ಅಮೇರಿಕಾದಲ್ಲಿ ಮಕ್ಕಳನ್ನೇ ಕಾಡುತ್ತಿದೆ ಕೊರೊನಾ : 2 ವಾರದಲ್ಲಿ 1 ಲಕ್ಷ ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿದೆ ಸೋಂಕು !

0

ವಾಷಿಂಗ್ಟನ್: ಕೊರೊನಾ ಹೆಮ್ಮಾರಿ ವಿಶ್ವವನ್ನೇ ನಡುಗಿಸುತ್ತಿದೆ. ಮಹಾಮಾರಿ ವೈರಸ್ ಸೋಂಕಿಗೆ ವಿಶ್ವದ ದೊಡ್ಡಣ್ಣ ಎಂದೇ ಕರೆಯಿಸಿಕೊಳ್ಳುವ ಅಮೇರಿಕಾ ನಲುಗಿ ಹೋಗಿದೆ. ಅದ್ರಲ್ಲೂ ವಿದ್ಯಾರ್ಥಿಗಳನ್ನೇ ಕೊರೊನಾ ಹೆಚ್ಚಾಗಿ ಕಾಡುತ್ತಿದ್ದು, ಕಳೆದೆರಡು ವಾರದ ಅವಧಿಯಲ್ಲಿ ಬರೋಬ್ಬರಿ 1 ಲಕ್ಷ ವಿದ್ಯಾರ್ಥಿಗಳಿಗೆ ವೈರಸ್ ಸೋಂಕು ಒಕ್ಕರಿಸಿಕೊಂಡಿದೆ.

ಕೊರೊನಾ ವೈರಸ್ ಸೋಂಕು ಅಮೇರಿಕಾದಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದೆ. ಈಗಾಗಲೇ ಅಮೇರಿಕಾದಲ್ಲಿ ಇದುವರೆಗೆ ಒಟ್ಟು 55.43,734 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

ಈ ಪೈಕಿ 29,07,487 ಮಂದಿ ಈಗಾಗಲೇ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, 30,80,333 ಮಂದಿ ಕೊರೊನಾ ಸೋಂಕಿತರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಆದರೆ 1,72,846 ಮಂದಿ ಕೊರೊನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ.

ಅದ್ರಲ್ಲೂ ವಿದ್ಯಾರ್ಥಿಗಳನ್ನೇ ಹೆಚ್ಚಾಗಿ ಕೊರೊನಾ ಹೆಮ್ಮಾರಿ ಕಾಡುತ್ತಿರುವುದು ಅಮೇರಿಕಾಕ್ಕೆ ತಲೆನೋವು ತರಿಸಿದೆ. ಅಮೇರಿಕಾದಲ್ಲಿ ಇದುವರೆಗೆ ಒಟ್ಟು 3,38,000 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದ್ರಲ್ಲೂ ಶಾಲಾರಂಭವಾದ ನಂತರದ ಎರಡೇ ಎರಡು ವಾರದಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೊನಾ ಹೆಮ್ಮಾರಿ ದೃಢಪಟ್ಟಿದೆ.

ಆರಂಭದಲ್ಲಿ ಮಕ್ಕಳನ್ನು ಕೊರೊನಾ ಹೆಮ್ಮಾರಿ ಅಷ್ಟಾಗಿ ಕಾಡುವುದಿಲ್ಲವೆಂದು ಹೇಳಲಾಗಿತ್ತು. ಆದ್ರೀಗ ಅಮೇರಿಕಾದಲ್ಲಿ ಮಕ್ಕಳಲ್ಲೇ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಅಮೇರಿಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕೂಡ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಶಾಲೆಗಳನ್ನು ಆರಂಭಿಸುವ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಶಾಲೆಯನ್ನು ಆರಂಭಿಸಿ ತದನಂತರದಲ್ಲಿ ಬಾಗಿಲು ಮುಚ್ಚಿವೆ. ಇದೀಗ ಅಮೇರಿಕಾದಲ್ಲಿ ಕಳೆದೆರಡು ವಾರಗಳಲ್ಲಿ ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ವಿಶ್ವದ ಇತರ ರಾಷ್ಟ್ರಗಳಿಗೂ ಆತಂಕ ಮೂಡಿಸಿದೆ.

Leave A Reply

Your email address will not be published.