ಮಗಳಿಗೆ “ಕನ್ನಡ ಶೆಟ್ಟಿ” ಹೆಸರಿಟ್ಟ ಕುಂದಾಪುರದ ಉದ್ಯಮಿ ! ಕನ್ನಡದ ಉಳಿವಿಗೆ ನೆಂಪುವಿನ ಪ್ರತಾಪರ ವಿಭಿನ್ನ ಪ್ರಯತ್ನ

0

ಕುಂದಾಪುರ : ಕನ್ನಡ. ಈ ಹೆಸರು ಕೇಳಿದ್ರೆ ಮೈ ಮನ ರೋಮಾಂಚನವಾಗುತ್ತೆ. ಕನ್ನಡಕ್ಕಾಗಿ ಕನ್ನಡ ನೆಲದಲ್ಲೇ ಹೋರಾಟಗಳು ನಡೆಯುತ್ತಿದೆ. ಇನ್ನೊಂದೆಡೆ ಕನ್ನಡಿಗರೇ ಕನ್ನಡ ಮಾತಾಡದ ದುಸ್ಥಿತಿಯಲ್ಲಿದ್ದಾರೆ. ಇಂತಹ ಕಾಲದಲ್ಲಿ ಇಲ್ಲೋರ್ವ ಉದ್ಯಮಿ ತನ್ನ ಮಗಳಿಗೆ ಕನ್ನಡವೆಂದು ಹೆಸರಿಟ್ಟಿದ್ದಾರೆ. ಉದ್ಯಮಿ ಕನ್ನಡ ಪ್ರೇಮ ಇದೀಗ ಇತರರಿಗೆ ಮಾದರಿಯಾಗಿದೆ.

ಹೀಗೆ ಮುದ್ದು ಮುದ್ದಾಗಿರೋ ಈ ಮುದ್ದು ಮಗುವಿನ ಹೆಸರು ಕನ್ನಡ ಶೆಟ್ಟಿ. ಮಗುವಿನ ಹೆಸರು ಕೇಳಿದ್ರೆ ಸಾಕು ಮೂಗಿನ ಮೇಲೆ ಬೆರಳಿಡುತ್ತಾರೆ. ಹೌದು, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನೆಂಪುವಿನ ಪ್ರತಾಪ್ ಶೆಟ್ಟಿ ಅಪ್ಪಟ ಕನ್ನಡಾಭಿಮಾನಿ. ಕನ್ನಡ ನೆಲದಲ್ಲಿ ಕನ್ನಡ ಮರೆಯಾಗುತ್ತಿರುವ ದಿನಗಳಲ್ಲೇ ಕನ್ನಡದ ಉಳಿವಿಗಾಗಿ ಪಣತೊಟ್ಟಿದ್ದಾರೆ.

ಸದ್ದಿಲ್ಲದೇ ಕನ್ನಡವನ್ನು ಉಳಿಸೋ ಕಾರ್ಯವನ್ನು ಮಾಡುತ್ತಿರೋ ಪ್ರತಾಪ್ ಶೆಟ್ಟಿ ಹಾಗೂ ಪ್ರತಿಮಾ ಶೆಟ್ಟಿ ದಂಪತಿ ಇದೀಗ ತಮ್ಮ ಮಗುವಿಗೆ ಕನ್ನಡ ಶೆಟ್ಟಿ ಎಂದು ಹೆಸರಿಟ್ಟಿದ್ದಾರೆ.

ಕಳೆದ 25 ವರ್ಷಗಳಿಂದಲೂ ಬೆಂಗಳೂರಿನಲ್ಲಿ ನೆಲ ಕಂಡು ಕೊಂಡಿರುವ ಪ್ರತಾಪ್ ಶೆಟ್ಟಿ ಅವರು ಬಹಿರಂಗವಾಗಿ ಎಲ್ಲಿಯೂ ಕನ್ನಡಾಭಿ ಮಾನವನ್ನು ಹೇಳಿಕೊಳ್ಳುವುದಿಲ್ಲ. ಆದರೆ ಭಾಷೆಯ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಇಂದಿನ ಕಾಲದಲ್ಲಿ ಮಗುವಿನ ಹೆಸರನ್ನು ಇಡೋದಕ್ಕೆ ಗೂಗಲ್ ನಲ್ಲಿ ಸರ್ಚ್ ಮಾಡೋರೇ ಹೆಚ್ಚು. ಅದ್ರಲ್ಲೂ ಅರ್ಥವಿಲ್ಲದ ಹೆಸರನ್ನು ಇಡುವವರು ಇನ್ನೊಂದಿಷ್ಟು ಜನ.

ಆದರೆ ಪ್ರತಾಪ್ ಶೆಟ್ಟಿ ಅವರು ಮಗುವಿಗೆ ಹೆಸರಿಡಬೇಕು ಅಂತಾ ಅಂದುಕೊಂಡಾಗ ತಟ್ಟನೆ ಹೊಳೆದಿದ್ದು ತಾಯಿ ಭುವನೇಶ್ವರಿ. ಕನ್ನಡದ ಅಭಿಮಾನಿಯಾಗಿರುವ ಪ್ರತಾಪ್ ಶೆಟ್ಟಿ ಅವರು ಮಗಳಿಗೆ ಕನ್ನಡ ಎಂದು ಹಸರಿಡೋದಕ್ಕೆ ಪ್ಲ್ಯಾನ್ ಮಾಡಿದಾಗ ಪತ್ನಿ ಪ್ರತಿಮಾ ಶೆಟ್ಟಿ ಅವರು ಕೂಡ ಸಾಕಷ್ಟು ಖುಷಿಯಾಗೊಂಡಿದ್ದಾರೆ.

ಮರೆಯಾಗುತ್ತಿರುವ ಕನ್ನಡಾಭಿಮಾನವನ್ನು ಉಳಿಸುವ ನಿಟ್ಟಿನಲ್ಲಿ ಮಗುವಿಗೆ ಕನ್ನಡಾಂಬೆಯ ಹೆಸರನ್ನಿಟ್ಟಿದ್ದೇವೆ. ಮಾತ್ರವಲ್ಲ ಕನ್ನಡಳಿಗೆ ಕನ್ನಡದ ಕಂಪು ಪಸರಿಸುವ ಮಾರ್ಗವನ್ನು ತೋರಿಸುತ್ತೇವೆ ಎನ್ನುತ್ತಾರೆ ತಂದೆ ಪ್ರತಾಪ್ ಶೆಟ್ಟಿ.

ಇನ್ನೊಂದು ವಿಶೇಷವೆಂದ್ರೆ ಕರ್ನಾಟಕದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಈ ಕನ್ನಡ ಶೆಟ್ಟಿ ಹುಟ್ಟಿರುವುದು ಕೂಡ ನವೆಂಬರ್ ತಿಂಗಳಿನಲ್ಲಿಯೇ. ನವೆಂಬರ್ 27ರಂದು ಕನ್ನಡ ಹುಟ್ಟುಹಬವನ್ನು ಆಚರಿಸಿಕೊಳ್ಳಲಿದ್ದಾರೆ.

ಬೆಂಗಳೂರಿನ ರಂಗದೋರ್ ಮೆಮೋರಿಯಲ್ ಆಸ್ಪತ್ರೆಯಲ್ಲಿ 2019ರ ನವೆಂಬರ್ 27ರಂದು ಜನಿಸಿದ ಕನ್ನಡ ಶೆಟ್ಟಿಗೆ ಮುಂದಿನ ತಿಂಗಳು ಒಂದು ವರ್ಷ ತುಂಬುತ್ತಿದೆ. ಮಗಳಿಗೆ ಕನ್ನಡವೆಂದು ಹೆಸರಿಟ್ಟಿರುವುದು ಮಾತ್ರವಲ್ಲ ಅದೇ ಹೆಸರಿನಲ್ಲಿಯೇ ಜನನ ಪ್ರಮಾಣ ಪತ್ರವನ್ನೂ ನೋಂದಾಯಿಸಿ ಕೊಂಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜನನ ಪ್ರಮಾಣ ಪತ್ರವನ್ನು ನೋಂದಣಿ ಮಾಡಿದೆ.

ಕರ್ನಾಟಕದ ರಾಜಧಾನಿಯೆನಿಸಿಕೋಂಡಿರುವ ಬೆಂಗಳೂರಲ್ಲಂತೂ ಕನ್ನಡ ಭಾಷೆಯೇ ಮರೆಯಾಗಿ ಹೋಗಿದೆ. ಕನ್ನಡ ನೆಲದಲ್ಲಿಯೇ ಕನ್ನಡಿಗರನ್ನೇ ಹುಡುಕ ಬೇಕಾದ ಪರಿಸ್ಥಿತಿಯಿದೆ. ಇದೀಗ ಹಲವರು ಮಗುವಿನ ಹೆಸರನ್ನು ಕೇಳಿದ ತಕ್ಷಣ ಆಶ್ಚರ್ಯ ಪಡುತ್ತಾರೆ. ಆದರೆ ಮಗುವಿನ ಹೆಸರನ್ನು ಕರೆಯುವ ಮೂಲಕವಾದ್ರೂ ಕನ್ನಡ ಭಾಷೆಯ ಮೇಲೆ ಅಭಿಮಾನ ಮೂಡಲಿ. ಕನ್ನಡ ಭಾಷೆ ಉಳಿಯುವಂತಾಗಲಿ ಅನ್ನೋದು ಪ್ರತಾಪ್ ಶೆಟ್ಟಿ ಅವರ ಆಶಯ.

ವೃತ್ತಿಯಲ್ಲಿ ಇಂಟಿರಿಯರ್ ಡಿಸೈನರ್ ಆಗಿದ್ದರೂ ಕೂಡ ಕನ್ನಡಾಭಿಮಾನವನ್ನು ಹೊಂದಿರುವ ಪ್ರತಾಪ್ ಶೆಟ್ಟಿ ಅವರ ಕಾರ್ಯಕ್ಕೆ ಎಲ್ಲರೂ ಶಬ್ಬಾಶ್ ಎನ್ನಲೇ ಬೇಕು. ಈ ಮೂಲಕವಾದ್ರೂ ಕನ್ನಡವನ್ನು ಉಳಿಸಿ ಬೆಳೆಸುವತ್ತ ಎಲ್ಲರೂ ಗಮನ ಹರಿಸಬೇಕಾಗಿದೆ. ಕುಂದಾಪುರ ಮೂಲದ ಉದ್ಯಮಿಯ ಕಾರ್ಯ ನಿಜಕ್ಕೂ ಮಾದರಿಯಾಗಿದೆ.

Leave A Reply

Your email address will not be published.