇಲೆ ಅಧಿಕಾರಿಗಳು ನಿಗಾ ವಹಿಸುತ್ತಿಲ್ಲ. ಮದುವೆಯ ನೆಪದಲ್ಲಿ ಮೆಹಂದಿ, ರಿಸೆಪ್ಶನ್, ನೈಟ್ ಪಾರ್ಟಿ ಎಗ್ಗಿಲ್ಲದೇ ನಡೆಯುತ್ತಿದೆ. ಹಲವು ಕಡೆಗಳಲ್ಲಿ ಅಧಿಕಾರಿಗಳ ಗಮನಕ್ಕೆ ಬಾರದೆ ನಡೆದ್ರೆ, ಕೆಲವು ಕಡೆಗಳಲ್ಲಿ ಅಧಿಕಾರಿಗಳಿಗೆ ಗೊತ್ತಿದ್ರೂ ಸುಮ್ಮನಾಗುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಡೆಯುತ್ತಿರುವ ಈ ಸಮಾರಂಭಗಳೇ ಕರಾವಳಿಯಲ್ಲಿ ಕೊರೊನಾ ಹರಡಲು ಪ್ರಮುಖ ಕಾರಣವಾಗುತ್ತಿದೆ.

ಮೊದಲ ಅಲೆಯ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಕೊರೊನಾ ನಿಯಂತ್ರಣ ಮಾಡಿದ್ದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಈ ಬಾರಿ ಅಷ್ಟೊಂದು ಆಸಕ್ತಿ ತೋರಿದಂತೆ ಕಾಣಿಸುತ್ತಿಲ್ಲ. ಜನರು ಇದೇ ರೀತಿಯಲ್ಲಿ ಕೊರೊನಾ ವಿಚಾರವಾಗಿ ಮೈ ಮರೆತರೆ ಅಪಾಯ ಫಿಕ್ಸ್.

Comments are closed.