ಫೀಸ್ ಕಟ್ಟದಿದ್ದರೇ ನೋ ಕ್ಲಾಸ್….! ಪೋಷಕರಿಗೆ ಸ್ಕೂಲ್ ಶಾಕ್…!!

ಬೆಂಗಳೂರು : ಮುಂದಿನ ವರ್ಷದ ತನಕ ಶಾಲೆಗಳು ಬಾಗಿಲು ತೆರೆಯೋದು ಬಹುತೇಕ ಅನುಮಾನ.ಸರ್ಕಾರ ಇಂತಹದೊಂದು ತೀರ್ಮಾನ ಪ್ರಕಟಿಸುತ್ತಿದ್ದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಗೆ ಶಾಕ್ ನೀಡಿದ್ದು ಫೀಸ್ ಕಟ್ಟದಿದ್ದರೇ ನೋ ಕ್ಲಾಸ್ ಎಂದಿದೆ.

ರಾಜ್ಯದಲ್ಲಿ ಶಾಲೆಗಳು ಬಾಗಿಲು ಮುಚ್ಚಿ ಇನ್ನೇನು ಒಂದು ವರ್ಷವಾಗುವ ಕಾಲ ಬಂದಿದೆ. ಈ ಮಧ್ಯೆ ಸರ್ಕಾರ ಡಿಸೆಂಬರ್ ಅಂತ್ಯದವರೆಗೆ ನೋ ಸ್ಕೂಲ್ ಎಂದಿದೆ. ಹೀಗಾಗಿ ತಮ್ಮ ಆದಾಯಕ್ಕೆ ಬಿದ್ದಿರೋ ಕತ್ತರಿಯನ್ನು ಗಂಭೀರವಾಗಿ ಪರಿಗಣಿಸಿದ ಖಾಸಗಿ ಶಾಲೆಗಳು ಫೀಸ್ ಕಟ್ಟದ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಗೆ ಎಂಟ್ರಿ ಇಲ್ಲ ಎಂದಿದೆ.

ಶಿಕ್ಷಣ ಇಲಾಖೆ ಜೊತೆ ಸಭೆ ನಡೆಸಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಳಿಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರನ್ನು ಫೀಸ್ ಕಟ್ಟುವಂತೆ ಒತ್ತಾಯಿಸುವಂತಿಲ್ಲ. ಅಷ್ಟೇ ಅಲ್ಲ ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ಯಾವ ಮಕ್ಕಳನ್ನೂ ಫೇಲ್ ಮಾಡುವಂತಿಲ್ಲ ಎಂದಿದ್ದರು.
ಶಿಕ್ಷಣ ಸಚಿವರ ಈ ಹೇಳಿಕೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶುಲ್ಕ ಕಟ್ಟದ ಮಕ್ಕಳನ್ನು ಆನ್ ಲೈನ್ ಕ್ಲಾಸ್ ನಿಂದ ಹೊರಗಿಡುತ್ತೇವೆ ಎಂದಿದ್ದಾರೆ.

ಬಹುತೇಕ ಪೋಷಕರು ಫೀಸ್ ಕೊಟ್ಟಿಲ್ಲ. ಇದರಿಂದ ಶಿಕ್ಷಣ ಸಂಸ್ಥೆಗಳು ಸಂಕಷ್ಟದಲ್ಲಿವೆ. ನಮಗೂ ಕಷ್ಟವಿದೆ. ನೂರಾರು ಸಿಬ್ಬಂದಿಗಳಿಗೆ ಸಂಬಳ ಕೊಡಬೇಕು. ಫೀಸ್ ಕಲೆಕ್ಟ್ ಮಾಡದೇ ಶಿಕ್ಷಣ ಸಂಸ್ಥೆ ನಡೆಸೋದು ಕಷ್ಟ. ಸಚಿವರು ಇದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಅಷ್ಟೇ ಅಲ್ಲ ಶಿಕ್ಷಣ ಸಚಿವರು ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಗಮನಿಸಿ ಫೀಸ್ ಕಟ್ಟದಿದ್ದರೂ ಪಾಸ್ ಮಾಡಿ ಎಂಬ ಆದೇಶ ನೀಡಬಾರದು. ಬಡ ಶಿಕ್ಷಣ ಸಂಸ್ಥೆಗಳು ಹಾಗೂ ಖಾಸಗಿ ಶಿಕ್ಷಕರ ಕಷ್ಟವನ್ನು ಅರಿತು ಮಾತನಾಡಬೇಕೆಂದು ಒತ್ತಾಯಿಸಿದ್ದಾರೆ.

Comments are closed.