School Reopen : ಮೇ 16 ರಿಂದ ಶಾಲೆಗಳು ಆರಂಭವಾಗುತ್ತಾ ? ಖಾಸಗಿ ಒತ್ತಡಕ್ಕೆ ಮಣಿಯುತ್ತಾ ಸರಕಾರ

ಬೆಂಗಳೂರು : ರಾಜ್ಯದಾದ್ಯಂತ ಶಿಕ್ಷಣ ಇಲಾಖೆ ಶಾಲೆಗಳನ್ನು ಮೇ 16 ರಿಂದ ಆರಂಭಿಸಲು (School Reopen) ಮುಂದಾಗಿದೆ. ಆದರೆ ಬಿಸಿಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ವಿಧಾನ ಪರಿಷತ್‌ ಸದಸ್ಯರು, ಶಾಸಕರು, ಸರಕಾರಿ ನೌಕರರ ಒಕ್ಕೂಟ ಶಾಲಾರಂಭ ಮುಂದೂಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲೀಗ ಶಾಲೆಗಳಿಗೆ ಬೇಸಿಗೆ ರಜೆ ವಿಸ್ತರಣೆಯಾಗುವ ಸಾಧ್ಯತೆ ಇದೆ.

ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಇನ್ನು 4 ದಿನ ಮಾತ್ರ. ಮೇ 16 ರಿಂದ ತರಗತಿ ಆರಂಭವಾದರೆ ಬಿಸಿಲಿನ ಝಳದಿಂದ ಮಕ್ಕಳು ಆರೋಗ್ಯ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇದೆ ಎಂಬುದು ಪಾಲಕರು ಹಾಗೂ ಶಿಕ್ಷಕರ ಅಭಿಪ್ರಾಯವಾಗಿದೆ. ಹೀಗಾಗಿ ರಜೆ ವಿಸ್ತರಣೆ ಮಾಡುವಂತೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಸರಕಾರದ ಆಗ್ರಹಿಸುತ್ತಿದ್ದಾರೆ. ಆದರೆ ಶಿಕ್ಷಣ ಸಚಿವರು ಮಾತ್ರ ಮೇ 16 ರಿಂದಲೇ ಶಾಲಾರಂಭ ಮಾಡುವುದಾಗಿ ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆಯಲ್ಲಿ ಖಾಸಗಿ ಶಾಲೆಗಳ ಒಕ್ಕೂಟ ಶಾಲಾರಂಭ ಮುಂದೂಡಿಕೆ ಬೇಡಾ ಎಂದು ಸರಕಾರಕ್ಕೆ ಪತ್ರವನ್ನು ಬರೆದಿದೆ.

ವರ್ಷಂಪ್ರತಿ ಮೇ 29 ರಂದು ಹೊಸ ಶೈಕ್ಷಣಿಕ ವರ್ಷಕ್ಕೆ ಶಾಲೆಗಳು ಪುನರ್‌ ಆರಂಭ ಗೊಳ್ಳುತ್ತಿದ್ದವು. ಆದರೆ ಕಳೆದ ಎರಡು ವರ್ಷಗಳಲ್ಲಿ ಕೊರೊನಾ ವೈರಸ್‌ ಸೋಂಕು ಶೈಕ್ಷಣಿಕ ಚಟುವಟಿಕೆಯ ಮೇಲೆ ಗಂಭೀರ ಪರಿಣಾಮವನ್ನು ಬೀರಿತ್ತು. ಹೀಗಾಗಿ ಶಿಕ್ಷಣ ಇಲಾಖೆ ಬೇಸಿಗೆ ರಜೆಯಲ್ಲಿ(Summer Holidays 2022) ಹದಿನೈದು ದಿನಗಳ ಕಾಲ ಕಡಿತ ಮಾಡಿದ್ದು, ವಿದ್ಯಾರ್ಥಿಗಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಶಿಕ್ಷಣ ಸಚಿವರು ಆಯೋಜನೆ ಮಾಡಿರುವ ಕಾರ್ಯಕ್ರಮದ ಬಗ್ಗೆ ಇದೀಗ ಅಪಸ್ವರ ಕೇಳಿಬಂದಿದೆ. ಬಿಸಿಲ ಬೇಗೆಯಲ್ಲಿ ಮಕ್ಕಳನ್ನು ತರಾತುರಿಯಲ್ಲಿ ಶಾಲೆಗೆ ಕರೆಯಿಸುವ ಅಗತ್ಯವೇನಿದೆ ಅಂತಾನೂ ಪೋಷಕರು ಪ್ರಶ್ನಿಸುತ್ತಿದ್ದಾರೆ.

School Reopen : ಬಿಸಿಗಾಳಿಗೆ ಪೋಷಕರು ಕಂಗಾಲು

ದೇಶದ ಹಲವು ರಾಜ್ಯಗಳಂತೆಯೇ ಈ ಬಾರಿಯೂ ಕರ್ನಾಟಕದಲ್ಲಿಯೂ ಬಿಸಿಗಾಳಿಯ ಅಲೆ ಆರಂಭವಾಗಿದೆ. ಬಿಸಿಗಾಳಿಯಿಂದಾಗಿ ಸೆಕೆ ಹೆಚ್ಚುತ್ತಿದೆ. ಇನ್ನೊಂದೆಡೆಯಲ್ಲಿ ಅಕಾಲಿಕ ಮಳೆಯಿಂದಾಗಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ಉತ್ತರ ಭಾರತದ ರಾಜ್ಯಗಳಲ್ಲಿ ಸನ್‌ಸ್ಟ್ರೋಕ್‌ ಉಂಟಾಗಿದೆ. ಹೀಗಾಗಿ ಮಕ್ಕಳು ಮಧ್ಯಾಹ್ನದ ಬಿಸಿಲಿನಲ್ಲಿ ಮನೆಯಿಂದ ಹೊರಬರದಂತೆ ಆರೋಗ್ಯ ಇಲಾಖೆಯೇ ಸೂಚನೆಯನ್ನು ನೀಡಿದೆ. ವಯಸ್ಕರಿಗೆ ಬಿಸಿಲಿನಲ್ಲಿ ತಿರುಗಾಡದಂತಹ ಸ್ಥಿತಿ ಇರುವಾಗ ಮಕ್ಕಳು ಶಾಲೆಯಲ್ಲಿ ಕೂರುವುದಕ್ಕೆ ಸಾಧ್ಯವೇ ಅನ್ನೋ ಮಾತುಗಳು ಕೇಳಿಬರುತ್ತಿವೆ. ರಾಜ್ಯದೆಲ್ಲೆಡೆ ಮಳೆ ಸುರಿದರೂ ಬಿಸಿಲಿನ ತಾಪ ಮಿತಿ ಮೀರುತ್ತಿದೆ. ಮೇ ಮಧ್ಯದಲ್ಲಿ ದಾಖಲಾದ ಗರಿಷ್ಠ ತಾಪಮಾನವು ಈ ವರ್ಷ ಏಪ್ರಿಲ್ ಮಧ್ಯದಲ್ಲಿ ದಾಖಲಾಗಿದೆ. ಕಲ್ಬುರ್ಗಿ, ಬೀದರ್, ರಾಯಚೂರು ಉಡುಪಿ, ದಕ್ಷಿಣ ಕನ್ನಡ ಮತ್ತು ಕೋಲಾರ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಿದೆ.

ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಹಿಂದೇಟು

ಬಿಸಿಗಾಳಿ, ತಾಪಮಾನ ಏರಿಕೆಯಿಂದಾಗಿ ಕಂಗಾಲಾಗಿರುವ ಹಲವು ಪೋಷಕರು ಮೇ ೧೬ರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ದರಿಲ್ಲ. ಬಹುತೇಕ ಶಾಲೆಗಳಲ್ಲಿ ಮೂಲ ಸೌಕರ್ಯ ಗಳೇ ಇಲ್ಲ. ಸೆಕೆಯಲ್ಲಿ ಫ್ಯಾನ್‌ ಇಲ್ಲದೇ ಮಕ್ಕಳು ಕೂರುವುದು ಕಷ್ಟಸಾಧ್ಯ. ಮನೆಯಲ್ಲಿಯೇ ಉಸಿರುಗಟ್ಟಿದಂತಹ ವಾತಾವರಣವಿದೆ. ಹೀಗಾಗಿ ಮಕ್ಕಳನ್ನು ಬಿಸಿಲಿನಲ್ಲಿ ಹೇಗೆ ಶಾಲೆಗೆ ಕಳುಹಿಸುವುದು ಅಂತಾ News Next ಜೊತೆಗೆ ಬಹುತೇಕ ಪೋಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ಯಪಡಿಸಿದ್ದಾರೆ.

ರಜೆ ವಿಸ್ತರಣೆ ಮಾಡಿ, ಸನ್‌ಸ್ಟ್ರೋಕ್‌ ಭೀತಿಯಿದೆ ಎಂದ ಹೊರಟ್ಟಿ

ಇತರ ರಾಜ್ಯದ ಶಾಲೆಗಳಲ್ಲಿ ಹಿಂದಿನ ಸಮಯದ ಬದಲಿಗೆ ಕಾರ್ಯನಿರ್ವಹಣೆಯ ಸಮಯವನ್ನು ಬದಲಾಯಿಸಿವೆ. ಕೆಲವು ರಾಜ್ಯಗಳು ವಿಪರೀತ ಶಾಖದ ಪರಿಸ್ಥಿತಿಗಳ ಕಾರಣದಿಂದಾಗಿ ಬೇಸಿಗೆ ರಜೆಗಳನ್ನು ವಿಸ್ತರಿಸಲಾಗುತ್ತದೆ. ಶಾಲೆಗಳಿಗೆ ಬೇಸಿಗೆ ರಜೆ ವಿಚಾರವಾಗಿ ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹಾಗೂ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್.‌ ಷಡಕ್ಷರಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಶಾಲಾ ಬೇಸಿಗೆ ರಜೆಯನ್ನು ವಿಸ್ತರಿಸುವಂತೆ ಪತ್ರದಲ್ಲಿ ಕೋರಿದ್ದಾರೆ. ಅಲ್ಲದೇ ವಿಧಾನ ಪರಿಷತ್‌ ಸದಸ್ಯ ಎಸ್.ಎಲ್.‌ ಬೋಜೇಗೌಡ ಸೇರಿದಂತೆ ಹಲವರು ಈಗಾಗಲೇ ಶಾಲಾರಂಭವನ್ನು ಮುಂದೂಡುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ. ಜೊತೆಗೆ ಶಿಕ್ಷಕರ ಸಂಘ ಕೂಡ ಸರಕಾರಕ್ಕೆ ಮನವಿ ಮಾಡಿಕೊಂಡಿದೆ.

School Reopen : ಶಾಲಾರಂಭ ಮುಂದೂಡಿಕೆ : ಶಿಕ್ಷಣ ಇಲಾಖೆ ಚಿಂತನೆ

ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದೆ. ಮಲೆನಾಡು, ಕರಾವಳಿ ಭಾಗದಲ್ಲಿಯೇ ಬಿಸಿಲ ಬೇಗೆಗೆ ಜನರು ತತ್ತರಿಸಿದ್ದಾರೆ. ಇನ್ನು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಜನರ ಬದುಕು ಬೆಂಕಿಯೊಂದಿಗೆ ಸರಸ ಎಂಬಂತಾಗಿದೆ. ಬಿಸಿಲ ಝಳಕ್ಕೆ ಉತ್ತರ ಕರ್ನಾಟಕದ ಮಂದಿ ಮನೆಯಿಂದ ಹೊರ ಬರಲಾರದ ಸ್ಥಿತಿಯಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿ ಶಾಲೆಗಳು ಆರಂಭವಾದ್ರೆ ಮಕ್ಕಳ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಇನ್ನು ಬಹುತೇಕ ಶಾಲೆಗಳಲ್ಲಿ ಫ್ಯಾನ್‌, ಕುಡಿಯುವ ನೀರಿನ ಸಮಸ್ಯೆಯಿದೆ. ಇಂತಹ ಸ್ಥಿತಿಯಲ್ಲಿ ಶಾಲಾರಂಭ ಮಾಡಿ ಇಕ್ಕಟ್ಟಿಗೆ ಸಿಲುಕುವುದು ಬೇಡಾ ಅನ್ನೋ ಸಲಹೆ ಹಲವರಿಂದಲೂ ವ್ಯಕ್ತವಾಗುತ್ತಿದೆ. ಹದಿನೈದು ದಿನ ರಜೆಯನ್ನು ವಿಸ್ತರಣೆ ಮಾಡಿದ್ರೆ ಮಕ್ಕಳ ಶಿಕ್ಷಣದ ಮೇಲೆ ಯಾವುದೇ ಗಂಭೀರ ಸಮಸ್ಯೆ ಉಂಟಾಗುವುದಿಲ್ಲ ಅನ್ನೋ ಅಭಿಪ್ರಾಯ ಶಿಕ್ಷಣ ತಜ್ಞರಿಂದಲೂ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ಅಕಾಲಿಕ ಮಳೆಯಿಂದ ತಾಪಮಾನ ಏರಿಕೆಯಾದ್ರೆ ರಜೆ ವಿಸ್ತರಣೆಯ ಕುರಿತು ಶಿಕ್ಷಣ ಇಲಾಖೆ ಕೂಡ ಗಂಭೀರ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ.

ಶಾಲಾರಂಭ ಮಾಡಿ : ಖಾಸಗಿ ಶಾಲೆ ಒಕ್ಕೂಟದ ಮನವಿ

ಯಾವುದೇ ಕಾರಣಕ್ಕೂ ಶಾಲಾರಂಭವನ್ನು ಮುಂದೂಡಿಕೆ ಮಾಡಬೇಡಿ ಎಂದು ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಸ್ಕೂಲ್ಸ್ ಇನ್ ಕರ್ನಾಟಕ (ಕೆಎಎಂಎಸ್) ಕಾರ್ಯದರ್ಶಿ ಶಶಿಕುಮಾರ್ ಸರಕಾರವನ್ನು ಒತ್ತಾಯಿಸಿದ್ದಾರೆ. ಮಕ್ಕಳ ಶಿಕ್ಷಣವನ್ನು ಸುಧಾರಿಸಲು ಒತ್ತು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. 2019-20 ರಿಂದ ಇಂದಿನ ಶೈಕ್ಷಣಿಕ ವರ್ಷದವರೆಗೆ, ಒಂದರಿಂದ 10 ನೇ ತರಗತಿಯವರೆಗೆ ಶೈಕ್ಷಣಿಕ ಚಟುವಟಿಕೆಗಳು ಕಡಿಮೆ. ಇದು ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾನಸಿಕ, ದೈಹಿಕ ಮತ್ತು ಶೈಕ್ಷಣಿಕ ಅನ್ಯಾಯವನ್ನು ಉಂಟುಮಾಡುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಜೂನ್ ಬದಲಿಗೆ ಮೇ 16ರಂದು ಶಾಲೆ ತೆರೆಯಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಖಾಸಗಿ ಒತ್ತಡಕ್ಕೆ ಮಣಿಯುತ್ತಾರಾ ಶಿಕ್ಷಣ ಸಚಿವರು ?

ಬೇಸಿಗೆ ರಜೆ ಕಡಿತ ಮಾಡಿ ಶಾಲಾರಂಭಕ್ಕೆ ಮುಂದಾಗಿರುವ ಶಿಕ್ಷಣ ಇಲಾಖೆ ಹಾಗೂ ಸಚಿವರ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕಲಿಕಾ ಚೇತರಿಕೆಯ ಹೆಸರಿನಲ್ಲಿ ಮಕ್ಕಳ ಆರೋಗ್ಯದ ಜೊತೆಗೆ ಚೆಲ್ಲಾಟ ಆಡಬೇಡಿ ಅನ್ನೋ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಇನ್ನೊಂದೆಡೆಯಲ್ಲಿ ಜೂನ್‌ ತಿಂಗಳಲ್ಲಿ ಕೊರೊನಾ ನಾಲ್ಕನೇ ಅಲೆ ಉತ್ತುಂಗಕಕ್ಕೆ ತಲುಪಲಿದೆ ಅನ್ನುವ ಕುರಿತು ತಜ್ಞರು ಸರಕಾರವನ್ನು ಎಚ್ಚರಿಸಿದ್ದಾರೆ. ಆರೋಗ್ಯ ಸಚಿವರು ಕೂಡ ಜೂನ್‌ ನಿಂದ ಅಗಸ್ಟ್‌ ತಿಂಗಳ ವರೆಗೆ ಕೊರೊನಾ ಅಲೆ ಬಾದಿಸಲಿದೆ ಎಂದು ತಿಳಿಸಿದ್ದಾರೆ. ಒಂದೊಮ್ಮೆ ಕಲಿಕಾ ಚೇತರಿಕೆಯ ಹೆಸರಲ್ಲಿ ಶಾಲೆಗಳು ಬೇಗ ಆರಂಭವಾದ್ರೆ, ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ದಾಖಲಾತಿ ಪೂರ್ಣಗೊಂಡ ನಂತರ ಕೊರೊನಾ ಸೋಂಕು ಬಾಧಿಸಿದ್ರೂ ಯಾವುದೇ ಸಮಸ್ಯೆ ಆಗುವುದಿಲ್ಲ ಅನ್ನೋ ಖಾಸಗಿ ಶಾಲೆಗಳ ಲೆಕ್ಕಾಚಾರ. ಹೀಗಾಗಿ ಶಾಲಾರಂಭ ಮುಂದೂಡಿಕೆ ಮಾಡದಂತೆ ಶಿಕ್ಷಣ ಸಚಿವರ ಮೇಲೆ ಖಾಸಗಿ ಶಾಲೆಗಳು ಒತ್ತಡ ಹೇರುತ್ತಿವೆ. ಇದೀಗ ಶಿಕ್ಷಣ ಇಲಾಖೆ ಹಾಗೂ ಸರಕಾರ ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದಿದೆ ಅನ್ನೋ ಆರೋಪವನ್ನು ಪೋಷಕರು ಮಾಡುತ್ತಿದ್ದಾರೆ. ಸದಾ ಮಕ್ಕಳ ಆರೋಗ್ಯವೇ ಮುಖ್ಯ ಅನ್ನುತ್ತಿದ್ದ ಸರಕಾರ ಇದೀಗ, ಮಕ್ಕಳ ಆರೋಗ್ಯವನ್ನೂ ಲೆಕ್ಕಿಸದೇ ಶಾಲಾರಂಭಕ್ಕೆ ಮುಂದಾಗಿರುವುದು ಎಷ್ಟು ಸರಿ ಅನ್ನೋದು ಸಾರ್ವಜನಿಕರ ಪ್ರಶ್ನೆ. ಒಟ್ಟಿನಲ್ಲಿ ಜನರ ಕಾಳಜಿ ಇರುವ ಸಿಎಂ ಬಸವರಾಜ್‌ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಈ ಕುರಿತು ನಿರ್ಧಾರ ಕೈಗೊಳ್ಳಲಿ ಅನ್ನೋ ಮನವಿಯೂ ಪೋಷಕರ ವಲಯದಿಂದ ಕೇಳಿಬರುತ್ತಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : SSLC Result : ಮೇ 20 ರೊಳಗೆ ಎಸ್ಎಸ್ಎಲ್‌ಸಿ ಫಲಿತಾಂಶ: ಮೌಲ್ಯ ಮಾಪನಕ್ಕೆ ಗೈರಾದವರಿಗೆ ನೊಟೀಸ್

ಇದನ್ನೂ ಓದಿ :  ಪಿಎಸ್​ಐ ನೇಮಕಾತಿ ಅಕ್ರಮದ ಬಳಿಕ ರಾಜ್ಯ ಸರ್ಕಾರ ಅಲರ್ಟ್ : ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಇವುಗಳಿಗೆ ನಿರ್ಬಂಧ

Karnataka School Reopen or not on May 16 here is what we know so far

Comments are closed.