ಕೊರೊನಾ ತಡೆಗೆ 49 ದಿನಗಳ ಲಾಕ್ ಡೌನ್ ! ಕೂತೂಹಲ ಹುಟ್ಟಿಸಿದೆ ಡಯಾಗ್ರಾಮ್

0

ನವದೆಹಲಿ : ಕೊರೊನಾ ಮಹಾಮಾರಿ ಜಗತ್ತಿನಾದ್ಯಂತ ಆರ್ಭಟಿಸುತ್ತಿದೆ. ಕೊರೊನಾ ಸೋಂಕು ತಡೆಗೆ ದೇಶದಾದ್ಯಂತ 21 ದಿನಗಳ ಲಾಕ್ ಡೌನ್ ಜಾರಿಯಲ್ಲಿದೆ. ಕೇಂದ್ರ, ರಾಜ್ಯ ಸರಕಾರಗಳು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ 21 ದಿನಗಳ ಕಾಲ ಲಾಕ್ ಡೌನ್ ಹೇರಿಕೆ ಮಾಡಿದ್ರೂ ಕೊರೊನಾ ನಿಯಂತ್ರಣ ಅಸಾಧ್ಯ. ಹೀಗಾಗಿ 49 ದಿನಗಳ ಲಾಕ್ ಡೌನ್ ಅನಿರ್ವಾಯ ಅನ್ನೋ ಡಯಾಗ್ರಾಮ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕೊರೊನಾ ವೈರಸ್ ನಿಗದಿತ ಅವಧಿಯವರೆಗೆ ಜೀವಂತವಾಗಿ ಇರುವುದರಿಂದ ಲಾಕ್ ಡೌನ್ ಮಾಡಿದ್ರೆ ವೈರಸ್ ತಡೆಯಬಹುದು ಅನ್ನೋದು ತಜ್ಞ ವೈದ್ಯರ ಲೆಕ್ಕಾಚಾರ. ಇದೇ ಕಾರಣಕ್ಕೆ ಕೇಂದ್ರ ಸರಕಾರವೂ 21 ದಿನಗಳ ಕಾಲ ಲಾಕ್ ಡೌನ್ ಜಾರಿಗೆ ತಂದಿದೆ. ಆದರೆ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೊರೊನಾ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಮೂರನೇ ಹಂತಕ್ಕೆ ತಲುಪುವ ಆತಂಕವನ್ನು ತಂದೊಡ್ಡಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರೋ ಡಯಾಗ್ರಾಮ್ ನಿಜವಾಗುತ್ತಾ ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರೋ ಡಯಾಗ್ರಮ್ ತಯಾರಿಸಿದ್ದು ಯಾರೂ ಅನ್ನೋದು ಖಚಿತವಿಲ್ಲ. ಆದರೆ ಹಲವಾರು ಪುಟಗಳಿರಬಹುದಾದ ವರದಿಯ ಕೇವಲ 5 ನೇ ಪುಟದಲ್ಲಿರುವ 4 ನೇ ಚಿತ್ರ ಮಾತ್ರ ಎಲ್ಲೆಡೆ ವೈರಲ್ ಆಗುತ್ತಿದೆ. ಉಳಿದ ವಿವರಗಳು ಲಭ್ಯವಾಗುತ್ತಿಲ್ಲ. ಅಷ್ಟಕ್ಕೂ ಡಯಾಗ್ರಾಮ್ ನಲ್ಲಿ ಏನಿದೆ ?

ಪ್ಯಾನಲ್ ‘ಎ’:
ಈ ಡಯಾಗ್ರಮ್ ನಲ್ಲಿ ಮೊದಲ ಎ ಪ್ಯಾನಲ್ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಎ ಪ್ಯಾನಲ್ ಹೇಳುವ ಪ್ರಕಾರ ಮಾರ್ಚ್ 25 ರಿಂದ ಆರಂಭವಾಗಿರುವ 21 ದಿನಗಳ ಲಾಕ್ ಡೌನ್ ತಾತ್ಕಾಲಿಕವಾಗಿ ಇದರ ವೇಗ ತಡೆದರೂ, ಒಮ್ಮೆ 21 ದಿನಗಳ ಲಾಕ್ ಡೌನ್ ಮುಗಿದ ನಂತರ ಮತ್ತೆ ಒಕ್ಕರಿಸಿ ತಾಂಡವವಾಡುವುದು ಗ್ಯಾರಂಟಿ !

ಪ್ಯಾನಲ್ ‘ಬಿ :
ಈ ಪ್ಯಾನಲ್ ‘ಬಿ’ಯಲ್ಲಿರುವ ಡಯಾಗ್ರಮ್ ಗಮನಿಸಿದರೆ ಎರಡು ಲಾಕ್ ಡೌನ್ ಮಾಡಿದರೆ ಏನಾಗುತ್ತದೆ ಎಂದು ವಿವರಿಸಿದ್ದಾರೆ. ಈಗ ನಡೆಯುತ್ತಿರುವ 21 ದಿನಗಳ ಲಾಕ್ ಡೌನ್ ನಂತರ ಮತ್ತೆ 5 ದಿನಗಳ ಸಾಮಾನ್ಯ ಜನ ಜೀವನವಿರುತ್ತದೆ. ಆದರೆ ತದನಂತರ ಮತ್ತೆ 28 ದಿನಗಳ ಲಾಕ್ ಡೌನ್ ಮಾಡಿದರೂ ಕೂಡಾ ಈ ಪಿಡುಗು ಮರೆಯಾಗುವುದಿಲ್ಲ. ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಉಳಿದ 5 ದಿನಗಳ ಗ್ಯಾಪ್ ನಲ್ಲೇ ಈ ರೋಗ ಮತ್ತೆ ವ್ಯಾಪಕವಾಗಿ ಹರಡುತ್ತದೆ. ಹೀಗಾಗಿ ಮತ್ತೆ 28 ದಿನಗಳ ಮತ್ತೆ ಲಾಕ್ ಡೌನ್ ಆಚರಿಸಲಾಗುತ್ತದೆ. ಆದರೆ ರೀತಿಯ ಲಾಕ್ ಡೌನ್ ಮಾಡುವುದರಿಂದಲೂ ಯಾವುದೇ ಉಪಯೋಗವಿಲ್ಲ.

ಪ್ಯಾನಲ್ ‘ಸಿ’:
ಪ್ಯಾನಲ್ ‘ಸಿ’ಯಲ್ಲಿರುವ ಈ ಡಯಾಗ್ರಮ್ ನಲ್ಲಿ ಮೂರು ಹಂತಗಳ ಲಾಕ್ ಡೌನ್ ಮಾಡಿದರೆ ಏನಾಗುತ್ತದೆ ಎಂದು ವಿವರಿಸಿದ್ದಾರೆ. 21 ದಿನಗಳ ಮೊದಲ ಹಂತದ ಲಾಕ್ ಡೌನ್ ನಂತರ 5 ದಿನಗಳ ಸಾಮಾನ್ಯ ಜೀವನದ ಗ್ಯಾಪ್, ನಂತರ ಮತ್ತೆ 28 ದಿನಗಳ 2ನೇ ಹಂತದ ಲಾಕ್ ಡೌನ್, ಮತ್ತೆ 5 ದಿನಗಳ ಸಾಮಾನ್ಯ ಜೀವನದ ಗ್ಯಾಪ್, ನಂತರ ಕೊನೆಯ ಅಂದರೆ ಮೂರನೇ ಹಂತವಾಗಿ 18 ದಿನಗಳ ಲಾಕ್ ಡೌನ್ ಮಾಡಿದರೆ ಕೊರೊನಾ ಮಹಾಮಾರಿಯ ಮಾರಣಹೋಮ ತಗ್ಗುತ್ತದೆ. ಒಟ್ಟು 10 ರೊಳಗೆ ರೋಗಿಗಳ ಸಂಖ್ಯೆ ಇಳಿಯುತ್ತದೆ. ಆದರೆ ಇದರಲ್ಲಿ ಒಟ್ಟು 67 ದಿನಗಳ ಲಾಕ್ ಡೌನ್ ಆಗುತ್ತದೆ.

ಪ್ಯಾನಲ್ ‘ಡಿ’:
ಎಲ್ಲಕ್ಕಿಂತ ಉತ್ತಮ ಪರಿಹಾರವನ್ನು ಪ್ಯಾನಲ್ ‘ಡಿ’ಯಲ್ಲಿರುವ ಡಯಾಗ್ರಮ್ ವಿವರಿಸುತ್ತದೆ. ಇದರ ಪ್ರಕಾರ 21 ದಿನಗಳ ಲಾಕ್ ಡೌನ್ ಬದಲು ಒಂದೇ ಹಂತದ ಕನಿಷ್ಠ 49 ದಿನಗಳ ಲಾಕ್ ಡೌನ್ ಮಾಡಿದರೆ ಈ ಮಹಾಮಾರಿಯನ್ನು ನಿಯಂತ್ರಣಕ್ಕೆ ತರಬಹುದು ಮತ್ತು ರೋಗಿಗಳ ಸಂಖ್ಯೆ 10 ರೊಳಗೆ ಬರುತ್ತದೆ ಎಂದು ಹೇಳುತ್ತಿದೆ.

ಕೇಂದ್ರ ಸರಕಾರ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಿದೆ. ಕೇವಲ 21 ದಿನಗಳ ಕಾಲ ಲಾಕ್ ಡೌನ್ ನಡೆಯುವುದರಿಂದ ಕೊರೊನಾ ನಿಯಂತ್ರಣಕ್ಕೆ ಬರುತ್ತೆ ಅಂತಾ ಯಾರೂ ಕೂಡ ಖಚಿತವಾಗಿ ಹೇಳುತ್ತಿಲ್ಲ. ಇನ್ನೊಂದೆಡೆ ಕೇಂದ್ರ ಸರಕಾರ ಕೂಡ ಮೂರು ತಿಂಗಳ ಕಾಲ ವಿವಿಧ ಯೋಜನೆಗಳನ್ನು ಪ್ರಕಟಿಸುತ್ತಿದೆ. ಹೀಗಾಗಿ ಕೇಂದ್ರ ಸರಕಾರ ಕೂಡ 21 ದಿನಗಳ ಲಾಕ್ ಡೌನ್ ಅವಧಿ ಮುಗಿದ ನಂತರ ಮತ್ತೆ ಲಾಕ್ ಡೌನ್ ಹೇರಿಕೆ ಮಾಡುತ್ತಾ ಅನ್ನೋ ಅನುಮಾವೂ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರೋ ಈ ಡಯಾಗ್ರಾಮ್ ಹೊಸ ಚರ್ಚೆ ಹುಟ್ಟು ಹಾಕಿದ್ದು, ಇನ್ನೂ ಕಠಿಣ ಹಾಗೂ ದೂರಗಾಮಿ ಪರಿಣಾಮ ಬೀರುವಂತಹ ಕ್ರಮಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಬೆಳಕು ಚೆಲ್ಲುತ್ತಿದೆ. ಆದರೆ ಡಯಾಗ್ರಾಮ್ ರಚಿಸುದ್ದು ಯಾರೂ ಅನ್ನೋದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ತಜ್ಞರೇ ಉತ್ತರಿಸಬೇಕು.

Leave A Reply

Your email address will not be published.