ಇಂದಿನಿಂದ ಸಿಇಟಿ ಪರೀಕ್ಷೆ ಆರಂಭ : ಕೊರೊನಾ ಸೋಂಕಿತ ವಿದ್ಯಾರ್ಥಿಗಳಿಗೂ ಅವಕಾಶ

0

ಬೆಂಗಳೂರು : ಎಲ್ಲಾ ಗೊಂದಲಗಳ ಬಳಿಕ ರಾಜ್ಯದಲ್ಲಿ ಇಂದಿನಿಂದ ಸಿಇಟಿ ಪರೀಕ್ಷೆ ಆರಂಭಗೊಳ್ಳಲಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಗೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ಒಟ್ಟು 1,94,356 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಸಿಇಟಿ ಪರೀಕ್ಷೆಯನ್ನು ನಡೆಸುವಂತೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಗಳು ಇಂದಿನ ಆರಂಭಗೊಳ್ಳಲಿದ್ದು, ಅಗಸ್ಟ್ 1ರ ವರೆಗೂ ನಡೆಯಲಿದೆ. ರಾಜ್ಯದಲ್ಲಿ ಒಟ್ಟು 1,94,356 ವಿದ್ಯಾರ್ಥಿಗಳು 120 ಸ್ಥಳಗಳಲ್ಲಿನ 497 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಬರೆಯಲಿದ್ದಾರೆ. ಜುಲೈ 31 ರಂದು ಜೀವಶಾಸ್ತ್ರ – ಗಣಿತಶಾಸ್ತ್ರ, ಜುಲೈ 31ರಂದು ಭೌತಶಾಸ್ತ್ರ-ರಸಾಯನಶಾಸ್ತ್ರ ಹಾಗೂ ಅಗಸ್ಟ್ 1ರಂದು ಕನ್ನಡ ಭಾಷಾ ಪರೀಕ್ಷೆ ( ಬೆಂಗಳೂರು ಕೇಂದ್ರದಲ್ಲಿ ಮಾತ್ರ)ಗಳು ನಡೆಯಲಿದ್ದು, ಬೆಳಗ್ಗೆ 10.30ರಿಂದ 11.50 ರವರೆಗೆ ಹಾಗೂ ಮಧ್ಯಾಹ್ನ 2.30ರಿಂದ 3.30 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ.

ಎಸ್ಎಸ್ಎಲ್ ಸಿ ಪರೀಕ್ಷೆಗೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳನ್ನೇ ಸಿಇಟಿ ಪರೀಕ್ಷೆಗೂ ಕೈಗೊಳ್ಳಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡುವಂತೆ ಸೂಚಿಸಲಾಗಿದೆ. ಅಲ್ಲದೇ ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆಯನ್ನು ನಡೆಸಲಾಗುತ್ತದೆ. ಯಾವುದೇ ಗೊಂದಲಗಳು ಉಂಟಾಗದಂತೆ ಪರೀಕ್ಷೆ ನಡೆಸಬೇಕೆಂದು ಈಗಾಗಲೇ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಲಾಗಿದೆ.

ಕೊರೊನಾ ಪಾಸಿಟಿವ್ ವಿದ್ಯಾರ್ಥಿಗಳಿಗೂ ಕೂಡ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಲಕ್ಷಣಗಳಲ್ಲದೆ ನೆಗಡಿ, ಕೆಮ್ಮು, ಶೀತ ಇರುವ ವಿದ್ಯಾರ್ಥಿಗಳನ್ನೂ ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಲಾಗುತ್ತದೆ. ಎಲ್ಲಾ ಕೇಂದ್ರಗಳ ಬಳಿ ಆ್ಯಂಬುಲೆನ್ಸ್ ಸೇರಿ ಸಾರಿಗೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ತೆರಳಲು ಬೆಂಗಳೂರಿನಲ್ಲಿ ಬಿಎಂಟಿಸಿ ಹಾಗೂ ರಾಜ್ಯಾದ್ಯಂತ ಕೆಎಸ್ಆರ್ಟಿಸಿ ವತಿಯಿಂದ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಸಿಇಟಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಅಥವಾ ಪೋಷಕರಿಗೆ ಯಾವುದೇ ಗೊಂದಲವಿದ್ದರೆ ಸಿಇಟಿ ಹೆಲ್ಪ್ ಲೈನ್: 080 23460460, 080 23564583 ಈ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ.

Leave A Reply

Your email address will not be published.