Kannada Teacher Recruitment : ಕನ್ನಡ ಶಿಕ್ಷಕರ ನೇಮಕಾತಿ : ಕನ್ನಡ ಶಿಕ್ಷಕರಿಗೆ ಇಂಗ್ಲೀಷ್​ ಕಡ್ಡಾಯ..! ಕನ್ನಡಿಗರಿಂದ ತೀವ್ರ ವಿರೋಧ

ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಕನ್ನಡ ಭಾಷಾ ಶಿಕ್ಷಕರ ನೇಮಕಾತಿಗಾಗಿ ಇಲಾಖೆಯು ಸಿದ್ಧಪಡಿಸಿರುವ ಕರಡು ನಿಯಮದಲ್ಲಿ, ಅಭ್ಯರ್ಥಿಗಳಿಗೆ ಇಂಗ್ಲಿಷ್ ಭಾಷೆಯ ಜ್ಞಾನ ಕಡ್ಡಾಯ ಎಂದು ಉಲ್ಲೇಖಿಸಲಾಗಿದೆ.

Kannada Teacher Recruitment : ಬೆಂಗಳೂರು : ಕನ್ನಡ ನಾಡಿನ ಸರ್ಕಾರಿ ಶಾಲೆಗಳ ಇತಿಹಾಸದಲ್ಲೇ ಅತ್ಯಂತ ಗಂಭೀರ ವಿವಾದವೊಂದು ಇದೀಗ ಬೆಳಕಿಗೆ ಬಂದಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಹೊರಡಿಸಿರುವ ಹೊಸ ನಿಯಮಾವಳಿ ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಕನ್ನಡ ಭಾಷಾ ಶಿಕ್ಷಕರ ನೇಮಕಾತಿಗಾಗಿ ಇಲಾಖೆಯು ಸಿದ್ಧಪಡಿಸಿರುವ ಕರಡು ನಿಯಮದಲ್ಲಿ, ಅಭ್ಯರ್ಥಿಗಳಿಗೆ ಇಂಗ್ಲಿಷ್ ಭಾಷೆಯ ಜ್ಞಾನ ಕಡ್ಡಾಯ ಎಂದು ಉಲ್ಲೇಖಿಸಲಾಗಿದೆ.

ಈ ಆದೇಶದ ಬೆನ್ನಲ್ಲೇ ಇಡೀ ರಾಜ್ಯಾದ್ಯಂತ ಭಾಷಾ ಪ್ರೇಮಿಗಳು, ವಿದ್ಯಾರ್ಥಿಗಳು ಮತ್ತು ಹೋರಾಟಗಾರರಿಂದ ತೀವ್ರ ಆಕ್ರೋಶದ ಮಹಾಪೂರವೇ ಹರಿದುಬರುತ್ತಿದೆ. ಕನ್ನಡದ ನೆಲದಲ್ಲೇ ಕನ್ನಡಕ್ಕೆ ಸಿಗಬೇಕಾದ ಮೊದಲ ಆದ್ಯತೆಯನ್ನು ಕಡೆಗಣಿಸಿ, ಪಾಶ್ಚಿಮಾತ್ಯ ಭಾಷೆಗೆ ಮಣೆ ಹಾಕುತ್ತಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರದ ಈ ಧೋರಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಾಧಿಕಾರದ ಅಧ್ಯಕ್ಷರು ಶಿಕ್ಷಣ ಸಚಿವರಿಗೆ ಕಡಕ್ ಪತ್ರ ಬರೆದಿದ್ದಾರೆ.

ಕನ್ನಡ ನೆಲದಲ್ಲಿ ಕನ್ನಡ ಭಾಷೆಯನ್ನು ಬೋಧಿಸುವ ಶಿಕ್ಷಕರಿಗೆ ಇಂಗ್ಲಿಷ್ ಭಾಷೆಯ ಪರೀಕ್ಷೆ ನಡೆಸುವುದು ಎಷ್ಟು ಸೂಕ್ತ ಎಂದು ಅವರು ಪ್ರಶ್ನಿಸಿದ್ದಾರೆ. ಭಾಷಾ ಶಿಕ್ಷಕರಾಗಲು ಆಯಾ ಭಾಷೆಯ ಮೇಲಿನ ಹಿಡಿತ, ಸಾಹಿತ್ಯದ ಜ್ಞಾನ ಮತ್ತು ಬೋಧನಾ ಶೈಲಿ ಮುಖ್ಯವೇ ಹೊರತು, ಅನ್ಯ ಭಾಷೆಯ ಪ್ರಾವೀಣ್ಯತೆಯಲ್ಲ ಎಂದು ಅವರು ತಮ್ಮ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಇಲಾಖೆಯ ಈ ನಡೆ ನಮ್ಮ ಅಸ್ಮಿತೆಗೆ ಧಕ್ಕೆ ತರುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಹೊಸ ನಿಯಮದಿಂದಾಗಿ ಗ್ರಾಮೀಣ ಭಾಗದಲ್ಲಿನ ನೂರಾರು ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿ. ಎಂ.ಎ ಮತ್ತು ಬಿ.ಇಡಿ ಪದವಿಯನ್ನು ಪಡೆದು ಶಿಕ್ಷಕರಾಗುವ ಕನಸು ಹೊತ್ತಿರುವ ಬಡ ವಿದ್ಯಾರ್ಥಿಗಳಿಗೆ ಇಂಗ್ಲೀಷ್‌ ಕಡ್ಡಾಯ ಅನ್ನೋದು ದೊಡ್ಡ ಅನ್ಯಾಯವಾಗಲಿದೆ.

ಕಡ್ಡಾಯ ಇಂಗ್ಲಿಷ್ ನಿಯಮದಿಂದಾಗಿ ಅವರು ಉದ್ಯೋಗ ವಂಚಿತರಾಗುವ ಭೀತಿ ಎದುರಾಗಿದೆ. ಮಾತೃಭಾಷೆಯ ಬೋಧನೆಗೆ ಇಂಗ್ಲಿಷ್ ಅಂಕಗಳನ್ನು ಮಾನದಂಡವನ್ನಾಗಿ ಮಾಡುವುದು ಅವೈಜ್ಞಾನಿಕ ನಿರ್ಧಾರ ಎಂದು ಶಿಕ್ಷಣ ತಜ್ಞರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರ ಪ್ರದೇಶದ ಕಾನ್ವೆಂಟ್ ವಿದ್ಯಾರ್ಥಿಗಳಿಗೆ ಇದು ಅನುಕೂಲ ಮಾಡಿಕೊಡಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ತರುವ ಇಂತಹ ಆದೇಶವನ್ನು ಸರ್ಕಾರವು ತಕ್ಷಣವೇ ಹಿಂಪಡೆಯಬೇಕು ಎಂದು ಕನ್ನಡಪರ ಸಂಘಟನೆಗಳು ಒಕ್ಕೊರಲಿನಿಂದ ಆಗ್ರಹಿಸಿವೆ.

ಒಂದೊಮ್ಮೆ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿಯ ವಿಚಾರದಲ್ಲಿ ಹಠಮಾರಿ ಧೋರಣೆಯನ್ನು ಹೀಗೆಯೇ ಮುಂದುವರಿಸಿದ್ರೆ, ಕರ್ನಾಟಕ ರಾಜ್ಯದಾಧ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ ಸರಕಾರ ಕನ್ನಡಿಗರ ಭಾವನೆಗೆ ಗೌರವವನ್ನು ನೀಡಿ, ಈ ಕರಡು ನಿಯಮವನ್ನು ಕೈಬಿಡುತ್ತಾ ? ಇಲ್ಲಾ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಶರಣಾಗುತ್ತಾ ಅನ್ನೋದನ್ನು ಕಾದುನೋಡಬೇಕಾಗಿದೆ.

Kannada teacher recruitment English mandatory controversy Karnataka

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »