IPL 2026ರಲ್ಲಿ ಇತಿಹಾಸ ಸೃಷ್ಟಿಸಿದ 15 ವರ್ಷದ ವೈಭವ್ ಸೂರ್ಯವಂಶಿ: ಅಬ್ಬಬ್ಬಾ ಎಷ್ಟೆಲ್ಲಾ ರೆಕಾರ್ಡ್‌

ಕೇವಲ 15ನೇ ವಯಸ್ಸಿನಲ್ಲಿ ಸಿಕ್ಸರ್‌ಗಳ ಸುರಿಮಳೆಗರೆದು ಕ್ರಿಸ್ ಗೇಲ್ ಮತ್ತು ಆ್ಯಂಡ್ರೆ ರಸೆಲ್ ಅವರ ಸಾರ್ವಕಾಲಿಕ ದಾಖಲೆಗಳನ್ನೇ ಅಳಿಸುವ ಮೂಲಕ ಸೂರ್ಯವಂಶಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

Vaibhav Sooryavanshi IPL Records: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಈ ಬಾರಿ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಯಾಗಿದೆ. ಅದ್ರಲ್ಲೂ ರಾಜಸ್ತಾನ ರಾಯಲ್ಸ್‌ ತಂಡದ ಆಟಗಾರ 15 ವರ್ಷದ ಪೋರ ವೈಭವ್‌ ಸೂರ್ಯವಂಶಿ ಆರ್ಭಟಕ್ಕೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಕೇವಲ 15ನೇ ವಯಸ್ಸಿನಲ್ಲಿ ಸಿಕ್ಸರ್‌ಗಳ ಸುರಿಮಳೆಗರೆದು ಕ್ರಿಸ್ ಗೇಲ್ ಮತ್ತು ಆ್ಯಂಡ್ರೆ ರಸೆಲ್ ಅವರ ಸಾರ್ವಕಾಲಿಕ ದಾಖಲೆಗಳನ್ನೇ ಅಳಿಸುವ ಮೂಲಕ ಸೂರ್ಯವಂಶಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಐಪಿಎಲ್‌ನಲ್ಲಿ ವೈಭವ್‌ ಸೂರ್ಯವಂಶಿ IPL ದಾಖಲೆಗಳು

ಅತಿ ವೇಗವಾಗಿ 1,000 ಐಪಿಎಲ್ ರನ್ (Fastest to 1000 IPL Runs)

ಐಪಿಎಲ್‌ನ ಕ್ವಾಲಿಫೈಯರ್‌ 2 ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಹೊಸ ದಾಖಲೆ ಬರೆದಿದ್ದಾರೆ. ಕೇವಲ 440 ಎಸೆತಗಳಲ್ಲಿ 1,000 ಐಪಿಎಲ್ ರನ್ ಪೂರೈಸುವ ಮೂಲಕ ಯಾರೂ ಮಾಡಿರದ ದಾಖಲೆ ಸೃಷ್ಟಿಸಿದ್ದಾರೆ. ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆ್ಯಂಡ್ರೆ ರಸೆಲ್ 545 ಎಸೆತಗಳಲ್ಲಿ ಸಾವಿರ ರನ್‌ ಬಾರಿಸುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದರು.

ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು (Most Sixes in a single Season)

ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿದ ವೈಭವ್ ಸೂರ್ಯವಂಶಿ 14 ವರ್ಷಗಳ ಹಳೆಯ ಕ್ರಿಸ್ ಗೇಲ್ ದಾಖಲೆಯನ್ನು ಬ್ರೇಕ್ ಮಾಡಿದ್ದರು. 2012ರ ಐಪಿಎಲ್ ಸೀಸನ್‌ನಲ್ಲಿ ಕ್ರಿಸ್ ಗೇಲ್‌ ಬರೋಬ್ಬರಿ 59 ಸಿಕ್ಸರ್ ಬಾರಿಸಿದ್ದರು. ಆದರೆ ವೈಭವ್ ಸೂರ್ಯವಂಶಿ ಪ್ರಸಕ್ತ ಸೀಸನ್‌ನಲ್ಲಿ 65ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಪವರ್‌ಪ್ಲೇನಲ್ಲಿ 500 ರನ್ ಗಳಿಸಿದ ಮೊದಲ ಆಟಗಾರ

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಟೂರ್ನಮೆಂಟ್‌ನ ಪವರ್‌ಪ್ಲೇ (ಮೊದಲ 6 ಓವರ್‌ಗಳು) ಅವಧಿಯಲ್ಲಿ 500ಕ್ಕೂ ಹೆಚ್ಚು ರನ್ ಚಚ್ಚಿದ ವಿಶ್ವದ ಮೊದಲ ಆಟಗಾರ ಎಂಬ ವಿಶಿಷ್ಟ ಹೆಗ್ಗಳಿಕೆಗೆ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ. ಸೂರ್ಯವಂಶಿ ಆರ್ಭಟಕ್ಕೆ ಡೇವಿಡ್‌ ವಾರ್ನರ್‌, ಟ್ರಾವೆಸ್‌ ಹೆಡ್‌ ಅವರ ದಾಖಲೆಗಳು ಉಡೀಸ್‌ ಆಗಿವೆ.

ಟಿ20 ಕ್ರಿಕೆಟ್‌ನಲ್ಲಿ ಸೂರ್ಯವಂಶಿ ಮೈಲಿಗಲ್ಲುಗಳು:

ಅತಿ ಹೆಚ್ಚು ಬೌಂಡರಿ : ಒಂದೇ ಐಪಿಎಲ್ ಸೀಸನ್‌ನಲ್ಲಿ 133ಕ್ಕೂ ಹೆಚ್ಚು ಬೌಂಡರಿಗಳನ್ನು (ಫೋರ್ ಮತ್ತು ಸಿಕ್ಸ್) ಬಾರಿಸಿ ಜೋಸ್ ಬಟ್ಲರ್ (128 ಬೌಂಡರಿ) ರೆಕಾರ್ಡ್ ಮುರಿದಿದ್ದಾರೆ.

ಭಾರತೀಯನಿಂದ ಅತಿ ಹೆಚ್ಚು ಸಿಕ್ಸ್ : ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ 12 ಸಿಕ್ಸರ್ ಬಾರಿಸುವ ಮೂಲಕ ಐಪಿಎಲ್ ಇನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ಭಾರತೀಯ ಎನಿಸಿಕೊಂಡಿದ್ದಾರೆ.

ಅನ್‌ಕ್ಯಾಪ್ಡ್ ಆಟಗಾರನ ದಾಖಲೆ : ಐಪಿಎಲ್ ಸೀಸನ್ ಒಂದರಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಅನ್‌ಕ್ಯಾಪ್ಡ್ (ಭಾರತೀಯ ತಂಡಕ್ಕೆ ಆಡದ) ಆಟಗಾರ ಎಂಬ ಕೀರ್ತಿ ಇವರದ್ದಾಗಿದೆ.

ಕಿರಿಯ ವಯಸ್ಸಿನ ಶತಕವೀರ : ಕೇವಲ 15 ವರ್ಷ 29 ದಿನಗಳ ವಯಸ್ಸಿನಲ್ಲಿ ಟಿ20 ಕ್ರಿಕೆಟ್‌ನಲ್ಲಿ 1000 ರನ್ ಹಾಗೂ ಐಪಿಎಲ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ.

ನೂರರ ಗಡಿಯಲ್ಲಿ ಮಿಸ್ ಆದರೂ ನಿಸ್ವಾರ್ಥ ಆಟ: ವೈಭವ್ ಸೂರ್ಯವಂಶಿ ಈ ಸೀಸನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 93 ರನ್ ಮತ್ತು ಹೈದರಾಬಾದ್ ವಿರುದ್ಧ 97 ರನ್‌ ಗಳಿಸಿ ಶತಕದ ಸನಿಹದಲ್ಲಿ ಔಟಾಗಿದ್ದರು. ವೈಯಕ್ತಿಕ ದಾಖಲೆಗಿಂತ ತಂಡದ ರನ್ ರೇಟ್ ಮುಖ್ಯ ಎಂದು ಬಿರುಸಿನ ಬ್ಯಾಟಿಂಗ್ ಮುಂದುವರಿಸಿ ಔಟಾಗುವ ಮೂಲಕ ಈ ಯುವಕ ಕೋಟಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಒಟ್ಟಿನಲ್ಲಿ ಐಪಿಎಲ್‌ ಅನ್ನೋ ಚುಟುಕು ಕ್ರಿಕೆಟ್‌ ಲೋಕದಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ಈ ಪುಟ್ಟ ಪೋರ ಇದೀಗ ವಿಶ್ವ ಕ್ರಿಕೆಟ್‌ನ ಹಾಟ್‌ ಫೇವರೇಟ್‌ ಎನಿಸಿದ್ದಾನೆ. ಕೇವಲ ಎರಡನೇ ಐಪಿಎಲ್‌ ಋತುವಿನಲ್ಲಿ ಚಾಣಾಕ್ಷತೆಯ ಆಟ ಪ್ರದರ್ಶಿಸುತ್ತಿರುವ ವೈಭವ್‌ ಮುಂದಿನ ಐಪಿಎಲ್‌ನಲ್ಲಿ ಯಾವ ತಂಡವನ್ನು ಪ್ರತಿನಿಧಿಸುತ್ತಾನೆ ಅನ್ನೋದು ಕುತೂಹಲ ಮೂಡಿಸಿದೆ.

vaibhav sooryavanshi ipl 2026 records rajasthan royals fastest 1000 runs Gt vs RR

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories