Narthaki bar assault case: ನರ್ತಕಿ ಬಾರ್ ಹಲ್ಲೆ ಪ್ರಕರಣ : ವಿಡಿಯೋ ವೈರಲ್, ಇನ್ನಿಬ್ಬರು ಆರೋಪಿಗಳ ವಿರುದ್ದ ದಾಖಲಾಗಿಲ್ಲ ಪ್ರಕರಣ ?

ಕೋಟ : (Narthaki bar assault case) ಸಾಲಿಗ್ರಾಮದ ನರ್ತಕಿ ಬಾರ್ ನಲ್ಲಿ ನಡೆದಿರುವ ಮಾಲೀಕರ ಮೇಲಿನ ಹಲ್ಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗದೇ ಇರುವುದು ಹಲವು ಅನುಮಾನ ಗಳನ್ನು ಹುಟ್ಟುಹಾಕಿದೆ. ಈ ನಡುವಲ್ಲೇ ಬಾರ್ ಮಾಲೀಕರ ಮೇಲೆ ನಡೆದಿರುವ ಹಲ್ಲೆ ಪ್ರಕರಣದ ವಿಡಿಯೋ ಇದೀಗ ವೈರಲ್ ಆಗಿದೆ.

ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಬೇಕರಿಯಲ್ಲಿ ಕರಾವಳಿ ಯುವಕರ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣದ ಕಹಿ ನೆನಪು ಮಾಸುವ ಮೊದಲೇ ಮತ್ತೊಂದು ಪ್ರಕರಣ ಇದೀಗ ಕರಾವಳಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ನರ್ತಕಿ ಬಾರ್ ನಲ್ಲಿ ನಡೆದಿರುವ ಹಲ್ಲೆ ಪ್ರಕರಣ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಗರಂ ಆಗಿದ್ದಾರೆ. ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಿತ್ರಪಾಡಿಯ ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವ ಭಾಗದಲ್ಲಿರುವ ನರ್ತಕಿ ಬಾರ್ ಸರಿಸುಮಾರು 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ  ಈ ಬಾರ್ ಗೆ ನಿತ್ಯವೂ ನೂರಾರು ಮಂದಿ ಗ್ರಾಹಕರು ಆಗಮಿಸುತ್ತಿದ್ದಾರೆ.

ಈ ಭಾಗದಲ್ಲಿನ ಜನರಿಗೆ ಮಾಲೀಕರು ಚಿರಪರಿಚಿತರು. ನರ್ತಕಿ ಫ್ಯಾಮಿಲಿ ರೆಸ್ಟೋರೆಂಟ್ ಅನ್ನು ಸದ್ಯ ಮಾಲಕರ ಮಕ್ಕಳಾದ ರಿತೇಶ್ ಮತ್ತು ರಾಹುಲ್ ಶೆಟ್ಟಿ ನೋಡಿಕೊಳ್ಳುತ್ತಿದ್ದಾರೆ‌. ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಹಾಲ್ ನಲ್ಲಿ ಗುಂಪೊಂದು ಪಾರ್ಟಿಯನ್ನು  ಆಯೋಜನೆ ಮಾಡಿತ್ತು. ಪಾರ್ಟಿ ನಡೆಯುತ್ತಿದ್ದ ಸಂದರ್ಭದಲ್ಲಿ  ಮತ್ತೊಂದು ಟೇಬಲ್ ನಲ್ಲಿ ಕುಳಿತಿದ್ದ ತಂಡದ ಜೊತೆಗೆ  ವಾಗ್ವಾದ ಆರಂಭವಾಗಿದೆ. ಈ ವೇಳೆಯಲ್ಲಿ ಗಲಾಟೆ ಬಿಡಿಸಲು ತೆರಳಿದ ಬಾರ್ ಮಾಲಕ ರಿತೇಶ್ ಮತ್ತು ರಾಹುಲ್ ಶೆಟ್ಟಿ ಗಲಾಟೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

ಆದರೆ  ಕೋಪಗೊಂಡ ಏಳು ಜನರ ತಂಡ ಏಕಾಏಕಿ ಬಾರ್ ಮಾಲಕರ ಮೇಲೆಯೇ ಹಲ್ಲೆಗೆ ಇಳಿದಿದೆ.  ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಒಡೆದು, ನೆಲ ಮೇಲೆ ಹಾಕಿ ತುಳಿದ ಪರಿಣಾಮ ರಾಹುಲ್ ಶೆಟ್ಟಿ ಅವರ ತಲೆಯ ಎಡಭಾಗಕ್ಕೆ ಗಂಭೀರ ಸ್ವರೂಪದ  ಗಾಯವಾಗಿದ್ದು, ಕಣ್ಣಿಗೆ ಪೆಟ್ಟಾಗಿದೆ. ಜೊತೆಗೆ ರಿತೇಶ್ ಶೆಟ್ಟಿ ಅವರಿಗೂ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಬಾರ್ ಮಾಲೀಕರು ಏಳು ಮಂದಿಯ ವಿರುದ್ದ ದೂರು ನೀಡಿದ್ದಾರೆ. ಆದರೆ ಪೊಲೀಸರು ರೋಹಿತ್, ರಂಜಿತ್, ಸಚಿನ್, ಶಶಾಂಕ್, ವಿಘ್ನೇಶ್ ವಿರುದ್ದ ಮಾತ್ರವೇ ಕೋಟ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಇನ್ನಿಬ್ಬರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸದೇ ಇರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸಿದೆ. ಇನ್ನು ಪ್ರಭಾವಿ ರಾಜಕಾರಣಿಯೋರ್ವರು ಕೃಪಾಕಟಾಕ್ಷದಿಂದ ಪ್ರಮುಖ ಆರೋಪಿಗಳನ್ನು ಪ್ರಕರಣದಿಂದ ದೂರ ಇಡುವ ಪ್ರಯತ್ನ ನಡೆಯುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಪಾರ್ಟಿಯ ವೇಳೆಯಲ್ಲಿ ಗಲಾಟೆ ತಪ್ಪಿಸಲು ತೆರಳಿದ ಮಾಲೀಕರ ಮೇಲೆಯೇ ಹಲ್ಲೆ ನಡೆದಿರುವುದು ದುರಂತ.

ಇದನ್ನೂ ಓದಿ : Bengaluru Hit and run: ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ: ಎಮ್‌ಬಿಎ ವಿದ್ಯಾರ್ಥಿನಿ ಗಂಭೀರ ಗಾಯ

ಯಾಕೆ ಹಲ್ಲೆ ನಡೆದಿದೆ ಅನ್ನೋದು ಗೊತ್ತೇ ಇಲ್ಲ : ರಿತೇಶ್ ಶೆಟ್ಟಿ

ಇನ್ನು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿ ನಡೆಸುತ್ತಿದ್ದವರು ಯಾಕೆ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಅನ್ನೋದು ನನಗೆ ಗೊತ್ತೇ ಇಲ್ಲ. ಪೊಲೀಸರು ತನ್ನ ತಮ್ಮನಿಂದ ದೂರು ದಾಖಲಿಸಿಕೊಂಡಿದ್ದಾರೆ. ಆದರೆ ನನ್ನ ಹೇಳಿಕೆಯನ್ನು ಇನ್ನೂ ಪಡೆದುಕೊಂಡಿಲ್ಲ. ಘಟನೆಯಲ್ಲಿ ಒಟ್ಟು ಏಳು ಮಂದಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಇನ್ನೂ ಇಬ್ಬರು ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿಲ್ಲ. ಪೊಲೀಸರು ಇಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಪ್ರಕರಣ‌ ಇನ್ನೂ ದಾಖಲಾಗಿಲ್ಲ ಎಂದು newsnext.live ಗೆ ಮಾಹಿತಿ ನೀಡಿದ್ದಾರೆ.

Narthaki bar assault case: Narthaki bar assault case: Video viral, case not registered against two more accused?

Comments are closed.