ಸಾಸ್ತಾನ : ವಿಜಯನಗರದ ದೊರೆ ಇಮ್ಮಡಿ ದೇವರಾಯನ ಶಾಸನ ಪತ್ತೆ

ಕೋಟ : ವಿಜಯನಗರ ಸಾಮ್ರಾಜ್ಯದ ದೊರೆ ಇಮ್ಮಡಿ ದೇವಾರಾಯನ ಕಾಲ ಶಾಸನ ಉಡುಪಿ ಜಿಲ್ಲೆಯ ಸಾಸ್ತಾನದ ಪಾಂಡೇಶ್ವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೆಂಕಬೆಟ್ಟು ಎಂಬಲ್ಲಿ ಪತ್ತೆಯಾಗಿದೆ.

ತೆಂಕಬೆಟ್ಟು ನಿವಾಸಿಯಾಗಿರುವ ಶ್ರೀನಿವಾಸ ಭಟ್ ಅವರ ಮನೆಯ ಹಿಂಭಾಗದ ಬಾವಿಯ ಸಮೀಪದಲ್ಲಿ ಶಾಸನವೊಂದು ಪತ್ತೆಯಾಗಿದೆ. ಈ ಶಾಸನ ಸುಮಾರು 14 ನೇ ಶತಮಾನದ ಶಾಸನ ಎಂದು ಅಂದಾಜಿಸಲಾಗಿದ್ದು, ಇತಿಹಾಸ‌ ಮತ್ತು ಪುರಾತತ್ವ ವಿದ್ವಾಂಸರಾದ ಡಾ| ಎಸ್.ಜಿ. ಸಾಮಕ್ ಅವರು ಪತ್ತೆ ಮಾಡಿದ್ದು, ಇದನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ.

ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು 180 ಸೆಂ.ಮೀ ಎತ್ತರ 60 ಸೆಂ.ಮೀ ಅಗಲವಿದೆ. ಶಾಸನದ ಮೇಲ್ಬಾಗದಲ್ಲಿ ಬ್ರಾಹ್ಮಣ ವಟು ಹಾಗೂ ಇಕ್ಕೆಲಗಳಲ್ಲಿ ಸೂರ್ಯ-ಚಂದ್ರ ಮತ್ತು ಶಂಖ-ಚಕ್ರದ ಉಬ್ಬು ಕೆತ್ತನೆಯಿದೆ. ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನವನ್ನು ಬಾವಿಯ ಹಾಸುಗಲ್ಲಾಗಿ ಬಳಸಿಕೊಂಡಿರುವುದರಿಂದ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು, ಶಾಸನದಲ್ಲಿ ಶಕವರುಷ 1355 (ಕ್ರಿ.ಶ 1433) ನೇ ಪ್ರಮಾದಿ (ಪ್ರಮಾದ) ನಾಮ ಸಂವತ್ಸರದ ಉಲ್ಲೇಖವಿದೆ.

ವಿಜಯನಗರವನ್ನು ಶ್ರೀ ವೀರ ಪ್ರತಾಪ ದೇವರಾಯ ಆಳ್ವಿಕೆ ಮಾಡುತ್ತಿರುವ ಕಾಲದಲ್ಲಿ ಬಾರಕೂರನ್ನು ಅಣಪ್ಪಒಡೆಯ ಪ್ರತಿಪಾಲಿಸುತ್ತಿರುವಾಗ ಬ್ರಾಹ್ಮಣರಿಗೆ ದಾನವನ್ನು ನೀಡಿರುವ ಮಾಹಿತಿಯನ್ನುಈ ಶಾಸನವು ತಿಳಿಸುತ್ತದೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯದ ಕೆಲವೊಂದು ಪದಗಳು ತಿಳಿಯುತ್ತದೆ.

ಇದನ್ನೂ ಓದಿ : ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್‌ ಲಾಕ್‌ಡೌನ್, ನೈಟ್‌ ಕರ್ಪ್ಯೂ ಜಾರಿ

ಇದನ್ನೂ ಓದಿ : ಕೇರಳಕ್ಕೆ ಶ್ರೀಲಂಕಾ ಉಗ್ರರು ನುಸುಳಿರುವ ಶಂಕೆ : ಕರಾವಳಿಯಾದ್ಯಂತ ಹೈ ಅಲರ್ಟ್‌

( Udupi : The inscription of Vijayanagar ruler Immadi Devaraya discovered Pandeshwar Near Sastana )

Comments are closed.