Leopards Fear : ಶಿರಿಯಾರ ಭಾಗದಲ್ಲಿ ಚಿರತೆ ಕಾಟ, ಆತಂಕದಲ್ಲಿ ಜನತೆ, ಗಾಢನಿದ್ರೆಯಲ್ಲಿ ಜನಪ್ರತಿನಿಧಿಗಳು

ಕೋಟ : ಇಲ್ಲಿನ ಜನರು ಸರಿಯಾಗಿ ನಿದ್ದೆ ಮಾಡಿ ಐದರಿಂದ ಆರು ತಿಂಗಳೇ ಕಳೆದು ಹೋಗಿದೆ. ಕತ್ತಲಾದ್ರೆ ಸಾಕು ಚಿರತೆಯ ಭಯ ಇಲ್ಲಿನ ಗ್ರಾಮಸ್ಥರನ್ನು ಕಾಡುತ್ತಿದೆ. ಮನೆಯಲ್ಲಿ ಸಾಕಿದ್ದ ನಾಯಿಗಳನ್ನು ಕೊಂದು ತಿನ್ನುತ್ತಿರುವ ಚಿರತೆಯಿಂದಾಗಿ ( Leopards Fear) ಪ್ರಾಣ ಭೀತಿ ಎದುರಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಬೋನ್‌ ಇಟ್ಟಿದ್ದರೂ ಕೂಡ ಪ್ರಯೋಜನಕ್ಕೆ ಬರುತ್ತಿಲ್ಲ. ಚಿರತೆಯ ಭಯವನ್ನು ಹೊಗಲಾಡಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೂ ಅವರು ನಿದ್ರೆಯಿಂದ ಏಳುವ ಲಕ್ಷಣ ಗೋಚರಿಸುತ್ತಿಲ್ಲ. ಅಷ್ಟಕ್ಕೂ ಇಂತಹ ಸಂಕಷ್ಟದ ಸ್ಥಿತಿ ಎದುರಾಗಿರುವುದು ಶಿರಿಯಾರ ಸುತ್ತಮುತ್ತಲಿನ ಗ್ರಾಮಗಳಲ್ಲಿ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿನ ಪಡುಮಂಡು, ತೆಂಕಬೈಲು, ಕುದ್ರಿಕಟ್ಟೆ, ಕದ್ಲಹಕ್ಲು, ಮೆಕ್ಕೆಕಟ್ಟೆ ಭಾಗದಲ್ಲಿ ಕಳೆದ ಐದಾರು ತಿಂಗಳಿನಿಂದಲೂ ಚಿರತೆಗಳ ಕಾಟ ಶುರುವಾಗಿದೆ. ಸಂಜೆ ಆರು ಗಂಟೆಯಾಗುತ್ತಲೇ ರಸ್ತೆಯಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ಇನ್ನು ಹೊತ್ತು ಸರಿಯುತ್ತಲೇ ಚಿರತೆಗಳು ಮನೆಯ ಅಂಗಳಕ್ಕೆ ಎಂಟ್ರಿ ಕೊಡುತ್ತಿವೆ. ಇದರಿಂದಾಗಿ ಜನರು ಮನೆಯಲ್ಲಿ ನೆಮ್ಮದಿಯಿಂದ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಈಗಾಗಲೇ ಹತ್ತರಿಂದ ಹದಿನೈದು ನಾಯಿಗಳನ್ನು ಚಿರತೆಗಳು ಕೊಂದು ಮುಗಿಸಿವೆ.

ಶಿರಿಯಾರ ಗ್ರಾಮ ಪಂಚಾಯತ್‌ ಸುತ್ತಮುತ್ತಲಿನ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯೊಂದಿದ್ದು, ಮಕ್ಕಳನ್ನು ನಿತ್ಯವೂ ಶಾಲೆಗೆ ಕಳುಹಿಸಲು ಕೂಡ ಜನರು ಭಯ ಪಡುತ್ತಿದ್ದಾರೆ. ಇನ್ನು ಕೆಲಸಕ್ಕೆಂದು ದೂರದ ಊರುಗಳಿಗೆ ತೆರಳುವವರೂ ಕೂಡ ಕತ್ತಲಾಗುತ್ತಲೇ ಮನೆ ಸೇರಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನೂ ಕೂಡ ಚಿರತೆಗಳು ಅಡ್ಡಗಟ್ಟುತ್ತಿವೆ. ಗ್ರಾಮದಲ್ಲಿನ ಹಲವು ಚಿರತೆಗಳನ್ನು ಕಣ್ಣಾರೆ ಕಂಡಿದ್ದಾರೆ. ಇನ್ನು ದರ್ಶನ್‌ ಶೆಟ್ಟಿ ಎಂಬವರರ ಮನೆಯ ಬಳಿಯಲ್ಲಿ ಸಂಜೆಯ ಹೊತ್ತಲ್ಲೇ ಚಿರತೆ ಕಾಣಿಸಿಕೊಂಡಿದ್ದು ಆತಂಕವನ್ನು ತಂದೊಡ್ಡಿದೆ.

ಪಡುಮಂಡು, ತೆಂಕಬೈಲು, ಕುದ್ರಿಕಟ್ಟೆ, ಕದ್ಲಹಕ್ಕು ಸುತ್ತಮುತ್ತಲೂ ಸುಮಾರು ನಾಲ್ಕರಿಂದ ಐದು ಚಿರತೆಗಳಿರುವುದನ್ನು ಜನರು ಕಂಡಿದ್ದಾರೆ. ಜೊತೆಗೆ ಚಿರತೆ ಮರಿ ಹಾಕಿದ್ದು ಚಿರತೆಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುವ ಸಾಧ್ಯತೆಯಿದೆ. ಚಿರತೆಯ ಭಯವನ್ನು ಹೊಗಲಾಡಿಸುವಂತೆ ಈಗಾಗಲೇ ಶಿರಿಯಾರ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದ್ರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೋನ್‌ ಇರಿಸಿದ್ದಾರೆ. ಆದ್ರೆ ಬೋನಿನ ಬಳಿಗೆ ಚಿರತೆ ಬಂದ್ರೂ ಕೂಡ ಬೋನಿನ ಒಳಗೆ ಬರುತ್ತಿಲ್ಲ. ಜನಪ್ರತಿನಿಧಿಗಳು ಇನ್ನಾದ್ರು ಎಚ್ಚೆತ್ತು ಶಿರಿಯಾರ ಸುತ್ತಮುತ್ತಿನ ಗ್ರಾಮಗಳಲ್ಲಿನ ಜನರ ಸಮಸ್ಯೆಯನ್ನು ಆಲಿಸಬೇಕಾಗಿದೆ. ನಾಯಿಗಳನ್ನು ಕೊಲ್ಲುತ್ತಿರುವ ಚಿರತೆ ಜನರ ಮೇಲೆ ದಾಳಿ ಮಾಡುವ ಮೊದಲೇ ಎಚ್ಚರಿಕೆಯನ್ನವಹಿಸಬೇಕಾಗಿದೆ.

ಇದನ್ನೂ ಓದಿ : Shiradi Ghat travel ban : ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್‌

ಇದನ್ನೂ ಓದಿ : ಮಕ್ಕಳ ಕೈಗೆ ಚಾಕಲೇಟ್‌ ನೀಡುವ ಮುನ್ನ ಹುಷಾರ್‌ : ಬೈಂದೂರಲ್ಲಿ ಚಾಕಲೇಟ್ ನುಂಗಿ ಉಸಿರುಗಟ್ಟಿ ಶಾಲಾ ಬಾಲಕಿ ಸಾವು

Leopards Fear in Shiriyara Brahamavar Udupi

Comments are closed.