ಜುಬಿಲಿಯೆಂಟ್ ಕಾರ್ಖಾನೆ ರೀ ಓಪನ್ : ನಂಜನಗೂಡಿಗೆ ಸೋಂಕು ಹರಡಿಸಿದ್ದ ಕಾರ್ಖಾನೆ

0

ಮೈಸೂರು : ನಂಜನಗೂಡಿಗೆ ಕೊರೊನಾ ನಂಜು ಹರಡಿಸಿದ್ದ ಜುಬಿಲಿಯೆಂಟ್ ಕಾರ್ಖಾನೆ ಮತ್ತೆ ಓಪನ್ ಆಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡು ಶೇ.25ರಷ್ಟು ಸಿಬ್ಬಂಧಿಗಳು ಕೆಲಸಕ್ಕೆ ಹಾಜರಾಗಿದ್ದಾರೆ. ಕಾರ್ಖಾನೆ ಆರಂಭದಿಂದಾಗಿ ಸ್ಥಳೀಯರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.

ಅರಮನೆ ನಗರಿ ಮೈಸೂರಿಗೆ ಕೊರೊನಾ ಆತಂಕವನ್ನು ತಂದೊಡ್ಡಿದ್ದ ನಂಜನಗೂಡಿನ ಜುಬಿಲಿಯೆಂಟ್ ಕಾರ್ಖಾನೆ ಕೊರೊನಾ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿತ್ತು. ಕಾರ್ಖಾನೆಯ ಸಂಪರ್ಕದಿಂದಲೇ ಮೈಸೂರಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ಶತಕದಂಚಿಗೆ ತಲುಪಿತ್ತು. ಕಾರ್ಖಾನೆಯ 1,458 ನೌಕರರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಮೈಸೂರಿನಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತರ ಪೈಕಿ ಶೇ.80 ರಷ್ಟು ಮಂದಿ ಜುಬಿಲಿಯೆಂಟ್ ಕಾರ್ಖಾನೆಯ ನೌಕರರೇ ಆಗಿದ್ದರು. ಆದ್ರೀಗ ಮೈಸೂರು ಜಿಲ್ಲಾಡಳಿತದ ಕೈಗೊಂಡ ಮುನ್ನೆಚ್ಚರಿಕಾ ಕ್ರಮದಿಂದಾಗಿ ಮೈಸೂರಿನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸುಮಾರು 60 ದಿನಗಳ ನಂತರ ಜುಬಿಲಿಯೆಂಟ್ ಕಾರ್ಖಾನೆ ಮತ್ತೆ ರಿ ಓಪನ್ ಆಗಿದೆ.

ಕಾರ್ಖಾನೆ ಆರಂಭದ ಕುರಿತು ಸ್ಥಳೀಯ ಶಾಸಕರು ಸೇರಿದಂತೆ ಹಲವರು ವಿರೋಧವನ್ನು ವ್ಯಕ್ತ ಪಡಿಸಿದ್ದರು. ಕೊರೊನಾ ಸೋಂಕಿನ ನಡುವಲ್ಲೇ ಕಾರ್ಖಾನೆ ಚೀನಾದಿಂದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಂಡಿದೆ ಅನ್ನೋ ಆರೋಪವೂ ಕೇಳಿಬಂದಿತ್ತು. ಎಲ್ಲಾ ವಿರೋಧದ ನಡುವಲ್ಲೇ ಕೊರೊನಾ ಸ್ಪ್ರೆಡರ್ ಆಗಿದ್ದ ಜುಬಿಲಿಯೆಂಟ್ ಕಾರ್ಖಾನೆ ಮತ್ತೆ ಓಪನ್ ಆಗಿದೆ. ಶೇ.25 ರಷ್ಟು ಸಿಬ್ಬಂಧಿಗಳು ಕೆಲಸಕ್ಕೆ ಹಾಜರಾಗಿದ್ದಾರೆ.

ಕಾರ್ಖಾನೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕಾರ್ಖಾನೆಯನ್ನು ತೆರೆಯಲಾಗಿದೆ. ಇನ್ನು ಕೊರೊನಾ ಸೋಂಕಿಗೆ ತುತ್ತಾಗಿದ್ದವರು ಚೇತರಿಸಿಕೊಳ್ಳುತ್ತಿದ್ದಾರೆ. ಕಾರ್ಖಾನೆ ಪುನರಾರಂಭವಾಗಿರೋ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ರೆ, ನೌಕರರು ನಿರಾಳರಾಗಿದ್ದಾರೆ.

Leave A Reply

Your email address will not be published.