ತೆಕ್ಕಟ್ಟೆ ಮಾಲಾಡಿಯಲ್ಲಿ ಚಿರತೆ ಪ್ರತ್ಯಕ್ಷ್ಯ : 4 ವರ್ಷದಲ್ಲಿ 6 ಚಿರತೆ ಸೆರೆ

ಕುಂದಾಪುರ : (Leopard sighting) ಕಳೆದ ನಾಲ್ಕೈದು ವರ್ಷಗಳಿಂದಲೂ ಇಲ್ಲಿನ ಗ್ರಾಮಸ್ಥರು ಸರಿಯಾಗಿ ನಿದ್ದೆ ಮಾಡಿಲ್ಲ. ಕತ್ತಲಾದ್ರೆ ಸಾಕು ಜನರಿಗೆ ಚಿರತೆಯ ಭಯ ಕಾಡುವುದಕ್ಕೆ ಶುರುವಾಗುತ್ತೆ. ಹೊತ್ತಿನ ತುತ್ತನ್ನು ಅರಸಿ ಹೊರಟವರು ಕೂಡ ಕತ್ತಲಾಗುವುದರ ಒಳಗಾಗಿ ಮನೆ ಸೇರುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ ಆರು ಚಿರತೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಆದ್ರೀಗ ಮತ್ತೆ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಮಾಲಾಡಿ ಪರಿಸರದಲ್ಲೀಗ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಸಂಜೆಯ ಹೊತ್ತಲ್ಲಿ ಚಿರತೆ ನಾಯಿಯನ್ನು ಹೊತ್ತೊಯ್ಯುತ್ತಿರುವುದನ್ನು ಬೈಕ್ ಸವಾರರು ನೋಡಿದ್ದಾರೆ. ನಂತರದಲ್ಲಿ ಚಿರತೆ ಕಾಡಿನೊಳಗೆ ಮರೆಯಾಗಿದೆ. ಈ ಘಟನೆಯ ಬೆನ್ನಲ್ಲೇ ಇದೀಗ ಮಾಲಾಡಿ ಪರಿಸರದಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ದೇವಾಡಿಗ ಅವರ ಪತಿ ಸುರೇಶ್ ದೇವಾಡಿಗ ಅವರ ಮನೆಯ ಬಳಿಯಲ್ಲಿ ನಾಯಿ ಬೊಗಳುವ ಶಬ್ದ ಕೇಳಿಬಂದಿದೆ. ಅಲ್ಲದೇ ಮನೆ ಮಂದಿ ಮನೆಯ ಅಂಗಳದಲ್ಲಿ ಚಿರತೆ ಓಡುವ ದೃಶ್ಯವನ್ನು ಕಣ್ಣಾರೆ ಕಂಡಿದ್ದಾರೆ.

ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿಷಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಭಾಗದಲ್ಲಿ ಚಿರತೆ ಕಾಟ ಹೆಚ್ಚಾಗಿ ಇರುವುದರಿಂದಾಗಿ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯ ಬೇಕೆಂದು ಆಗ್ರಹಿಸಿದ್ದಾರೆ.

ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿಯಲ್ಲಿ ಕಳೆದ ಐದು ವರ್ಷಗಳಿಂದಲೂ ಚಿರತೆಯ ಭಯ ಆವರಿಸಿದೆ. ಈಗಾಗಲೇ ಸಾಕಷ್ಟು ಬಾರಿ ಚಿರತೆ ನಾಯಿ, ಜಾನುವಾರು ಗಳನ್ನು ತಿಂದು ತೇಗಿದೆ. ಗ್ರಾಮದಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿರುವುದು ಭೀತಿ ಉಂಟು ಮಾಡಿದೆ. ಈಗಾಗಲೇ ಅರಣ್ಯ ಇಲಾಖೆ ಕಳೆದ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ ಆರು ಚಿರತೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. 2018ರಲ್ಲಿ ಮೊದಲ ಬಾರಿಗೆ ಅರಣ್ಯ ಇಲಾಖೆ ಈ ಭಾಗದಲ್ಲಿ ಚಿರೆತೆಯೊಂದನ್ನು ಸೆರೆ ಹಿಡಿದಿತ್ತು. ನಂತರದಲ್ಲಿ 2019ರಲ್ಲಿ ಚಿರತೆಗಳ ಹಾವಳ ಮಿತಿಮೀರಿತ್ತು. ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ನಿರಂತರ ಕಾರ್ಯಾಚರಣೆಯನ್ನು ನಡೆಸಿ ಮೂರು ಚಿರತೆಗಳನ್ನು ಒಂದೇ ವರ್ಷದಲ್ಲಿ ಸೆರೆ ಹಿಡಿದಿದ್ದರು. ಆದರೆ ನಂತರದ ಮೂರು ವರ್ಷಗಳ ಕಾಲ ಚಿರತೆಯ ಕಾಟವಿದ್ದರೂ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಚಿರತೆ ಚಳ್ಳೆಹಣ್ಣು ತಿನ್ನಿಸಿತ್ತು. ಆದರೆ ಕಳೆದ ಎಪ್ರಿಲ್ ತಿಂಗಳಲ್ಲಿ ಆಪರೇಷನ್ ಚಿರತೆ ಕಾರ್ಯಾಚರಣೆ ನಡೆಸಿ ಚಿರತೆಯೊಂದನನ್ನು ಸೆರೆ ಹಿಡಿದಿದ್ದರು.

ಈ ಭಾಗದಲ್ಲಿ ನೂರಾರು ಮನೆಗಳಿದ್ದು ಜನರು ಮನೆಯಲ್ಲಿ ನೆಮ್ಮದಿಯಿಲ್ಲದೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕ ಪಡುವ ಸ್ಥಿತಿ ಎದುರಾಗಿದೆ. ಕೆಲಸಕ್ಕೆ ತೆರಳುವ ಜನರು ಕೂಡ ಕತ್ತಲು ಹರಿಯುವುದರ ಒಳಗೆ ಮನೆ ಸೇರಬೇಕಾಗಿದೆ. ಸದಾ ಚಿರತೆಯ ಭಯದಲ್ಲಿ ದಿನದೂಡುತ್ತಿರುವ ಇಲ್ಲಿನ ಜನರ ಭಯ ನಿವಾರಣೆ ಮಾಡುವ ಸಲುವಾಗಿ ಅರಣ್ಯ ಇಲಾಖೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ.

ಇದನ್ನೂ ಓದಿ : ಮಂಗಳೂರಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಪೋಟ

ಇದನ್ನೂ ಓದಿ : Bus overturns in Kerala: ಶಬರಿಮಲೆ ಯಾತ್ರಾರ್ಥಿಗಳ ಬಸ್‌ ಪಲ್ಟಿ: 18 ಮಂದಿಗೆ ಗಾಯ

Leopard sighting in Thekkatte Maladi 6 leopards captured in 4 years

Comments are closed.