ಅಕ್ರಮ ಮರಳು ಗಣಿಗಾರಿಕೆ ವಿರುದ್ದ ತುರ್ತು ಕ್ರಮ : ಉಡುಪಿ ತಹಶೀಲ್ದಾರ್ ರವಿ ಎಸ್ ಅಂಗಡಿ ಸೂಚನೆ

ಉಡುಪಿ : Udupi illegal sand mining: ಅಕ್ರಮ ಮರಳುಗಾರಿಕೆಯ ವಿರುದ್ದ ಉಡುಪಿ ತಾಲೂಕು ಆಡಳಿತ ಸಮರ ಸಾರಿದೆ. ಈಗಾಗಲೇ ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ತಕ್ಷಣವೇ ಅಧಿಕಾರಿಗಳು ಕಾರ್ಯಪ್ರವೃತರಾಗಿ ಮರಳು ಸಾಗಾಣಿಕೆಯನ್ನು ತಡೆಯಲು ಕ್ರಮಕೈಗೊಳ್ಳುವಂತೆ ಉಡುಪಿ ತಾಲೂಕು ತಹಶೀಲ್ದಾರ್ ರವಿ ಎಸ್ ಅಂಗಡಿ ಸೂಚನೆ ನೀಡಿದ್ದಾರೆ.

ಉಡುಪಿ ತಾಲೂಕು ಕಚೇರಿಯಲ್ಲಿ ಉಡುಪಿ ತಾಲೂಕು ಮರಳು ಉಪಖನಿಜ ಅಕ್ರಮ ಸಾಗಾಣಿಕೆ ( Udupi illegal sand mining), ದಾಸ್ತಾನು ವಿಷಯಗಳ ಕುರಿತು ಟಾಸ್ಕ್ಫೋರ್ಸ್ ಸಮಿತಿ ಸದಸ್ಯರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ್ರು. ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಸೂಚಿಸಲಾದ ಇಲಾಖೆಗಳು ನಿಗಧಿಪಡಿಸಿದ ದಿನಗಳಂದು ಗಸ್ತು ನಡೆಸಿ, ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ವರದಿ ನೀಡುವಂತೆ ತಿಳಿಸಿದ್ದಾರೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಕೆ.ಎಂ ರಾಜು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿನಾಯಕ ಪೂಜಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಿರಿಯ ಭೂ ವಿಜ್ಞಾನಿ ಅಶ್ವಿನಿ, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್, ಉಪ ತಹಶೀಲ್ದಾರ್ ಐರಿನ್ ನೊರೋಹ್ನ, ಮಲ್ಪೆ ವೃತ್ತ ನಿರೀಕ್ಷಕ ಸುರೇಶ್, ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ, ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜಪ್ಪ ಉಪಸ್ಥಿತರಿದ್ದರು.

ಇನ್ನುಕುಂದಾಪುರದಲ್ಲಿ ಅನಧಿಕೃತ ಮರಳು ಸಾಗಣಿಕೆ ಮಾಡುತ್ತಿದ್ದ 5 ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಹಟ್ಟಿಯಂಗಡಿ ಹಾಗೂ ಹೆಮ್ಮಾಡಿ ಪರಿಸರದಲ್ಲಿ ಅಕ್ರಮವಾಗಿ ಮರಳು ಸಾಗಾಟಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಅವರು ಕಾರ್ಯಾಚರಣೆ ನಡೆಸಿ 5 ಟಿಪ್ಪರ್‌ ಲಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಹಟ್ಟಿಯಂಗಡಿ ಗ್ರಾಮದ ಹಟ್ಟಿಕುದ್ರು ಹಾಗೂ ಹೆಮ್ಮಾಡಿ ಗ್ರಾಮದ ಕನ್ನಡಕುದ್ರು ಎಂಬಲ್ಲಿ ಪಂಚ ಗಂಗಾವಳಿ ನದಿಯಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಸಿ, ಸಾಗಾಟ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸ್ವೀಕೃತವಾದ ದೂರಿನ ಮೇರೆಗೆ ಇಲಾಖೆ ಹಿರಿಯ ಭೂವಿಜ್ಞಾನಿ ಸಂದೀಪ್‌ ಜಿ.ಯು ಮಾರ್ಗದರ್ಶನದಲ್ಲಿ ಶುಕ್ರವಾರ ರಾತ್ರಿ 10 ಗಂಟೆಯ ಸುಮಾರಿಗೆ ಹಟ್ಟಿಕುದ್ರು ಎಂಬಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಈ ವೇಳೆ ಮರಳು ದಕ್ಕೆಯಲ್ಲಿದ್ದ 4 ಲಾರಿಗಳ ನು ಹಾಗೂ ರಾತ್ರಿ ಒಂದು ಗಟಮೇಯ ಸುಮಾರಿಗೆ ಕನ್ನಡಕುದ್ರು ಎಂಬಲ್ಲಿ ದಾಳಿ ನಡೆಸಿ ಮರಳು ಸಹಿತ ಒಂದು ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುವವರೆಗೆ ಅನಧಿಕೃತ ಮರಳು ಸಾಗಾಣಿಕೆಗೆ ಬಳಸುತ್ತಿದ್ದ 4 ಲಾರಿಗಳನ್ನು ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಸುಪರ್ದಿಯಲ್ಲಿ ಹಾಗೂ ಒಂದು ಲಾರಿಯನ್ನು ಕುಂದಾಪುರ ಪೊಲೀಸ್‌ ಠಾಣೆ ಸುಪರ್ದಿಯಲ್ಲಿ ಇರಿಸಲಾಗಿದೆ ಎಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಿಳಿಸಿದೆ.

ಇದನ್ನೂ ಓದಿ : ಕುಂದಾಪುರ : ಅನಧಿಕೃತ ಮರಳುಗಾರಿಕೆ, 5 ಲಾರಿಗಳ ವಶ

ಇದನ್ನೂ ಓದಿ : ಮುಸ್ಲಿಂ ಯುವಕನೊಂದಿಗೆ ಬಿಜೆಪಿ ಮಾಜಿ ಶಾಸಕಿ ಮಗಳ ಮದುವೆ ರದ್ದು

Comments are closed.