ಹಳ್ಳಿ ಹಳ್ಳಿಗೂ ಕೊರೊನಾ ಹಬ್ಬಿಸುತ್ತಿದ್ಯಾ ಸರಕಾರ ? ಜಿಲ್ಲಾಡಳಿತಗಳು ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್ !

0

ಮಂಗಳೂರು / ಉಡುಪಿ : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯರಾಜಧಾನಿಯಲ್ಲಿ ಲಾಕ್ ಡೌನ್ ಆದೇಶ ಜಾರಿ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ ಬೆಂಗಳೂರಲ್ಲಿ ನೆಲೆಸಿರುವವರು ತಮ್ಮೂರುಗಳಿಗೆ ತೆರಳುತ್ತಿದ್ದಾರೆ. ಲಾಕ್ ಡೌನ್ ಆದೇಶ ಘೋಷಣೆಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಳ್ಳಿ ಹಳ್ಳಿಗೂ ಕೊರೊನಾ ಸೋಂಕು ವ್ಯಾಪಿಸುವ ಆತಂಕ ಎದುರಾಗಿದೆ.

ಹೌದು, ಜಲೈ 14ರ ರಾತ್ರಿಯಿಂದಲೇ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಜಾರಿಯಾಗುತ್ತಿದೆ. ಸದ್ಯಕ್ಕೆ 9 ದಿನಗಳ ಕಾಲ ಲಾಕ್ ಡೌನ್ ಹೇರಿಕೆ ಮಾಡಲಾಗುತ್ತಿದ್ರೂ ಕೂಡ ಕೊರೊನಾ ನಿಯಂತ್ರಣಕ್ಕೆ ಬಾರದಿದ್ರೆ ಲಾಕ್ ಡೌನ್ ಆದೇಶ ಇನ್ನಷ್ಟು ದಿನಗಳ ಕಾಲ ವಿಸ್ತರಣೆಯಾಗಲಿದೆ. ಈ ಹಿನ್ನೆಲೆಯಲ್ಲೀಗ ಬೆಂಗಳೂರಲ್ಲಿ ನೆಲೆಸಿರುವವರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ಮಂದಿ ರಾಜ್ಯದ ಮೂಲೆ ಮೂಲೆಗಳಿಗೆ ತೆರಳಿದ್ದಾರೆ. ಅದ್ರಲ್ಲೂ ಸೋಮವಾರ ಹಾಗೂ ಮಂಗಳವಾರ ಇನ್ನಷ್ಟು ಮಂದಿ ವಲಸೆ ಬರುವ ಸಾಧ್ಯತೆಯಿದೆ.

ಬೆಂಗಳೂರಲ್ಲಿ ಶೇ.28ರಷ್ಟು ಮಂದಿಗೆ ಕೊರೊನಾ ಸೋಂಕು ದೃಢಪಡಿತ್ತಿದೆ. ಅಲ್ಲದೇ ಸಿಲಿಕಾನ್ ಸಿಟಿಗೆ ಹೋಗಿ ಬಂದಿರುವ ಹಲವರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇನ್ನೂ ಈಗಾಗಲೇ ಬೆಂಗಳೂರಿನಿಂದ ವಲಸೆ ಬಂದವರಲ್ಲಿಯೂ ಕೊರೊನಾ ದೃಢಪಟ್ಟಿದೆ. ಇದೀಗ ಲಕ್ಷಾಂತರ ಮಂದಿ ತಮ್ಮ ತಮ್ಮ ಊರುಗಳಿಗೆ ಮರಳುತ್ತಿರುವುದು ಕೊರೊನಾ ಭೀತಿ ಹುಟ್ಟಿಸಿದ್ದು, ಹಳ್ಳಿ ಹಳ್ಳಿಗೂ ಕೊರೊನಾ ವ್ಯಾಪಿಸಲಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಕಾಡ್ಗಿಚ್ಚಿನಂತೆ ಹರಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ 186 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ರೆ ಉಡುಪಿಯಲ್ಲಿ 90 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 2,026 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 1,242 ಮಂದಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದು, ಇದುವರೆಗೂ 38 ಮಂದಿಯನ್ನು ಕೊರೊನಾ ಮಹಾಮಾರಿ ಬಲಿ ಪಡೆದಿದೆ.

ಇನ್ನು ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದಲೂ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯನ್ನು ಕಂಡಿದೆ. ಜಿಲ್ಲೆಯಲ್ಲಿ ಒಟ್ಟು 1,566 ಮಂದಿಗೆ ಸೋಂಕು ವ್ಯಾಪಿಸಿದ್ದು, 329 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 3 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಆದರೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಇದೀಗ ಸ್ಥಳೀಯವಾಗಿಯೂ ಹರಡುತ್ತಿದೆ. ಈ ನಡುವಲ್ಲೇ ಬೆಂಗಳೂರಿನ ನಿವಾಸಿಗಳಿಂದಲೂ ಸೋಂಕು ಹರಡುವಿಕೆಯ ಪ್ರಮಾಣ ಇನ್ನಷ್ಟು ವೃದ್ದಿಸುವ ಸಾಧ್ಯತೆಯಿದೆ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಬೆಂಗಳೂರಿಗರು ಆಗಮಿಸಿದ್ದಾರೆ. ಜಿಲ್ಲೆಗಳಿಗೆ ಪ್ರವೇಶಿಸುವವರನ್ನು ಎಲ್ಲಿಯೂ ತಪಾಸಣೆಗೆ ಒಳಪಡಿಸುತ್ತಿಲ್ಲ. ಬೆಂಗಳೂರಿನಿಂದ ಆಗಮಿಸಿದ ಬಹುತೇಕರು ಸಾಂಸ್ಥಿಕ ಕ್ವಾರಂಟೈನ್ ಆಗಲಿ, ಹೋಮ್ ಕ್ವಾರಂಟೈನ್ ಗೆ ಆಗಲಿ ಒಳಪಟ್ಟಿಲ್ಲ. ಕೆಲವರಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ರೂ ವೈದ್ಯರ ಬಳಿಗೆ ತೆರಳಿ ತಪಾಸಣೆಯನ್ನು ನಡೆಸುತ್ತಿಲ್ಲ. ಜೊತೆಗೆ ಸಾರ್ವಜನಿಕರೊಂದಿಗೆ ಬೆರೆಯುತ್ತಿರುವುದು ಸಾಕಷ್ಟು ಕಡೆಗಳಲ್ಲಿ ಕಂಡು ಬರುತ್ತಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ವಿದೇಶಿಗರು, ಮುಂಬೈನಿವಾಸಿಗಳಿಂದಾಗಿ ಜಿಲ್ಲೆಗಳಲ್ಲಿ ಕೊರೊನಾ ಹೆಮ್ಮಾರಿ ಆರ್ಭಟಿಸುತ್ತಿದೆ. ಈ ನಡುವಲ್ಲೇ ಬೆಂಗಳೂರಿಗರು ಕೊರೊನಾ ಹೊತ್ತು ಊರಿಗೆ ಬರುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರಿನಿಂದ ಆಗಮಿಸುವವರು ಕಡ್ಡಾಯವಾಗಿ ಮನೆಯಲ್ಲಿಯೇ ಹೋಮ್ ಕ್ವಾರಂಟೈನ್ ಗೆ ಒಳಪಡಬೇಕು. ರೋಗ ಲಕ್ಷಣಗಳಿರುವವರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು. ಬೆಂಗಳೂರಿನಿಂದ ಆಗಮಿಸುವವರ ಮನೆಗಳನ್ನು ಸೀಲ್ ಡೌನ್ ಮಾಡುವ ಕಾರ್ಯವನ್ನು ಮಾಡಬೇಕಾಗಿದೆ. ಬೆಂಗಳೂರಿನಿಂದ ವಲಸೆ ಬರುತ್ತಿರುವವರ ವಿರುದ್ದ ನಿರ್ಲಕ್ಷ್ಯವನ್ನು ವಹಿಸಿದ್ರೆ ಕರಾವಳಿ ಜಿಲ್ಲೆಗಳು ಸದ್ಯದಲ್ಲಿಯೇ ಬೆಂಗಳೂರಲ್ಲಿ ಮೀರಿಸುವುದರಲ್ಲಿ ಅನುಮಾನವೇ ಇಲ್ಲಾ.

Leave A Reply

Your email address will not be published.