ಶಿಕ್ಷಕರ ದಿನಾಚರಣೆ : ಶಿಕ್ಷಕರಿಗೆ ವಿಶಿಷ್ಟವಾಗಿ ಗೌರವ ಸಲ್ಲಿಸಿದ ಗೂಗಲ್

0

ನವದೆಹಲಿ : ದೇಶದಾದ್ಯಂತ ಇಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕೊರೊನಾ ಸಂಕಷ್ಟದ ನಡುವಲ್ಲೂ ತಮ್ಮ ಪ್ರಾಣದ ಹಂಗನ್ನು ತೊರೆದು ಮಕ್ಕಳಿಗೆ ಶಿಕ್ಷಣವನ್ನು ಬೋಧಿಸುತ್ತಿರುವ ಶಿಕ್ಷಕರಿಗೆ ಗೂಗಲ್ ಡೂಡಲ್​ ಮೂಲಕ ವಿಶಿಷ್ಟವಾಗಿ ಗೌರವ ಸಲ್ಲಿಸಿದೆ.

ತಮಿಳುನಾಡಿನ ತಿರುತನಿಯಲ್ಲಿ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ 1888ರ ಸೆಪ್ಟೆಂಬರ್​ 5ರಂದು ಜನಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಬಾಲ್ಯದಿಂದಲೂ ಉತ್ತಮ ವಿದ್ಯಾರ್ಥಿಯಾಗಿದ್ದ, ಸರ್ವಪಲ್ಲಿ ರಾಧಾಕೃಷ್ಣನ್, ಮದ್ರಾಸ್​ನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪಿಲಾಸಪಿ (ತತ್ವಶಾಸ್ತ್ರ) ಯಲ್ಲಿ ಎಂ.ಎ ಮಾಡಿದರು.

ನಂತರದಲ್ಲಿ ಹಲವಾರು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ದಿಂದ ಕೊಲ್ಕತ್ತಾ ಯೂನಿವರ್ಸಿಟಿವರೆಗೂ ಅಧ್ಯಾಪಕರಾಗಿದ್ದರು. ತಮ್ಮ ಶಿಕ್ಷಕ ವೃತ್ತಿಯ ಜೊತೆ-ಜೊತೆಗೆ ಭಾರತದ ತತ್ವಶಾಸ್ತ್ರವನ್ನು ವಿಶ್ವಾದ್ಯಂತ ಪರಿಚಯಿಸಿಕೊಡಲು ಅವಿರತವಾಗಿ ಶ್ರಮಿಸಿದರು. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆಸೆಯಂತೆ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಈ ಮೂಲಕ ಸರ್ವಪಲ್ಲಿ ರಾಧಾಕೃಷ್ಣ ಹಾಗೂ ಶಿಕ್ಷಕರಿಗೆ ಗೌರವವನ್ನು ಸಲ್ಲಿಸಲಾಗುತ್ತಿದೆ.

ಪ್ರತೀ ವರ್ಷವೂ ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಆದರೆ ಈ ಬಾರಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಶಿಕ್ಷಕರ ದಿನಾಚರಣೆ ಕಳೆಗುಂದಿದೆ. ಮಾತ್ರವಲ್ಲ ಕೊರೊನಾದಿಂದಾಗಿ ಶಿಕ್ಷಕರು ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆದರೂ ಶಿಕ್ಷಕರು ತಮ್ಮ ಜೀವದ ಹಂಗನ್ನು ತೊರೆದು ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಕೊರೊನಾ ಮಹಾಮಾರಿಯ ವಿರುದ್ದವೂ ಹೋರಾಟವನ್ನು ನಡೆಸುತ್ತಿದ್ದಾರೆ. ಕೊರೊನಾ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಹಿಂಜರಿಯದೇ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವ ದೇಶದ ಎಲ್ಲಾ ಶಿಕ್ಷಕರಿಗೆ ಗೂಗಲ್ ವಿಶೇಷ ಕೃತಜ್ಞತೆ ಸಲ್ಲಿಸಿದೆ.

Leave A Reply

Your email address will not be published.