Udupi : ವಿಶಾಲ ಗಾಣಿಗ ಕೊಲೆ ಪ್ರಕರಣ ತನಿಖೆ ಚುರುಕು, ಪೊಲೀಸರ 4 ತಂಡ ರಚನೆ

ಬ್ರಹ್ಮಾವರ : ಕುಮ್ರಗೋಡಿನ ಮಿಲನ ಅಪಾರ್ಟ್‌ಮೆಂಟ್‌ ನಲ್ಲಿ ನಡೆದಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣದ ತನಿಖೆ ಜೋರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ನಾಲ್ಕು ತಂಡವನ್ನು ರಚಿಸಲಾಗಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುಮ್ರಗೋಡುವಿನಲ್ಲಿ ಹೊಸದಾಗಿ ಮಿಲನ ಅಪಾರ್ಟ್‌ಮೆಂಟ್‌ ನಲ್ಲಿ ಜುಲೈ 12ರಂದು ವಿಶಾಲ ಗಾಣಿಗ ಅವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕುಮ್ರಗೋಡು, ಉಪ್ಪಿನಕೋಟೆ ಸುತ್ತಮುತ್ತಿನ ಪ್ರದೇಶದಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಈಗಾಗಲೇ ಕೊಲೆ ಪ್ರಕರಣದ ಆರೋಪಿಯ ಪತ್ತೆಗಾಗಿ ಉಡುಪಿ ಜಿಲ್ಲಾ ಎಸ್‌ ಪಿ ವಿಷ್ಣುವರ್ಧನ್‌ ಅವರು ಪೊಲೀಸರ ನಾಲ್ಕು ತಂಡವನ್ನು ರಚಿಸಿದ್ದಾರೆ. ಅಲ್ಲದೇ ಅಪಾರ್ಟ್‌ಮೆಂಟ್‌ ಗೆ ವಿಶಾಲ ಗಾಣಿಗ ಅವರನ್ನು ತಂದು ಬಿಟ್ಟ ಆಟೋ ಚಾಲಕ, ಗ್ಯಾಸ್‌ ವಿತರಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಪಾರ್ಟ್‌ಮೆಂಟ್‌ ಇತ್ತೀಚಿಗೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿರಲಿಲ್ಲ. ಹೀಗಾಗಿ ಕೊಲೆ ಆರೋಪಿಯ ಕುರುಹು ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.

ಇನ್ನು ವಿಶಾಲ ಗಾಣಿಗ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಆದ್ರೆ ಮೃತದೇಹದ ಮೇಲಿದ್ದ ಕರಿಮಣಿ ಸರ, ಚಿನ್ನದ ಬಳೆ, ಕಿವಿಯ ಓಲೆಯನ್ನು ಕಳವು ಮಾಡಲಾಗಿದೆ. ಅಷ್ಟೇ ಅಲ್ಲಾ ವಿಶಾಲ ಗಾಣಿಗ ಬ್ಯಾಂಕಿನಿಂದ ನಗದನ್ನು ವಿಥ್‌ ಡ್ರಾ ಮಾಡಿಕೊಂಡು ಬಂದಿದ್ದರು. ಈ ಹಣವನ್ನು ಕೂಡ ಕಳವು ಮಾಡಲಾಗಿದೆ. ಹೀಗಾಗಿ ವಿಶಾಲ ಗಾಣಿಗ ಅವರ ಕುರಿತು ಸಂಪೂರ್ಣವಾದ ಮಾಹಿತಿ ಇದ್ದವರೇ ಈ ಕೃತ್ಯವನ್ನು ಎಸಗಿರುವ ಶಂಕೆ ವ್ಯಕ್ತವಾಗಿದೆ.

ಉಡುಪಿ ಜಿಲ್ಲೆಯ ಗಂಗೊಳ್ಳಿಯ ನಿವಾಸಿಯಾಗಿದ್ದ ವಿಶಾಲ ಗಾಣಿಗ ಪತಿಯೊಂದಿಗೆ ವಿದೇಶದಲ್ಲಿದ್ದು, ಇತ್ತೀಚಿಗಷ್ಟೇ ಊರಿಗೆ ಬಂದಿದ್ದರು. ನಿನ್ನೆ ಮಗಳ ಬರ್ತಡೇ ಆಚರಿಸುವ ಸಂಭ್ರಮದಲ್ಲಿದ್ದರು. ಮಗಳ ಬರ್ತಡೇಗಾಗಿ ಕೇಕ್‌ ಕೂಡ ಆರ್ಡರ್‌ ಮಾಡಿರೋದಾಗಿ ಪತಿಗೆ ತಿಳಿಸಿದ್ದರು. ಬ್ಯಾಂಕಿನ ಕೆಲಸದ ಹಿನ್ನೆಲೆ ಯಲ್ಲಿ ಕುಮ್ರಗೋಡಿನಲ್ಲಿದ್ದ ತನ್ನ ಅಪಾರ್ಟ್‌ಮೆಂಟ್‌ ಗೆ ಬಂದಿದ್ದರು. ಸಂಜೆಯಾದರೂ ಮಗಳು ಮನೆಗೆ ವಾಪಾಸ್‌ ಬಂದಿರಲಿಲ್ಲ. ಅಲ್ಲದೇ ಮೊಬೈಲ್‌ ಕರೆ ಕೂಡ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ವಿಶಾಲ ಗಾಣಿಗ ಅವರ ತಂದೆ ಕುಮ್ರಗೋಡಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ವಾಸು ಗಾಣಿಗ ಅವರು ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದಾರೆ. ಬ್ರಹ್ಮಾವರ ಪರಿಸರದಲ್ಲಿ ನಡೆದಿರುವ ಒಂಟಿ ಮಹಿಳೆಯ ಕೊಲೆ ಪ್ರಕರಣರನ್ನು ಜನರನ್ನು ಬೆಚ್ಚಿಬೀಳಿಸಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿಯೂ ತನಿಖೆಯನ್ನು ನಡೆಸುತ್ತಿದ್ದಾರೆ. ಅಪಾರ್ಟ್‌ಮೆಂಟ್‌ ಸುತ್ತಮುತ್ತಿನ ಸಿಸಿ ಕ್ಯಾಮರಾಗಳನ್ನು ಪರೀಶೀಲಿಸಲಾಗುತ್ತಿದೆ. ಆರೋಪಿಯ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಶೀಘ್ರದಲ್ಲಿಯೇ ಕೊಲೆ ಪ್ರಕರಣವನ್ನು ಬೇಧಿಸುವುದಾಗಿ ಎಸ್‌ ಪಿ ವಿಷ್ಣುವರ್ಧನ್‌ ಅವರು ತಿಳಿಸಿದ್ದಾರೆ.

Comments are closed.