ದೇಶದಾದ್ಯಂತ ಶಾಲೆ ಕಾಲೇಜು ಪುನರಾರಂಭ : ಸುಪ್ರೀಂ ಕೋರ್ಟ್ ಗೆ ಗೃಹ ಇಲಾಖೆ ಅಫಿಡವಿಟ್

0

ನವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಮಹಾಮಾರಿ ಆರ್ಭಟ ಜೋರಾಗಿದೆ. ಕೊರೊನಾ ಲಾಕ್ ಡೌನ್ ಮುನ್ನವೇ ಬಂದ್ ಆಗಿದ್ದ ಶಾಲೆ, ಕಾಲೇಜುಗಳು ಇನ್ನೂ ಪುನರಾರಂಭಗೊಂಡಿಲ್ಲ. ಇದೀಗ ಮೂರನೇ ಹಂತದ ಅನ್ ಲಾಕ್ ಪ್ರಕ್ರಿಯೆಯ ವೇಳೆಯಲ್ಲಿ ಶಾಲಾ, ಕಾಲೇಜುಗಳನ್ನು ತೆರೆಯಲು ಅವಕಾಶ ಕಲ್ಪಿಸುವುದಾಗಿ ಕೇಂದ್ರ ಗೃಹ ಇಲಾಖೆ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.

ಪದವಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೇ ಪಾಸ್ ಮಾಡುವ ನಿರ್ಧಾರ ಮಾಡಿದ್ದ ಯುಜಿಸಿ ಸೆಪ್ಟೆಂಬರ್ 30ರ ಒಳಗಾಗಿ ಅಂತಿಮ ವರ್ಷದ ಪದವಿ ತರಗತಿಗಳಿಗೆ ಪರೀಕ್ಷೆ ಮುಗಿಸುವಂತೆ ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೂಡ ಶೈಕ್ಷಣಿಕ ಸಂಸ್ಥೆಗಳನ್ನು ತೆರಯಲು ಕೇಂದ್ರ ಸರಕಾರ ಮನಸ್ಸು ಮಾಡಿದ್ದು, ಮೂರು ಹಂತಗಳಲ್ಲಿ ದೇಶದಾದ್ಯಂತ ಶಾಲೆ, ಕಾಲೇಜುಗಳು ಪುನರಾರಂಭಗೊಳ್ಳಲಿವೆ.

ಆರಂಭಿಕ ಹಂತದಲ್ಲಿ ಅಂದ್ರೆ ಸಪ್ಟೆಂಬರ್ 1ರಿಂದ 10. 11 ಮತ್ತು 12ನೇ ತರಗತಿಗಳು ಆರಂಭಗೊಳ್ಳಲಿದ್ದು, ಜೊತೆಗೆ ಕಾಲೇಜುಗಳು ಆರಂಭವಾಗುವ ಸಾಧ್ಯತೆಯಿದೆ. ಇನ್ನು ಸಪ್ಟೆಂಬರ್ 15 ರಿಂದ 6 ರಿಂದ 9ನೇ ತರಗತಿ ಹಾಗೂ ನವೆಂಬರ್ 14ರ ಬಳಿಕ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಪ್ಲ್ಯಾನ್ ರೂಪಿಸಿದೆ. ಆದರೆ ಯಾವುದೇ ಕಾರಣಕ್ಕೂ ಶೂನ್ಯ ಶೈಕ್ಷಣಿಕ ವರ್ಷವನ್ನಾಗಿ ಘೋಷಣೆ ಮಾಡುವುದಿಲ್ಲವೆಂದು ಕೇಂದ್ರ ಸರಕಾರ ಹೇಳಿದೆ.

ಕೇಂದ್ರ ಸರಕಾರ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯಲು ಅವಕಾಶವನ್ನು ಕಲ್ಪಿಸಿದ್ರೂ ಕೂಡ ಶಾಲೆ ಹಾಗೂ ಕಾಲೇಜುಗಳನ್ನು ಆರಂಭಿಸಬೇಕೆ ? ಅಥವಾ ಬೇಡವೇ ? ಅನ್ನುವ ಗೊಂದಲಕ್ಕೆ ರಾಜ್ಯ ಸರಕಾರಗಳು ಸಿಲುಕಿವೆ. ಲಾಕ್ ಡೌನ್ ವೇಳೆಗಿಂತಲೂ ಅನ್ ಲಾಕ್ ನಂತರವೇ ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣದಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅತೀ ಕಡಿಮೆ ಪ್ರಮಾಣದ ಸೋಂಕು ಇರುವ ರಾಜ್ಯಗಳು ಕೂಡ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯಲು ಮನಸ್ಸು ಮಾಡುತ್ತಿಲ್ಲ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೋಷಕರು ಶಾಲೆಗಳನ್ನು ತೆರೆಯಲು ವಿರೋಧ ವ್ಯಕ್ತಪಡಿಸಿದ್ದು, ಸಿಎಂ ಅರವಿಂದ ಕೇಜ್ರಿವಾಲ್ ಕೂಡ ಪೋಷಕರ ಮಾತಿಗೆ ಮಣೆ ಹಾಕಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ರಾಜಸ್ಥಾನ, ಕೇರಳ, ಬಿಹಾರ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳು ಕೇಂದ್ರ ನಿರ್ಧಾರದ ಮೇಲೆ ಶಾಲೆ ಆರಂಭದ ಕುರಿತು ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಯಿದೆ. ಇನ್ನು ತ್ರಿಪುರ ಸರಕಾರ 1:5 ವಿದ್ಯಾರ್ಥಿಗಳನ್ನಿಟ್ಟುಕೊಂಡು ಶಾಲೆ, ಕಾಲೇಜುಗಳು ಆರಂಭಿಸಲು ಮುಂದಾಗಿದೆ.

ಒಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶೈಕ್ಷಣಿಕ ವರ್ಷದ ಆರಂಭದ ಬಗ್ಗೆ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ. ಹಲವು ಗೊಂದಲಕಾರಿ ಹೇಳಿಕೆಗಳು ಪೋಷಕರು, ಶಿಕ್ಷಕರು ಹಾಗೂ ಶೈಕ್ಷಣಿಕ ಸಂಸ್ಥೆಯ ಆಡಳಿತ ಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ.

ಇದೀಗ ಶೈಕ್ಷಣಿಕ ಸಂಸ್ಥೆಗಳನ್ನು ಪುನರಾರಂಭಿಸುವ ಕುರಿತು ಸುಪ್ರೀಂ ಕೊರ್ಟ್ ನಲ್ಲಿ ವಿಚಾರಣೆಯು ನಡೆಯಲಿದೆ. ಇನ್ನೊಂದಡೆ ಅನ್ ಲಾಕ್ 3 ಮಾರ್ಗಸೂಚಿಯೂ ಸದ್ಯದಲ್ಲಿಯೇ ಹೊರ ಬೀಳಲಿದ್ದು, ಕೇಂದ್ರ ಸರಕಾರ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಅವಕಾಶ ಕಲ್ಪಿಸುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

Leave A Reply

Your email address will not be published.