bus stand : ಎಮ್ಮೆಯಿಂದ ಬಸ್​ ತಂಗುದಾಣ ಉದ್ಘಾಟನೆ ಮಾಡಿಸಿದ ಗ್ರಾಮಸ್ಥರು :ಗದಗದಲ್ಲೊಂದು ವಿಚಿತ್ರ ಘಟನೆ

ಗದಗ : bus stand : ಬಸ್​ ನಿಲ್ದಾಣ ಅಥವಾ ಬಸ್​ ತಂಗುದಾಣಗಳು ಸಾರ್ವಜನಿಕರ ಆಸ್ತಿಯಾಗಿರುವುದರಿಂದ ಇದನ್ನು ನೋಡಿಕೊಳ್ಳುವ ಜವಾಬ್ದಾರಿ ಆಯಾ ಕ್ಷೇತ್ರದ ಶಾಸಕರದ್ದಾಗಿರುತ್ತದೆ. ಬಸ್​ ತಂಗುದಾಣುಗಳು ಶಿಥಿಲಾವಸ್ಥೆಗೆ ತಲುಪಿದ್ದರೆ ಅಧಿಕಾರಿಗಳು ಅದನ್ನು ಸರಿಪಡಿಸಬೇಕು . ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಶಾಸಕರಿಗೆ ದೂರು ನೀಡಬೇಕಾಗುತ್ತದೆ. ಆದರೆ ಶಾಸಕರೂ ಎಮ್ಮೆ ಚರ್ಮದವರಾದರೆ..? ಗ್ರಾಮಸ್ಥರು ಏನು ಮಾಡಬೇಕು..?


ಗ್ರಾಮದ ಬಸ್​ ತಂಗುದಾಣವನ್ನು ಉದ್ಘಾಟನೆ ಮಾಡಿಕೊಡಿ ಎಂದು ಗ್ರಾಮದ ಅಧಿಕಾರಿಗಳು ಹಾಗೂ ಶಾಸಕರಿಗೆ ಮನವಿ ಮಾಡಿ ಸುಸ್ತಾದ ಜನತೆಗೆ ತಾವೇ ತಂಗುದಾಣವನ್ನು ನಿರ್ಮಿಸಿ ಎಮ್ಮೆಯ ಕೈಯಿಂದ ಅದರ ಉದ್ಘಾಟನೆ ಮಾಡಿಸಿದ ವಿಚಿತ್ರ ಘಟನೆಯೊಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೇಹೊಸೂರು ಗ್ರಾಮದಲ್ಲಿ ನಡೆದಿದೆ. ಜನರು ಈ ರೀತಿಯಾಗಿ ಆಕ್ರೋಶವನ್ನು ಹೊರಹಾಕಲು ಇಲ್ಲಿನ ಅಧಿಕಾರಿಗಳು ಹಾಗೂ ಶಾಸಕರ ನಿರ್ಲಕ್ಷ್ಯವೇ ಕಾರಣವಾಗಿದೆ.


ಬರೋಬ್ಬರಿ 10 ವರ್ಷಗಳ ಹಿಂದೆ ಬಾಲೇಹೊಸುರು ಗ್ರಾಮದ ತಂಗುದಾಣ ಬಿದ್ದು ಹೋಗಿತ್ತು . ಹೀಗಾಗಿ ಮಳೆಗಾಲದ ಸಮಯದಲ್ಲಿ ಕೆಸರಿನಲ್ಲಿ ನಿಂತು ಬಸ್​ಗೆ ಕಾಯುವುದು ಅಂದರೆ ಇಲ್ಲಿನ ಜನತೆಯ ಪಾಲಿಗೆ ಯಮನರಕವೇ ಆಗಿತ್ತು . ಈ ಸಂಬಂಧ ಅಧಿಕಾರಿಗಳ ಕಿವಿ ಹಿಂಡಿ ಸಾಕಾದ ಗ್ರಾಮಸ್ಥರು ಕೊನೆಗೆ ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಪ್ಪ ಲಮಾಣೀ ಹಾಗೂ ಸಂಸದ ಶಿವಕುಮಾರ್​ ಉದಾಸಿಗೂ ಮನವಿ ಸಲ್ಲಿಸಿದ್ದರು. ಆದರೆ ಈ ಇಬ್ಬರು ಜನಪ್ರತಿನಿಧಿಗಳೂ ಇದನ್ನು ಕಿವಿಗೇ ಹಾಕಿಕೊಂಡಿರಲಿಲ್ಲ.


ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ತಾವೇ ತೆಂಗಿನ ಗರಿಯ ಚಪ್ಪರವನ್ನು ಅಳವಡಿಸಿ ನೂತನ ಬಸ್​ ನಿಲ್ದಾಣವನ್ನು ನಿರ್ಮಿಸಿಕೊಂಡಿದ್ದಾರೆ. ಶಾಸಕ ರಾಮಪ್ಪ ಲವಾಣಿ ಹಾಗೂ ಸಂಸದ ಶಿವಕುಮಾರ್ ಉದಾಸಿ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುವ ನಿಮಿತ್ತ ಗ್ರಾಮದ ಎಮ್ಮೆಯೊಂದನ್ನು ಕರೆ ತಂದು ರಿಬ್ಬನ್​ ಕಟ್​ ಮಾಡಿ ಬಸ್​ ತಂಗುದಾಣದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಅಲ್ಲದೇ ಬಸ್ ತಂಗುದಾಣ ಉದ್ಘಾಟನೆಯ ಬ್ಯಾನರ್​ನಲ್ಲಿ ಶಾಸಕ, ಸಂಸದರ ಶವಯಾತ್ರೆ ಎಂದು ಬರೆಯುವ ಮೂಲಕ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ .

ಇದನ್ನು ಓದಿ : same-sex marriage : ಸಲಿಂಗ ವಿವಾಹ ಬೆಂಬಲಿಸುವ ಮಸೂದೆಗೆ ಅಮೆರಿಕದಲ್ಲಿ ಅಂಗೀಕಾರ

ಇದನ್ನೂ ಓದಿ : yash movie : ಬಾಲಿವುಡ್​ನಲ್ಲಿ ರಿಮೇಕ್​ ಆಗಲಿದೆ ರಾಕಿಂಗ್​ ಸ್ಟಾರ್​ ಯಶ್​ ನಟನೆಯ ಈ ಸಿನಿಮಾ

buffalo inaugurates bus stand instead of mla in gadag

Comments are closed.