ಕಿತ್ತಳೆ ಮಾರಿ ಶಾಲೆ ಕಟ್ಟಿದ ಹಾಜಬ್ಬ : ಅಕ್ಷರ ಸಂತನಿಗೆ ಪದ್ಮಶ್ರೀ ಗೌರವ

0

ಮಂಗಳೂರು : ಅವರು ಕಿತ್ತಳೆ ಮಾರುತ್ತಲೇ ಶಾಲೆಯನ್ನು ಕಟ್ಟಿಸಿದವರು. ಕಂಡ ಕಂಡವರಲ್ಲಿ ಮೊರೆಯಿಟ್ಟು ಬಡವಿದ್ಯಾರ್ಥಿಗಳ ಪಾಲಿಗೆ ಅಕ್ಷರ ಸಂತ ಎನಿಸಿಕೊಂಡವರು. ಇಂತಹ ಶಿಕ್ಷಣ ಕ್ರಾಂತಿಯ ಹರಿಕಾರನಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ. ಇವರು ಬೇರಾರೂ ಅಲ್ಲಾ ಹರೇಕಳದ ಹಾಜಬ್ಬ.

ಮಳೆಯಿರಲಿ, ಬಿಸಿಲಿರಲಿ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಬಿಳಿ ಅಂಗಿ, ಬಿಳಿ ಪಂಜೆ ತೊಟ್ಟು ಕೈಯಲ್ಲಿ ಕಿತ್ತಳೆಯ ಬುಟ್ಟಿ ಹಿಡಿದುಕೊಂಡು ಹಾಜರಾಗುತ್ತಿದ್ದರು ಹಾಜಬ್ಬ. ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ ಸಮೀಪದ ಹರೇಕಳದ ನಿವಾಸಿ. ನಿತ್ಯವೂ ಕಿತ್ತಳೆ ಮಾರಾಟ ಮಾಡಿ ಅದರಲ್ಲಿ ಬರುತ್ತಿದ್ದ ಅಷ್ಟೋ ಇಷ್ಟೋ ಹಣದಲ್ಲಿ ಸಂಸಾರದ ಬಂಡಿಯನ್ನು ಸಾಗಿಸುತ್ತಿದ್ದರು. ಆದರೆ ವಿದೇಶಿ ಮಹಿಳೆಗೆ ಕಿತ್ತಳೆ ವ್ಯಾಪಾರ ಮಾಡುವಾಗ ಆಕೆಯ ಪ್ರಶ್ನೆಗೆ ಉತ್ತರಿಸಲಾಗದೆ ತಬ್ಬಿಬ್ಬಾದ ಹಾಜಬ್ಬ ಮಾಡಿದ್ದು ಮಾತ್ರ ದೇಶವೇ ಕೊಂಡಾಡುವ ಸಾಧನೆ.

ವಿದೇಶಿಯಿಂದ ತನಗಾದ ಅವಮಾನ ತನ್ನೂರಿನ ಮಕ್ಕಳಿಗೆ ಆಗಬಾರದು ಅನ್ನೋದನ್ನು ಅರಿತ ಹಾಜಬ್ಬ, ವಿದೇಶಿಯರೊಂದಿಗೆ ವ್ಯವಹರಿಸಲು ಬೇಕಾದ ಆಂಗ್ಲ ಭಾಷೆಯನ್ನು ಕಲಿಯಲಿಲ್ಲ. ಬದಲಾಗಿ ತನ್ನೂರಿನ ಬಡ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸೋ ಕನಸು ಕಂಡ್ರು. ಕಲ್ಲು ಮುಳ್ಳಿನ ಹಾದಿಯಲ್ಲೇ ಛಲ ಬಿಡದ ತ್ರಿವಿಕ್ರಮನಂತೆ ತನ್ನೂರಲ್ಲಿ ಶಾಲೆಯೊಂದನ್ನು ಕಟ್ಟಿ ಬಡ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ಸಂತರೆನಿಸಿಕೊಂಡಿದ್ದಾರೆ.
ಸುಮಾರು 20 ವರ್ಷಗಳಿಂದಲೂ ದಕ್ಷಿಣ ಕನ್ನಡದ ಕೊಣಾಜೆ ಸಮೀಪದ ಹರೇಕಳ ನ್ಯೂ ಪಡ್ಪು ಗ್ರಾಮದಲ್ಲಿ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಕಾಯಕದಲ್ಲಿ ಹಾಜಬ್ಬ ತೊಡಗಿಕೊಂಡಿದ್ದಾರೆ. ಕಿತ್ತಳೆ ಮಾರುತ್ತಾ 100 -200 ರೂಪಾಯಿಯನ್ನು ಉಳಿಸಿಕೊಂಡು, ತನ್ನೂರಿಗೊಂದು ಶಾಲೆ ಮಂಜೂರು ಮಾಡಿ ಅಂತಾ ಹರೇಕಳ ಹಾಜಬ್ಬ ಬರಿಗಾಲಿನಲ್ಲಿ ಅಲೆದಾಡದ ಕಚೇರಿಯಿಲ್ಲ, ರಾಜಕಾರಣಿಗಳ ಮನೆಯಿಲ್ಲ. ಆರಂಭದಲ್ಲಿ ಹಾಜಬ್ಬರನ್ನು ಕಂಡು ಅಪಹಾಸ್ಯ ಮಾಡಿದವರೇ ಹೆಚ್ಚು. ಆದರೆ ಪಟ್ಟು ಬಿಡದೇ ವರ್ಷಾನುಗಟ್ಟಲೆ ಅಲೆದಾಡಿದ ಹಾಜಬ್ಬ ಕೊನೆಗೂ ತನ್ನೂರಿಗೊಂದು ಶಾಲೆಯನ್ನು ಮಂಜೂರು ಮಾಡಿಸಿಕೊಂಡಿಯೇ ಬಿಟ್ಟರು.

1999ರಲ್ಲಿ ನ್ಯೂ ಪಡ್ಪು ಗ್ರಾಮಕ್ಕೆ ಪ್ರಾಥಮಿಕ ಶಾಲೆಯೊಂದು ಮಂಜೂರಾಗಿತ್ತು. ಅಂದಿನಿಂದ ಇಂದಿನವರೆಗೂ ಹಾಜಬ್ಬ ತನ್ನ ದುಡಿಮೆಯನ್ನೆಲ್ಲಾ ಶಾಲೆಗೆ ವಿನಿಯೋಗಿಸುತ್ತಿದ್ದಾರೆ. ಅಂಗನವಾಡಿಯಿಂದ ಹಿಡಿದು ಪ್ರೌಢಶಾಲೆಯವರೆಗೂ ಹಾಜಬ್ಬನ ಶಾಲೆಯಲ್ಲಿ ಮಕ್ಕಳು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪದವಿ ಕಾಲೇಜನ್ನೂ ಆರಂಭಿಸೊ ಮಹದಾಸೆಯನ್ನು ಹೊತ್ತಿದ್ದಾರೆ ಅಕ್ಷರ ಸಂತ.

ಹಾಜಬ್ಬರ ಮನೆ

ಹಾಜಬ್ಬರ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಪತ್ನಿಯ ಅನಾರೋಗ್ಯವನ್ನೂ ಲೆಕ್ಕಿಸದೇ ಹಾಜಬ್ಬ ತನ್ನ ದುಡಿಮೆಯ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿದ್ದಾರೆ. ಪ್ರಶಸ್ತಿಗೆ ಎಂದೂ ಆಸೆ ಪಡದಿದ್ದರೂ, ಹಾಜಬ್ಬರನ್ನು ಹುಡಿಕಿಬಂದ ಪ್ರಶಸ್ತಿಗಳು ಒಂದಲ್ಲ, ಎರಡಲ್ಲ. ತನಗೆ ಪ್ರಶಸ್ತಿಯಿಂದ ಬಂದ ಹಣವನ್ನೂ ಹಾಜಬ್ಬ ತನ್ನ ಸ್ವಾರ್ಥಕ್ಕೆ ಬಳಸಿಕೊಂಡಿಲ್ಲ.

ಬದಲಾಗಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ವಿನಿಯೋಗಿಸಿದ್ದಾರೆ. ಶಾಲೆಗೆ ಹಣ ನೀಡಿದ ದಾನಿಗಳ ಹೆಸರನ್ನು ಗೋಡೆಯ ಮೇಲೆ ಬರೆಯಿಸಿದ್ದರಾದರೂ ತನ್ನ ಹೆಸರನ್ನೂ ಎಲ್ಲಿಯೂ ಬರೆಯಿಸಿಕೊಂಡಿಲ್ಲ.


ಇಂತಹ ಶಿಕ್ಷಣ ಸಂತನ ಸಾಧನೆಯನ್ನು ಕೇಂದ್ರ ಸರಕಾರ ಗುರುತಿಸಿದ್ದು, ಈ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಒಟ್ಟಿನಲ್ಲಿ ಶಿಕ್ಷಣದಲ್ಲಿ ಕ್ರಾಂತಿಮಾಡಿರೊ ಹಾಜಬ್ಬರಿಗೆ ಅತ್ಯುನ್ನತ ಪ್ರಶಸ್ತಿ ಲಭಿಸಿರುವುದು ಕರುನಾಡಿಗೆ ಹೆಮ್ಮೆಯೇ ಸರಿ.

ಸ್ಪೆಷಲ್ ಡೆಸ್ಕ್ News Next ಕನ್ನಡ

Leave A Reply

Your email address will not be published.