ಮನೆಗೆ ಬಾರಲು ಒಪ್ಪದ ಪತ್ನಿ : ಹೆತ್ತ ಮಕ್ಕಳ ಕತ್ತು ಸೀಳಿ ಕೊಂದ ಪಾಪಿ ತಂದೆ
Thanjavur Crime News: ಮಕ್ಕಳಿಗೆ ತಂದೆ – ತಾಯಿಯೇ ದೇವರು ಎಂದು ಹೇಳುತ್ತಾರೆ. ಆದರೆ ಇಲ್ಲೊಂದು ಕಡೆ ಮುದ್ದು ಕಂದಮ್ಮಗಳ ಪಾಲಿಗೆ ತಂದೆಯೇ ಯಮಸ್ವರೂಪಿಯಾಗಿದ್ದಾನೆ. ಗಂಡ – ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ತಮಿಳುನಾಡಿನಲ್ಲಿ ನಡೆದ ಈ ಪ್ರಕರಣದಲ್ಲಿ ಗಂಡ – ಹೆಂಡತಿ ಜಗಳ ಮಕ್ಕಳ ಕೊಲೆಯಲ್ಲಿ ಅಂತ್ಯ ಕಂಡಿದೆ
ತಮಿಳುನಾಡಿನ ತಾಂಜಾವೂರು ಜಿಲ್ಲೆಯ ಪಟ್ಟುಕೊಟ್ಟೈ ಬಳಿಯ ಪೆರಿಯಕೊಟ್ಟೈ ಗ್ರಾಮದಲ್ಲಿ ಪಾಪಿ ತಂದೆಯೊಬ್ಬ ತನ್ನ ಮೂವರು ಮಕ್ಕಳನ್ನು ಕತ್ತು ಕೊಯ್ದು ಕೊಲೆ ಮಾಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಮಕ್ಕಳನ್ನು ಕೊಂದು ಬಳಿಕ ಸ್ವತಃ ತಾನೇ ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಮಧುಕೂರ್ ಗ್ರಾಮದ ನಿವಾಸಿಯಾಗಿರುವ 38 ವರ್ಷದ ವಿನೋದ್ ಕುಮಾರ್ ಎಂಬಾತ ನಿತ್ಯಾ ಎಂಬಾಕೆಯನ್ನು ವಿವಾಹವಾಗಿದ್ದರು . ಈ ದಂಪತಿಗೆ 11 ವರ್ಷದ ಓವಿಯಾ, 8 ವರ್ಷದ ಕೀರ್ತಿ ಹಾಗೂ 5 ವರ್ಷ ಪ್ರಾಯದ ಈಶ್ವರ್ ಎಂಬ ಮೂವರು ಮಕ್ಕಳಿದ್ದರು ಎನ್ನಲಾಗಿದೆ.
Also Read: ಬರ್ತಡೇ ಪಾರ್ಟಿ : 20 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಈ ದಂಪತಿ ನಡುವೆ ವೈಮನಸ್ಯ ಮೂಡಿದ್ದ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತ್ನಿ ತನ್ನೊಡನೆ ಇರಬೇಕೆಂದು ಬಯಸಿದ್ದ ಆರೋಪಿ ವಿನೋದ್ ಕೆಲ ದಿನಗಳ ಹಿಂದಷ್ಟೇ ಪತ್ನಿಯನ್ನು ಭೇಟಿ ಮಾಡಿ ಒಟ್ಟಿಗೆ ಬಾಳ್ವೆ ನಡೆಸೋಣ ಎಂದು ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಆದರೆ ಆಕೆ ಇದಕ್ಕೆ ನಿರಾಕರಿಸಿದ್ದಾಳೆ.
ಇದರಿಂದ ಕೋಪಗೊಂಡ ವಿನೋದ್ ಮಕ್ಕಳಿಗೆಂದು ಸಿಹಿತಿಂಡಿಗಳನ್ನು ಖರೀದಿಸಿ ತಂದು ಬಳಿಕ ಅವರೆಲ್ಲರ ಕತ್ತು ಸೀಳಿ ಕೊಲೆಗೈಯ್ದಿದ್ದಾನೆ. ಮೂವರು ಮುಗ್ಧ ಕಂದಮ್ಮಗಳ ಜೀವ ತೆಗೆದ ಬಳಿಕ ಮಧುಕೂರು ಪೊಲೀಸ್ ಠಾಣೆಗೆ ತೆರಳಿದ ವಿನೋದ್ ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Also Read: ಕೋಟ : ಮಟ್ಕಾ ಜುಗಾರಿ 3 ಕಡೆ ಪೊಲೀಸರ ದಾಳಿ, 3 ಮಂದಿ ಅರೆಸ್ಟ್
ಇನ್ನು ಆಂಧ್ರಪ್ರದೇಶದ ನಾಗರ್ಕರ್ನೂಲ್ ಜಿಲ್ಲೆಯಲ್ಲಿಯೂ ಇದೇ ಮಾದರಿಯ ಪ್ರಕರಣ ಬೆಳಕಿಗೆ ಬಂದಿದೆ. 36 ವರ್ಷದ ಪಾಪಿ ತಂದೆಯೊಬ್ಬ ತನ್ನ ಮೂವರು ಮಕ್ಕಳನ್ನು ಕೊಂದು, ಶವಗಳಿಗೆ ಬೆಂಕಿ ಹಚ್ಚಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ . ಇದು ಕೂಡ ಕೌಟುಂಬಿಕ ಕಲಹ ಪ್ರಕರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ



