ಕೊರೊನಾದಿಂದ ಬೀದಿಗೆ ಬಿತ್ತು ಆಟೋ, ಕ್ಯಾಬ್ ಚಾಲಕರ ಬದುಕು : ಕಣ್ಮುಚ್ಚಿ ಕುಳಿತಿದೆ ರಾಜ್ಯ ಸರಕಾರ

0

ಬೆಂಗಳೂರು : ಕೊರೊನಾ ವೈರಸ್ ಮಹಾಮಾರಿಯಿಂದ ಕೇಂದ್ರ ಸರಕಾರ ಲಾಕ್ ಡೌನ್ ಆದೇಶ ಜಾರಿ ಮಾಡಿದೆ. ಹೀಗಾಗಿ ಜನರೆಲ್ಲಾ ಮನೆಯೊಳಗೆ ಬಂಧಿಯಾಗಿದ್ದಾರೆ. ಕಳೆದೊಂದು ತಿಂಗಳಿನಿಂದಲೂ ಆಟೋ, ಟ್ಯಾಕ್ಸಿಗಳು ರಸ್ತೆಗೆ ಇಳಿಯುತ್ತಿಲ್ಲ. ಕೈಯಲ್ಲಿ ದುಡಿಮೆಯಿಲ್ಲದೇ ಚಾಲಕರ ಬದುಕು ನಿಜಕ್ಕೂ ಬೀದಿಗೆ ಬಿದ್ದಿದೆ. ಆದರೆ ಚಾಲಕರಿಗೆ ನೆರವು ನೀಡಬೇಕಾದ ರಾಜ್ಯ ಸರಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ.

ರಾಜ್ಯದಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಆಟೋಗಳಿದ್ದು 10 ಲಕ್ಷಕ್ಕೂ ಅಧಿಕ ಆಟೋ ಚಾಲಕರಿದ್ದಾರೆ. ಇನ್ನು 10 ಲಕ್ಷಕ್ಕೂ ಅಧಿಕ ಟ್ಯಾಕ್ಸಿ, ಕ್ಯಾಬ್ ಗಳಿವೆ. ಬೆಂಗಳೂರು ನಗರದಲ್ಲಿಯೇ ಸುಮಾರು 2 ಲಕ್ಷಕ್ಕೂ ಅಧಿಕ ಆಟೋಗಳು ನಿತ್ಯವೂ ಸಂಚರಿಸುತ್ತಿವೆ. ಅಲ್ಲದೇ ಓಲಾ, ಉಬರ್ ಸೇರಿದಂತೆ ಖಾಸಗಿ ಟ್ಯಾಕ್ಸಿಗಳನ್ನೇ ನಂಬಿಕೊಂಡು ರಾಜ್ಯದಾದ್ಯಂತ ಲಕ್ಷಾಂತರ ಮಂದಿ ಚಾಲಕರು ಬದುಕು ಕಟ್ಟಿಕೊಂಡಿದ್ದಾರೆ.

ಆದ್ರೀಗ ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಚಾಲಕರು ದುಡಿಮೆಯಿಲ್ಲದೇ ಮನೆಯಲ್ಲಿಯೇ ಉಳಿದಿದ್ದಾರೆ. ಮೇ 3ರ ವರೆಗೆ ಲಾಕ್ ಡೌನ್ ಆದೇಶವಿದ್ದು, ತದನಂತರದಲ್ಲಿ ಆಟೋ ಹಾಗೂ ಟ್ಯಾಕ್ಸಿಗಳು ರಸ್ತೆಗೆ ಇಳಿಯುತ್ತೇ ಅನ್ನೋದು ಗ್ಯಾರಂಟಿಯಿಲ್ಲ. ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹೊರತು ಚಾಲಕರಿಗೆ ಕೆಲಸ ಲಭಿಸೋದು ಕೂಡ ಅನುಮಾನ.

ಆದರೆ ಮೂರು ತಿಂಗಳ ಅವಧಿಯಲ್ಲಿ ಕೇಂದ್ರ ಸರಕಾರ ಬ್ಯಾಂಕ್ ಗಳಲ್ಲಿ ಮಾಡಿರೋ ಸಾಲದ ಮೇಲಿನ ಇಎಂಐ ಪಾವತಿಗೆ ವಿನಾಯಿತಿಯನ್ನು ನೀಡಿತ್ತು. ಆದರೆ ಸಾಲದ ಮೇಲಿನ ಬಡ್ಡಿಯನ್ನು ಬ್ಯಾಂಕುಗಳು ಪಾವತಿಸುವಂತೆ ಹೇಳುತ್ತಿವೆ. ದುಡಿಮೆಯಿಲ್ಲದೇ ಬಡ್ಡಿಯ ಹಣವನ್ನು ಹೇಗೆ ಪಾವತಿಸುವುದು ಅಂತಾ ಚಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನೂ ಬಹುತೇಕ ಆಟೋ ಚಾಲಕರು ಕೈಸಾಲ, ಫೈನಾನ್ಸ್ ಗಳಲ್ಲಿ ಸಾಲ ಪಡೆದಿದ್ದಾರೆ. ಆದರೆ ಆ ಹಣ ಪಾವತಿ ಮಾಡೋದು ಕೂಡ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇನ್ನೊಂದೆಡೆ ನಿತ್ಯದ ದುಡಿಮೆಯನ್ನೇ ನೆಚ್ಚಿಕೊಂಡು ಬದುಕುಕಟ್ಟಿಕೊಂಡಿದ್ದ ಬಡ ಆಟೋ ಚಾಲಕರಿಗೆ ಕುಟುಂಬ ನಿರ್ವಹಣೆಗೆ ಕಷ್ಟಸಾಧ್ಯವಾಗಿದೆ. ಈ ನಡುವಲ್ಲೇ ಇನ್ಯುರೆನ್ಸ್ ಪಾವತಿ, ವಾಹನ ಪರವಾನಗಿ ನವೀಕರಣ, ವಾಹನಗಳ ದುರಸ್ಥಿಗೆ ಹಣ ಹೊಂದಿಸುವುದು ಕಷ್ಟಸಾಧ್ಯವಾಗಿದೆ.

ದೆಹಲಿ ಸೇರಿದಂತೆ ಇತರ ರಾಜ್ಯಗಳು ಚಾಲಕರಿಗೆ ಸಹಾಯಹಸ್ತವನ್ನು ಚಾಚಿವೆ. ಚಾಲಕರ ಖಾತೆಗೆ 5,000 ದಿಂದ 10,000 ರೂಪಾಯಿ ಸಹಾಯಧನವನ್ನು ವಿತರಿಸಿವೆ. ಆದರೆ ಕರ್ನಾಟಕ ಸರಕಾರ ಮಾತ್ರ ಇದುವರೆಗೂ ಚಾಲಕರ ಸಮಸ್ಯೆಯನ್ನು ಆಲಿಸಿಲ್ಲ. ಕಳೆದ ಬಜೆಟ್ ನಲ್ಲಿ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರಕಾರ 40 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

ಆದ್ರೀಗ ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಾದ್ರೂ ಮೀಸಲಿಟ್ಟಿರುವ ಹಣವನ್ನು ಸಂಕಷ್ಟದಲ್ಲಿರುವ ಆಟೋ, ಟ್ಯಾಕ್ಸಿ ಚಾಲಕರಿಗೆ ಬಿಡುಗಡೆ ಮಾಡಿ ಅನ್ನೋ ಕೂಗು ಕೇಳಿ ಬಂದಿದೆ. ಅಲ್ಲದೇ ರಾಜ್ಯ ಸರಕಾರ ಬಡ್ಡಿ ರಹಿತವಾಗಿ 50,000 ರೂಪಾಯಿ ಸಾಲವನ್ನಾದ್ರೂ ನೀಡಲಿ ಅಂತಾ ಚಾಲಕರು ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ಇನ್ನೊಂದೆಡೆ ಓಲಾ ಹಾಗೂ ಉಬರ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದ ಚಾಲಕರ ಖಾತೆಯಿಂದ ಅಕ್ರಮವಾಗಿ ಶೇ.30ರಷ್ಟು ಹಣವನ್ನು ಕಂಪೆನಿಗಳು ಪಡೆದುಕೊಂಡಿವೆ. ಆ ಹಣವನ್ನು ಸರಕಾರ ಕೊಡಿಸಿದ್ರೆ ಲಕ್ಷಾಂತರ ಮಂದಿ ಚಾಲಕರಿಗೆ ಅನುಕೂಲವಾಗುತ್ತಿತ್ತು. ಕೆಲವು ಕಡೆಗಳಲ್ಲಿ ಮಾನವೀಯತೆಯಿಂದ ಸೇವಾ ಸಂಸ್ಥೆಗಳು ಅಗತ್ಯವಸ್ತುಗಳ ಕಿಟ್ ವಿತರಿಸಿವೆ.ವರ್ಷಂಪ್ರತಿ ಆಟೋ ಚಾಲಕರಿಂದಲೇ ರಾಜ್ಯ ಸರಕಾರದ ಬೊಕ್ಕಸಕ್ಕೆ ಸುಮಾರು 1846 ಕೋಟಿ ರೂಪಾಯಿ ಹರಿದು ಬರುತ್ತಿದೆ. ಆದರೆ ರಾಜ್ಯ ಸರಕಾರಕ್ಕೆ ಚಾಲಕರು ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಇದುವರೆಗೂ ಆಟೋ ಚಾಲಕರ ಹಾಗೂ ಟ್ಯಾಕ್ಸಿ ಚಾಲಕರ ಕಣ್ಣೀರು ಒರಿಸೋ ಕಾರ್ಯವನ್ನು ಸರಕಾರ ಮಾಡಿಲ್ಲ. ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸಿದ್ರೆ ಚಾಲಕರ ಬದುಕು ಇನ್ನಷ್ಟು ಸಂಕಷ್ಟಕ್ಕೀಡು ಮಾಡೋದು ಖಚಿತ. ಇನ್ನಾದ್ರೂ ದೆಹಲಿ ಮಾದರಿಯಲ್ಲಿಯೇ ರಾಜ್ಯ ಸರಕಾರ ಚಾಲಕರಿಗೆ ಸಹಾಯಧನವನ್ನು ವಿತರಿಸಬೇಕಾದ ಅನಿವಾರ್ಯತೆಯಿದೆ.

Leave A Reply

Your email address will not be published.