ಪಟಾಕಿ ಕೊಳ್ಳುವ ಮುನ್ನ ಇರಲಿ ಎಚ್ಚರ. ಹಸಿರು ಪಟಾಕಿ ಗುರುತಿಸಲು ಕ್ಯೂ-ಆರ್ ಕೋಡ್ ಸ್ಕ್ಯಾನ್ ಮಾಡಿ

ಬೆಂಗಳೂರು: ‘ದೀಪಾವಳಿಗೆ ಕಡಿಮೆ ಮಾಲಿನ್ಯ ಉಂಟು ಮಾಡುವ ‘ಹಸಿರು ಪಟಾಕಿ’ಗಳನ್ನು ಬಳಸುವುದಕ್ಕೆ ಮಾತ್ರ ರಾಜ್ಯ ಸರ್ಕಾರ ಒಪ್ಪಿಗೆಯನ್ನೇನೋ ಸೂಚಿಸಿದೆ. ಆದರೆ, ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವುದು ಹಸಿರು ಪಟಾಕಿ ಹೌದೋ ಅಲ್ಲವೋ ಎಂಬುದನ್ನು ಗುರುತಿಸುವುದು ಹೇಗೆ ಎನ್ನುವ ಪ್ರೆಶ್ನೆ ಗ್ರಾಹಕರಲ್ಲಿ ಮೂಡಿದೆ.

ಪಟಾಕಿ ಖರೀದಿಸಲು ಮುಂದಾಗಿರುವ ಗ್ರಾಹಕರನ್ನು ಕಾಡುತ್ತಿರುವ ಗೊಂದಲವಿದು. ಈ ಗೊಂದಲ ಬಗೆಹರಿಸಲು ತಂತ್ರಜ್ಞಾನದ ಮೊರೆ ಹೋಗಿದ್ದಾರೆ ತಯಾರಕರು. ‘ಹಸಿರು ಪಟಾಕಿಗಳನ್ನು ಸುಲಭವಾಗಿ ಗುರುತಿಸಲು ಪಟಾಕಿಗಳ ಮೇಲೆ ‘ಗ್ರೀನ್ ಫೈರ್‌ ವರ್ಕ್ಸ್‌’ ಎಂಬ ಮುದ್ರೆ ಹಾಕಲಾಗಿದೆ.

ಈ ಬಗ್ಗೆ ಅನುಮಾನವಿದ್ದವರು ಪಟಾಕಿ ಪೊಟ್ಟಣಗಳ ಮೇಲಿರುವ ‘ಕ್ಯೂ-ಆರ್ ಕೋಡ್’ ಅನ್ನು ಸ್ಕ್ಯಾನ್ ಮಾಡಿ, ದೃಢಪಡಿಸಿಕೊಳ್ಳಬಹುದು’ ಎಂದು ತಮಿಳುನಾಡು ಪಟಾಕಿ ಮತ್ತು ಸಿಡಿಮದ್ದು ತಯಾರಕರ ಸಂಘದ ಅಧ್ಯಕ್ಷ ಪಿ.ಗಣೇಶನ್ ತಿಳಿಸಿದ್ದಾರೆ .

‘ಹಸಿರು ಪಟಾಕಿಯನ್ನು ಧೃಡಪಡಿಸಿಕೊಳ್ಳುವ ವ್ಯವಸ್ಥೆ ಸದ್ಯ ಪ್ರಾಯೋಗಿಕ ಹಂತದಲ್ಲಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಲಿದ್ದೇವೆ’ ಎಂದು ಅವರು ತಿಳಿಸಿದರು. ಪರವಾನಗಿ ವಿಳಂಬ: ಪಟಾಕಿ ನಿಷೇಧದ ಕುರಿತು ರಾಜ್ಯ ಸರ್ಕಾರ ದಿಢೀರ್ ನಿರ್ಧಾರ ಕೈಗೊಂಡಿದ್ದು ಪಟಾಕಿ ವ್ಯಾಪಾರಿಗಳು ಕಂಗಾಲಾಗುವಂತೆ ಮಾಡಿತ್ತು. ಬಳಿಕ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿತು.

ಇದು ವ್ಯಾಪಾರಿಗಳಲ್ಲಿ ಸ್ವಲ್ಪಮಟ್ಟಿಗೆ ನಿರಾಳ ಭಾವ ಮೂಡಿಸಿದೆ. ಹಸಿರು ಪಟಾಕಿ ಮಾರಾಟಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದ್ದರೂ, ಇವುಗಳ ಮಾರಾಟಕ್ಕೆ ವರ್ತಕರಿಗೆ ಪರವಾನಗಿ ನೀಡುವ ಪ್ರಕ್ರಿಯೆ ವಿಳಂಬವಾಗುತ್ತಿದೆ.

ದೀಪಾವಳಿಗೆ ಬೆರಳಣಿಕೆಯಷ್ಟು ದಿನಗಳು ಮಾತ್ರ ಉಳಿದಿವೆ. ಇನ್ನೂ ಪರವಾನಗಿ ವರ್ತಕರ ಕೈಸೇರಿಲ್ಲ. ಹಾಗಾಗಿ ವರ್ತಕರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.

Comments are closed.