Coastal Corona : ಕರಾವಳಿಯಲ್ಲಿ ಕೊರೊನಾ ಹೆಚ್ಚಳಕ್ಕೆ ಶಾಲೆಗಳೇ ಕಾರಣ : ಖಾಸಗಿ ಒತ್ತಡ, ಶಾಲೆ ಬಂದ್‌ ಮಾಡಲು ಸಚಿವರೇ ಅಡ್ಡಿ

ಉಡುಪಿ / ಮಂಗಳೂರು : ರಾಜ್ಯ ಆರೋಗ್ಯ ಇಲಾಖೆ ನೀಡುತ್ತಿರುವ ಅಂಕಿ ಅಂಶಗಳ ಪ್ರಕಾರ ಕರಾವಳಿ ಜಿಲ್ಲೆಗಳು ಕೊರೊನಾ ಹಾಟ್‌ಸ್ಪಾಟ್‌ (Coastal Corona) ಆಗಿ ಮಾರ್ಪಟ್ಟಿವೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಕೊರೊನಾ ಮೊದಲ ಅಲೆಯಿಂದಲೂ ಇಂದಿನ ವರೆಗೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವೀಕೆಂಡ್‌ ಕರ್ಪ್ಯೂ, ನೈಟ್‌ ಕರ್ಪ್ಯೂ ಆದೇಶ ಹೊರಡಿಸಿರುವ ಸರಕಾರ ಬಡವರ ಬದುಕಿಗೆ ಕೊಡಲಿಯೇಟು ಕೊಟ್ಟಿದೆ. ಆದರೆ ಶಾಲೆ, ಕಾಲೇಜು, ಹಾಸ್ಟೆಲ್‌ಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಕೂಡ ದಿನಕ್ಕೊಂದು ಅವೈಜ್ಞಾನಿಕ ರೂಲ್ಸ್‌ ಜಾರಿ ಮಾಡಿ ಕೊರೊನಾ ಹರಡುವಿಕೆಗೆ ಕಾರಣವಾಗುತ್ತಿದೆ ಅನ್ನೋ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ವೀಕೆಂಡ್‌ ಕರ್ಪ್ಯೂ ಜಾರಿ ಜಾರಿಯಲ್ಲಿದೆ. ಅವಿಭಜಿತ ಜಿಲ್ಲೆಯಲ್ಲಿ ನಿತ್ಯವೂ ಸಾವಿರಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಆರು ಸಾವಿರಕ್ಕೂ ಅಧಿಕ ಸಕ್ರೀಯ ಕೊರೊನಾ ಸೋಂಕಿನ ಪ್ರಕರಣಗಳಿವೆ. ಅದ್ರಲ್ಲೂ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ ಬರೋಬ್ಬರಿ 139 ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿ ತಿಂಗಳಿನಲ್ಲಿಯೇ ನೂರಾರು ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ.

ಶೀತ, ಕೆಮ್ಮ, ಜ್ವರ ಇದ್ದರೂ ಮಕ್ಕಳು ಶಾಲೆಗೆ ಹಾಜರು

ರಾಜ್ಯ ಸರಕಾರ ಕೊರೊನಾ ಮಾರ್ಗಸೂಚಿಯನ್ನು ಹೊರಡಿಸಿದ್ದರೂ ಕೂಡ ನಿಯಮ ಪಾಲನೆಯ ವಿಚಾರದಲ್ಲಿ ಬಹುತೇಕ ಶಾಲೆಗಳಲ್ಲಿ ನಿರ್ಲಕ್ಷ್ಯವಹಿಸಲಾಗುತ್ತಿದೆ. ಎಲ್‌ಕೆಜಿ, ಯುಕೆಜಿ ಸೇರಿದಂತೆ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಮಾಸ್ಕ್‌ ಇಲ್ಲದೇ ಪಾಠ ಕೇಳುತ್ತಿದ್ದಾರೆ. ಇನ್ನೂ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಕೊರೊನಾ ಸೋಂಕಿತ ಲಕ್ಷಣ ಕಾಣಿಸಿಕೊಂಡಿದ್ರು ಕೂಡ ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದಾರೆ. ಶಾಲೆಗಳಲ್ಲಿ ಕೊರೊನಾ ಮಾರ್ಗಸೂಚಿಯ ಪಾಲನೆಯ ಕುರಿತು ಶಿಕ್ಷಣ ಇಲಾಖೆಯಾಗಲಿ, ಆರೋಗ್ಯ ಇಲಾಖೆಯಾಗಲಿ ಗಮನಹರಿಸುತ್ತಿಲ್ಲ.

ಕೊರೊನಾ ಟೆಸ್ಟ್‌ನಲ್ಲೂ ಕಳ್ಳಾಟ !

ಉಡುಪಿ ಜಿಲ್ಲೆಯಲ್ಲಿನ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಕೊರೊನಾ ಟೆಸ್ಟ್‌ ನಡೆಸಲಾಗುತ್ತಿದೆ. ಸರಕಾರದ ಮಾರ್ಗಸೂಚಿಯ ಪ್ರಕಾರ ಕೊರೊನಾ ಟೆಸ್ಟ್‌ ಮಾಡಿಸಲು ಆಧಾರ್‌ ಕಾರ್ಡ್‌ ಕಡ್ಡಾಯ. ಮಕ್ಕಳಿಗೆ ಟೆಸ್ಟ್‌ ಮಾಡಿಸುವ ಮೊದಲು ಪೋಷಕರಿಗೆ ಮಾಹಿತಿ ನೀಡಬೇಕು. ಆದರೆ ಉಡುಪಿ ಜಿಲ್ಲೆಯಲ್ಲಿನ ಶಾಲೆಗಳಲ್ಲಿನ ಮಕ್ಕಳಿಗೆ ಕೊರೊನಾ ಟೆಸ್ಟ್‌ ನಡೆಸಿರುವುದು ಪೋಷಕರಿಗೆ ಗೊತ್ತೇ ಇಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿ ಕೆಲವು ಶಿಕ್ಷಕರ ಮೊಬೈಲ್‌ ಸಂಖ್ಯೆಯನ್ನು ಬಳಸಿ ಮಕ್ಕಳಿಗೆ ಟೆಸ್ಟ್‌ ಮಾಡಿಸಿದೆ. ಆದರೆ ಮಕ್ಕಳ ಕೊರೊನಾ ಟೆಸ್ಟ್‌ ವರದಿಯ ಕುರಿತು ಯಾವುದೇ ಮಾಹಿತಿಯನ್ನೂ ಪೋಷಕರಿಗೆ ನೀಡಿಲ್ಲ. ಮಕ್ಕಳನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸುವಾಗ ಕಡ್ಡಾಯವಾಗಿ ಪೋಷಕರಿಗೆ ಮಾಹಿತಿ ನೀಡದ ಕುರಿತು ಪೋಷಕರು ಸರಕಾರದ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಖಾಸಗಿ ಒತ್ತಡಕ್ಕೆ ಮಣಿಯಿತಾ ಸರಕಾರ ?

ಕೆಲವು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಕೊರೊನಾ ಟೆಸ್ಟ್‌ ನಡೆಸಲಾಗಿದೆ. ಅಲ್ಲದೇ ಹಲವು ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಆದರೆ ಶಿಕ್ಷಕರು ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದಾಗಲೂ ಶಾಲೆಗಳನ್ನು ಬಂದ್‌ ಮಾಡಿಲ್ಲ. ಕೊರೊನಾ ಸೋಂಕಿತ ಮಕ್ಕಳನ್ನು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದ್ದು, ಸಂಪರ್ಕಿತ ವಿದ್ಯಾರ್ಥಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಿಲ್ಲ. ಶೀತ, ಜ್ವರ, ಕೆಮ್ಮವಿದ್ದರೂ ಕೂಡ ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದಾರೆ. ಕೆಲವು ಶಿಕ್ಷಕರು ಅನಾರೋಗ್ಯವಿದ್ದರೂ ಕೂಡ ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿದು ಶಾಲೆಗೆ ಹಾಜರಾಗುವ ಸ್ಥಿತಿಯಿದೆ. ವಿದ್ಯಾರ್ಥಿಗಳಿಂದಲೇ ಇದೀಗ ಪೋಷಕರಿಗೆ ಕೊರೊನಾ ಸೋಂಕು ಹರಡುತ್ತಿದೆ. ಆದರೆ ಶಿಕ್ಷಣ ಸಚಿವರು ಮಾತ್ರ ಮಕ್ಕಳಿಂದ ಸೋಂಕು ಹರಡುತ್ತಿಲ್ಲ, ಶಾಲೆಗಳನ್ನು ಬಂದ್‌ ಮಾಡುವುದಿಲ್ಲ ಅನ್ನೋ ಹೇಳಿಕೆ ನೀಡುತ್ತಲೇ ಇದ್ದಾರೆ. ಸರಕಾರ ಖಾಸಗಿ ಒತ್ತಡಕ್ಕೆ ಮಣಿದು ಶಾಲೆಗಳನ್ನು ನಡೆಸುತ್ತಿದೆ ಅನ್ನೋ ಆರೋಪವೂ ಕೇಳಿಬರುತ್ತಿದೆ.

ಶಾಲೆ ಬಂದ್‌ ಮಾಡಲು ಸಚಿವರ ವಿರೋಧ

ಕರಾವಳಿ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಜನಪ್ರತಿನಿಧಿಗಳೇ ಕೂಡ ಸೋಂಕಿಗೆ ಒಳಗಾಗುತ್ತಿದ್ದಾರೆ. ಆದರೆ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಮಕ್ಕಳಿಗೆ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದರೂ ಕೂಡ ಖುದ್ದು ಶಿಕ್ಷಣ ಸಚಿವರೇ ಶಾಲೆಗಳನ್ನು ಬಂದ್‌ ಮಾಡಲು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ ಹೇರಲು ಸರಕಾರ ಜಿಲ್ಲಾಡಳಿತಕ್ಕೆ ಅಧಿಕಾರ ನೀಡಿದೆ. ಆದರೆ ಜಿಲ್ಲಾಧಿಕಾರಿಗಳಿಗೆ ಕಠಿಣ ನಿರ್ಬಂಧ, ಶಾಲೆಗಳನ್ನು ಬಂದ್‌ ಮಾಡದಂತೆಯ ಸಚಿವರು, ಶಾಸಕರು ಒತ್ತಡ ಹೇರುತ್ತಿದ್ದಾರೆ ಅಂತಾ ಕೆಲ ಅಧಿಕಾರಿಗಳೇ ಅಳಲು ತೋಡಿಕೊಂಡಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ (Coastal Corona) ಕೊರೊನಾ ಸೋಂಕು ಹರಡುವಿಕೆಗೆ ಮಕ್ಕಳೇ ಕಾರಣವಾಗುತ್ತಿದ್ದರೂ ಕೂಡ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೊರೊನಾ ಸೋಂಕಿಗೆ ಒಳಗಾಗಿರುವ ಮಕ್ಕಳ ಸಂಖ್ಯೆಯ ವಿಚಾರದಲ್ಲಿಯೂ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಗೊಂದಲದ ಅಂಕಿ ಸಂಖ್ಯೆಗಳನ್ನು ನೀಡುತ್ತಿದೆ. ಕೆಲವು ಶಾಲೆಗಳಲ್ಲಿ ಹತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿದ್ದರೂ ಕೂಡ ಶಾಲೆಗಳನ್ನು ಬಂದ್‌ ಮಾಡಿಲ್ಲ. ಶಾಲೆಗಳನ್ನು ಬಂದ್‌ ಮಾಡದೇ ವೀಕೆಂಡ್‌ ಕರ್ಪ್ಯೂ, ನೈಟ್‌ ಕರ್ಪ್ಯೂ ಮೂಲಕ ಬಡವರ ಹೊಟ್ಟೆಯ ಮೇಲೆ ಬರೆ ಹಾಕುವುದು ಸರಿಯೇ ಅನ್ನೋ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಮೊದಲ ಹಾಗೂ ಎರಡನೇ ಅಲೆಯಲ್ಲಿಯೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊರೊನಾ ನಿಯಂತ್ರಣದ ಮೂಲಕ ರಾಜ್ಯಕ್ಕೆ, ದೇಶಕ್ಕೆ ಮಾದರಿಯಾಗಿತ್ತು. ಆದರೆ ಮೂರನೇ ಅಲೆಯಲ್ಲಿ ಜಿಲ್ಲಾಡಳಿತ ಕೊರೊನಾ ನಿಯಂತ್ರಣದಲ್ಲಿ ಎಡವುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ವೀಕೆಂಡ್‌ ಕರ್ಪ್ಯೂ ಅವಧಿಯಲ್ಲಿ ಎಲ್ಲವೂ ಸಹಜ ಸ್ಥಿತಿಯಲ್ಲಿದೆ. ಜಾತ್ರೆ, ಹಬ್ಬ ಎಂದಿನಂತೆಯೇ ನಡೆಯುತ್ತಿದೆ. ಸರಕಾರ, ಜಿಲ್ಲಾಡಳಿತದ ಗಮನಕ್ಕೆ ಬರುತ್ತಿದ್ದರೂ ಕೂಡ ಕಣ್ಮುಚ್ಚಿ ಕುಳಿತುಕೊಂಡಿವೆ. ಮಕ್ಕಳಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕು ಬಾಧಿಸುವ ಮುನ್ನ ಸರಕಾರ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. ಪರ್ಯಾಯ ಮಾರ್ಗಗಳ ಮೂಲಕ ಮಕ್ಕಳು ಸೋಂಕಿಗೆ ಒಳಗಾಗುವುದನ್ನು ತಡೆಯಬೇಕಾಗಿದೆ.

ಇದನ್ನು ಓದಿ : ರಾಜ್ಯದ ಶಾಲೆಗಳಲ್ಲಿ ಕೊರೊನಾ ಸ್ಪೋಟ : ಒಂದೇ ದಿನ 850 ಮಕ್ಕಳಿಗೆ ಸೋಂಕು, ಉಡುಪಿ, ಹಾಸನದಲ್ಲಿ ಆತಂಕ

ಇದನ್ನೂ ಓದಿ : ದಕ್ಷಿಣ ಕನ್ನಡ 792, ಉಡುಪಿಯಲ್ಲಿ 607 ಹೊಸ ಕೋವಿಡ್ ಪ್ರಕರಣ : ರಾಜ್ಯದಲ್ಲಿ ಪಾಸಿಟಿವ್ ದರ 15% ಕ್ಕೆ ಏರಿಕೆ

( Schools are responsible for the increase in corona along the coastal districts)

Comments are closed.