world’s largest lock : ಅಯೋಧ್ಯೆ ರಾಮ ಮಂದಿರಕ್ಕಾಗಿ ಬರೋಬ್ಬರಿ 400 ಕೆಜಿ ತೂಕದ ಬೀಗ ನಿರ್ಮಾಣ

world’s largest lock :ಅಯೋಧ್ಯೆಯ ರಾಮ ಮಂದಿರ ಸಂಪೂರ್ಣ ನಿರ್ಮಾಣವಾಗುವ ಮುನ್ನವೇ ಸಾಕಷ್ಟು ಕಾರಣಗಳಿಂದ ಸುದ್ದಿಯಲ್ಲಿದೆ. ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡುತ್ತಿರುವ ಇಟ್ಟಿಗೆಯಿಂದ ಹಿಡಿದು ಪ್ರತಿಯೊಂದು ವಸ್ತುಗಳ ಹಿಂದೆಯೂ ವಿಶೇಷ ಕತೆಗಳು ಅಡಗಿದೆ. ಈ ಬಾರಿ ರಾಮ ಮಂದಿರಕ್ಕೆ ಸಂಬಂಧಿಸಿದ ಬೀಗವೊಂದು ಮುನ್ನಲೆಗೆ ಬಂದಿದೆ.

ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಬೀಗ ನಿರ್ಮಾಣ ಮಾಡುವ ಕೆಲಸಗಾರ ಹಾಗೂ ಆತನ ಪತ್ನಿ ಬರೋಬ್ಬರಿ 400 ಕೆಜಿ ತೂಕದ ಬೀಗವನ್ನು ನಿರ್ಮಾಣ ಮಾಡಿದ್ದಾರೆ..! ಈ 400 ಕೆಜಿ ತೂಕದ ಬೀಗವನ್ನು ತೆರೆಯಬೇಕು ಅಂದರೆ ಅದಕ್ಕೆ ನೀವು 30 ಕೆಜಿ ತೂಕದ ಕೀಲಿ ಕೈಯನ್ನು ಬಳಕೆ ಮಾಡಬೇಕಂತೆ. 2 ಲಕ್ಷ ರೂಪಾಯಿ ಮೌಲ್ಯದ ಈ ಬೀಗದ ಮೇಲೆ ರಾಮನ ಚಿತ್ರವನ್ನು ಕೆತ್ತಲಾಗಿದೆ. ಈ ಬೃಹತ್​ ಬೀಗವನ್ನು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಸಮರ್ಪಿಸುವುದಾಗಿ ದಂಪತಿ ಹೇಳಿದ್ದಾರೆ. ಹಿತ್ತಾಳೆಯ ಕೆಲಸ ಮುಗಿದ ಬಳಿಕ ರಾಮ ಮಂದಿರಕ್ಕೆ ಬೀಗದ ಕೈ ನೀಡುವುದಾಗಿ ದಂಪತಿ ಮಾಹಿತಿ ನೀಡಿದ್ದಾರೆ.


ಅಂದಹಾಗೆ 65 ವರ್ಷದ ಸತ್ಯಪ್ರಕಾಶ್​ ಶರ್ಮಾ ಈ 10 ಅಡಿ ಉದ್ದ ಹಾಗೂ 400 ಕೆಜಿ ತೂಕದ ಬೃಹತ್​ ಬೀಗವನ್ನು ನಿರ್ಮಾಣ ಮಾಡಲು ಬರೋಬ್ಬರಿ ಆರು ತಿಂಗಳ ಸಮಯಾವಕಾಶ ವನ್ನು ತೆಗೆದುಕೊಂಡಿದ್ದಾರೆ. ಬೀಗದ ಕೈ ತುಕ್ಕು ಹಿಡಿಯಬಾರದು ಎಂಬ ಕಾರಣಕ್ಕೆ ಬೀಗಕ್ಕೆ ಸ್ಟೀಲ್​ನ್ನು ಕೋಟಿಂಗ್​ ಮಾಡಲಾಗಿದೆ. ಬೀಗದ ಕೈನ ಬಹುತೇಕ ಭಾಗವನ್ನು ಹಿತ್ತಾಳೆ ಯಿಂದ ನಿರ್ಮಿಸಲಾಗಿದೆ ಎಂದು ಸತ್ಯ ಪ್ರಕಾಶ್​ ಶರ್ಮಾ ಮಾಹಿತಿ ನೀಡಿದ್ದಾರೆ. ಅಂದಹಾಗೆ ಈ ಬೃಹತ್​ ಬೀಗದ ಕೈ ನಿರ್ಮಾಣಕ್ಕೆ ಇನ್ನೂ ಹೆಚ್ಚಿನ ಹಣ ಅವಶ್ಯಕತೆ ಇದೆ, ಹೇಗಾದರೂ ಮಾಡಿ ಈ ಬೀಗದ ಕೈ ನಿರ್ಮಾಣ ಮಾಡಲೇಬೇಕು ಎಂದು ಪಣ ತೊಟ್ಟಿರುವ ಸತ್ಯ ಪ್ರಕಾಶ್​ ಶರ್ಮಾ ಇದಕ್ಕಾಗಿ ಸರ್ಕಾರದ ಬಳಿ ಧನ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಈ ಕಲೆಯನ್ನು ಉತ್ತೇಜಿಸಲು ನನಗೆ ಸರ್ಕಾರದ ಬೆಂಬಲದ ಅಗತ್ಯವಿದೆ. ಬಡ್ಡಿಗೆ ಸಾಲ ಪಡೆದು ನಾನು ಈ ಬೀಗದ ಕೆಲಸ ಮಾಡುತ್ತಿದ್ದೇನೆ ಎಂದು ಸತ್ಯ ಪ್ರಕಾಶ್​ ಹೇಳಿದ್ದಾರೆ .
ಕಳೆದ ವರ್ಷದ ಆರಂಭದಲ್ಲಿ ಇದೇ ಸತ್ಯ ಪ್ರಕಾಶ್​​ ಬರೋಬ್ಬರಿ 300 ಕೆಜಿ ತೂಕದ ಬೀಗದ ಕೈ ನಿರ್ಮಾಣ ಮಾಡಿ ಸುದ್ದಿ ಮಾಡಿದ್ದರು. ಪತಿಯ ಕಾರ್ಯದ ಬಗ್ಗೆ ಮಾತನಾಡಿದ ಪತ್ನಿ ರುಕ್ಮಿಣಿ ಶರ್ಮಾ, ನನ್ನ ಪತಿಯು ಬೀಗ ನಿರ್ಮಾಣ ವ್ಯವಹಾರದಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದ್ದಾರೆ. ಮುಂದಿನ ಪೀಳಿಗೆಗೂ ಇವರ ಸಾಧನೆ ಮಾದರಿಯಾಗಬೇಕು ಎಂದು ಹೇಳಿದ್ದಾರೆ.

ಗಣ ರಾಜ್ಯೋತ್ಸವದ ಪರೇಡ್​ನಲ್ಲಿ ಬೀಗ ನಿರ್ಮಾಣ ಕೌಶಲ್ಯವನ್ನೂ ಪ್ರದರ್ಶಿಸುವಂತಾಗಬೇಕು ಎಂಬುದು ಸತ್ಯ ಪ್ರಕಾಶ್​ ಶರ್ಮಾ ಅವರ ಆಶಯವಾಗಿದೆ. ಅಲ್ಲದೇ ಗಿನ್ನೆಸ್​ ಬುಕ್​ನಲ್ಲಿಯೂ ತಮ್ಮ ಹೆಸರು ನೋಂದಣಿ ಆಗಬೇಕು ಎಂಬುದು ಸತ್ಯ ಪ್ರಕಾಶ್​ ಶರ್ಮಾ ಅವರ ಕನಸಾಗಿದೆ.

ಇದನ್ನು ಓದಿ : China’s discovers water on moon: ಚಂದಿರನಲ್ಲಿ ಜಲ ಮೂಲ ಪತ್ತೆ ಮಾಡಿದ ಚೀನಾದ ಚಾಂಗ್ಯಿ ನೌಕೆ

ಇದನ್ನೂ ಓದಿ : How fast is Earth Moving around the sun?: ಭೂಮಿ ಎಷ್ಟು ವೇಗವಾಗಿ ಸೂರ್ಯನ ಸುತ್ತ ಸುತ್ತುತ್ತದೆ?

Aligarh couple makes ‘world’s largest lock’ for Ram temple; weighs nearly 400 kg and opens with a 30 kg key

Comments are closed.