ಜಗತ್ತಿನ ಎತ್ತರದ ವಿವೇಕಾನಂದರ ಪ್ರತಿಮೆಯ ವಿಶೇಷತೆ ನಿಮಗೆ ಗೊತ್ತಾ ?

0

ಉಡುಪಿ : ಜಗತ್ತಿಗೆ ಶಾಂತಿಯ ಸಂದೇಶಗಳನ್ನು ಸಾರಿದ್ದ ಸ್ವಾಮಿ ವಿವೇಕಾನಂದರು ಇಂದಿಗೂ ಯುವಜನತೆಗೆ ಮಾದರಿ. ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ ಅನ್ನೋ ವಿವೇಕಾನಂದ ಸಂದೇಶದಂತೆ ಉಡುಪಿ ಜಿಲ್ಲೆಯ ಗಿಳಿಯಾರಿನಲ್ಲಿ ವಿವೇಕಾನಂದರು ಬಾನೆತ್ತರಕ್ಕೆ ಬೆಳೆದು ನಿಂತಿದ್ದಾರೆ.
ಹೌದು, ಸಾಲಿಗ್ರಾಮದ ಡಿವೈನ್ ಪಾರ್ಕ್ ನ ಅಂಗಸಂಸ್ಥೆಯಾಗಿರುವ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ಯೋಗ ಬನದ ಆವರಣದಲ್ಲಿ ಬರೋಬ್ಬರಿ 35 ಅಡಿ ಎತ್ತರದ ವಿವೇಕಾನಂದ ಪ್ರತಿಮೆ ನಿರ್ಮಾಣಗೊಂಡಿದೆ. ವಿಶ್ವದ ಅತೀ ಎತ್ತರ ವಿವೇಕಾನಂದ ಪ್ರತಿಮೆಯನ್ನು ಜಿಗಣಿಯ ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಆರ್.ನಾಗೇಂದ್ರ ಅವರು ಲೋಕಾರ್ಪಣೆಗೊಳಿಸಿದ್ದಾರೆ.
ಗಿಳಿಯಾರಿನಲ್ಲಿ ನಿರ್ಮಾಣಗೊಂಡಿರುವ ಸ್ವಾಮಿ ವಿವೇಕಾನಂದರ ಪ್ರತಿಮೆ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಪ್ರತಿಮೆಗಿಂತಲೂ ಎತ್ತರವಾಗಿದೆ. ಮುರುಡೇಶ್ವರದ ಶಿವನ ಪ್ರತಿಮೆ, ಗದಗದ ಬಸವನ ಪ್ರತಿಮೆಯನ್ನು ನಿರ್ಮಿಸಿದ್ದ ಬೆಂಗಳೂರಿನ ಶ್ರೀಧರ ಮೂರ್ತಿ ಅವರ ತಂಡ ಗಿಳಿಯಾರಿನಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ನಿರ್ಮಾಣ ಮಾಡಿದೆ. 40 ಮಂದಿ ಶಿಲ್ಪಿಗಳ ತಂಡ ಆರು ತಿಂಗಳ ಕಾಲ ಶ್ರಮವಹಿಸಿ ವಿಶ್ವದ ಅತೀ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ.ಹಸಿರು ಹುಲ್ಲು ಹಾಸಿನ ನಡುವೆ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದ್ದು, ರಾತ್ರಿಯ ವೇಳೆಯಲ್ಲಿ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇನ್ನು ವಿವೇಕಾನಂದ ಪ್ರತಿಮೆಗೆ ಗಾಳಿ, ಮಳೆ, ಬೆಳಕಿನಿಂದ ರಕ್ಷಣೆ ನೀಡುವ ಸಲುವಾಗಿ ಲೋಹದ ಲೇಪನ ಮಾಡಲಾಗಿದೆ. ಒಟ್ಟಿನಲ್ಲಿ ಗಿಳಿಯಾರು ಇದೀಗ ಪ್ರವಾಸಿಗರ ನೆಚ್ಚಿನ ತಾಣವಾಗುತ್ತಿದ್ದು, ವಿವೇಕಾನಂದ ಪ್ರತಿಮೆಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರುತ್ತಿದೆ.

ಸ್ಪೆಷಲ್ ಡೆಸ್ಕ್ News Next ಕನ್ನಡ

Leave A Reply

Your email address will not be published.