ಭೀಕರ ರಸ್ತೆ ಅಪಘಾತಕ್ಕೆ ಐವರು ಬಲಿ; ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಲಾರಿಗೆ ಡಿಕ್ಕಿ
ಮೃತರನ್ನು ಚಳ್ಳಕೆರೆ ಮೂಲದ ಛಾಯಾಗ್ರಾಹಕರಾದ ರಾಘವೇಂದ್ರ, ಪ್ರಮೋದ್, ರುದ್ರೇಶ್, ಸೋಮು ಮತ್ತು ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ.
ಚಿತ್ರದುರ್ಗ: ನಿಯಂತ್ರಣ ತಪ್ಪಿದ ಕಾರೊಂದು ನಿಂತಿದ್ದ ಲಾರಿಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ತಾಲ್ಲೂಕಿನ ತುಮಕೂರ್ಲಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಮೃತರನ್ನು ಚಳ್ಳಕೆರೆ ಮೂಲದ ಛಾಯಾಗ್ರಾಹಕರಾದ ರಾಘವೇಂದ್ರ, ಪ್ರಮೋದ್, ರುದ್ರೇಶ್, ಸೋಮು ಮತ್ತು ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ.
ದುರಂತ ಸಂಭವಿಸಿದ್ದು ಹೇಗೆ?:
ಮೃತರು ಪ್ರಯಾಣಿಸುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಹಠಾತ್ತನೆ ಕಾರಿನ ಟೈರ್ ಸ್ಫೋಟಗೊಂಡಿದೆ ಎನ್ನಲಾಗಿದೆ. ಟೈರ್ ಸಿಡಿದ ತಕ್ಷಣ ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಪ್ರಬಲವಾಗಿ ಅಪ್ಪಳಿಸಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಜ್ಜುಗುಜ್ಜಾಗಿದ್ದು, ಒಳಗಿದ್ದ ಐದೂ ಜನ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಳ್ಳಕೆರೆಯ ಹೆಸರಾಂತ ಫೋಟೋಗ್ರಾಫರ್‌ಗಳ ನಿಧನಕ್ಕೆ ಸ್ಥಳೀಯರು ಹಾಗೂ ಆಪ್ತರು ತೀವ್ರ ಕಂಬನಿ ಮಿಡಿದಿದ್ದಾರೆ.



