ಖಾಸಗಿ ಶಿಕ್ಷಕರಿಗೆ ವೇತನದಲ್ಲೂ ವಂಚನೆ : ದಾಖಲೆಗಳಿಂದ ಬಯಲಾಯ್ತು ಶಾಲೆಗಳ ಬಂಡವಾಳ : ಕಲ್ಯಾಣ ನಿಧಿಗೆ ಶಿಕ್ಷಕರ ಆಗ್ರಹ

ಉಡುಪಿ : ಒಂದೆಡೆ ಕೊರೊನಾ ಭಯ, ಇನ್ನೊಂದೆಡೆ ಕೆಲಸ ಕಳೆದುಕೊಂಡ ಸಂಕಷ್ಟ. ಜೊತೆಗೆ ಶಿಕ್ಷಕರ ವೇತನದಲ್ಲಿ ಭಾರಿ ವಂಚನೆ ನಡೆಯುತ್ತಿದ್ದರೂ ಏನೂ ಮಾಡಲಾದ ದುಸ್ಥಿತಿ. ನಿಜಕ್ಕೂ ರಾಜ್ಯದ ಖಾಸಗಿ ಶಾಲೆಗಳ ಶಿಕ್ಷಕರ ಬದುಕೇ ದುಸ್ಥರವಾಗಿದೆ. ಈ ನಡುವಲ್ಲೇ ಖಾಸಗಿ ಶಿಕ್ಷಕರಿಗೆ ಆಡಳಿತ ಮಂಡಳಿಗಳು ನೀಡುತ್ತಿರುವ ವೇತನದ ದಾಖಲೆಗಳನ್ನು ಶಿಕ್ಷಣಾಧಿಕಾರಿಗಳು ನೀಡಿದ್ದು, ದಾಖಲೆ ನೋಡಿ ಶಿಕ್ಷಕರೇ ಬೆಚ್ಚಿಬಿದ್ದಿದ್ದಾರೆ.

ಕೊರೊನಾ ಸಂಕಷ್ಟದ ನೆಪವೊಡ್ಡಿ ಖಾಸಗಿ ಶಾಲೆಗಳು ಶಿಕ್ಷಕರಿಗೆ ಆಡಳಿತ ಮಂಡಳಿ ನಿಗದಿ ಪಡಿಸಿದ ವೇತನವನ್ನೂ ನೀಡದೆ ವಂಚಿಸಿವೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶಿಕ್ಷಕರಿಗೆ ಕನಿಷ್ಠ ವೇತನವನ್ನೂ ನೀಡುತ್ತಿಲ್ಲ. ಆದರೆ ಮಾಹಿತಿ ಹಕ್ಕಿನಡಿಯಲ್ಲಿ ಶಿಕ್ಷಣ ಇಲಾಖೆ ನೀಡಿರುವ ದಾಖಲೆಗಳು ಮಾತ್ರ ಇದೀಗ ಶಿಕ್ಷಕರನ್ನೇ ಬೆಚ್ಚಿ ಬೀಳಿಸಿದೆ. ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿರುವ ದಾಖಲೆಯ ಪ್ರಕಾರ ಪ್ರಾಥಮಿಕ ಖಾಸಗಿ ಶಿಕ್ಷಕರಿಗೆ 25800 – 600-27000- 650-29600-750-32600-850-36000-950-39800 -1100-46400 -1250 -51400 ವೇತನ ಶ್ರೇಣಿ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ 33450 -850-36000- 950-39800- 1100- 46400-1250- 53900-1450 -62600 ವೇತನ ಶ್ರೇಣಿಯಂತೆ ವೇತನ ನೀಡಲಾಗುತ್ತಿದೆ ಅನ್ನುವ ಕುರಿತು ದಾಖಲೆಯನ್ನು ನೀಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿನ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಇದೇ ವೇತನ ಶ್ರೇಣಿಯಲ್ಲಿಯೇ ಶಿಕ್ಷಕರಿಗೆ ವೇತನ ನೀಡಲಾಗಿದೆ ಎಂದು ಅಧಿಕಾರಿಗಳು ದಾಖಲೆಗಳಲ್ಲಿ ತಿಳಿಸಿದ್ದಾರೆ. ಆದರೆ ಉಡುಪಿ ಜಿಲ್ಲೆಯಲ್ಲ, ರಾಜ್ಯದ ಯಾವುದೇ ಶಾಲೆಗಳು ಕೂಡ ಈ ನಿಯಮವನ್ನು ಪಾಲನೆ ಮಾಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ರಾಜ್ಯಾಧ್ಯಕ್ಷರಾದ ನಾಗೇಶ್ ಸಿ.ಎನ್ ಆರೋಪಿಸಿದ್ದಾರೆ.

ಖಾಸಗಿ ಶಾಲೆಗಳ ಶಿಕ್ಷಕರಿಗೆ ಕನಿಷ್ಠ ವೇತನವನ್ನು ನೀಡುವ ಕುರಿತು ಹೈಕೋರ್ಟ್ 2005 ರಲ್ಲಿಯೇ ಆದೇಶವನ್ನು ಹೊರಡಿಸಿದೆ.ಆದರೆ ನ್ಯಾಯಾಲಯದ ಆದೇಶ ರಾಜ್ಯದಲ್ಲಿ ಪಾಲನೆಯಾಗುತ್ತಿಲ್ಲ. ಇದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನದಲ್ಲಿಯೂ ಇದೆ. ಕೆಲ ಶಾಲೆಗಳು ಶಿಕ್ಷಕರ ಖಾತೆಗೆ ವೇತನ ಪಾವತಿಸಿ ನಂತರ ವಾಪಾಸ್ ಪಡೆಯುವ ಕಾರ್ಯವನ್ನು ಮಾಡಿದ್ರೆ, ಇನ್ನೂ ಕೆಲವು ಶಾಲೆಗಳು ನಿಗದಿ ಪಡಿಸಿದ ವೇತನವನ್ನು ನೀಡದೆ ವಂಚಿಸುತ್ತಿವೆ. ಕನಿಷ್ಠ ವೇತನ ಪಾವತಿ ಮಾಡಬೇಕೆಂಬ ನಿಯಮವಿದ್ದರೂ ಕೂಡ ಸಾಮಾನ್ಯವಾಗಿ ಮಹಿಳಾ ಶಿಕ್ಷಕರಿಗೆ 5 ಸಾವಿರದಿಂದ 12 ಸಾವಿರ ಹಾಗೂ ಪುರುಷ ಶಿಕ್ಷಕರಿಗೆ 10 ಸಾವಿರದಿಂದ 15 ಸಾವಿರ ರೂಪಾಯಿ ವೇತನ ನೀಡಲಾಗುತ್ತಿದೆ

ಈ ಬಗ್ಗೆ ಉಡುಪಿ ಡಿಡಿಪಿಐ ಅವರಿಗೆ ಸಾಕಷ್ಟು ಬಾರಿ ಮನವಿ ನೀಡಿದ್ರೂ ಪ್ರಯೋಜನವಾಗಿಲ್ಲ. ಇನ್ನು ಜಿಲ್ಲಾ ಶಿಕ್ಷಕರ ಪ್ರಾಧಿಕಾರದ ಅಧ್ಯಕ್ಷರಾಗಿರುವ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ 4 ಬಾರಿ ಮನವಿ ಮಾಡಿದ್ರೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳ ವಿರುದ್ದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ ಎಂದು ನಾಗೇಶ್ ಸಿ.ಎನ್. ತಿಳಿಸಿದ್ದಾರೆ.

ರಾಜ್ಯದಲ್ಲಿ 19,800 ಶಿಕ್ಷಣ ಸಂಸ್ಥೆಗಳಿದ್ದು 700 ಸಿಬಿಎಸ್ಇ ಹಾಗೂ 287 ಶಾಲೆಗಳು ಐಸಿಎಸ್ಇ ಪಠ್ಯಕ್ರಮದ ಬೋಧನೆ ಮಾಡುತ್ತಿವೆ. ರಾಜ್ಯದ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಒಟ್ಟು 3,48,000 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈ ಶಿಕ್ಷಕರಿಗೆ ಮಾತ್ರ ಕನಿಷ್ಠ ವೇತನವಾಗಲಿ, ಸೇವಾ ಭದ್ರತೆಯಾಗಲಿ ಸಿಗುತ್ತಿಲ್ಲ. ಆಡಳಿತ ಮಂಡಳಿ ಶಿಕ್ಷಕರನ್ನು ತಮಗೆ ಬೇಕಾದಂತೆ ನಡೆಸಿಕೊಳ್ಳುತ್ತಿದೆ. ಕಾರಣವೇ ಇಲ್ಲದೇ ಶಿಕ್ಷಕರನ್ನು ಕೆಲಸದಿಂದ ಲೇ ತೆಗೆಯುವ ಕಾರ್ಯವನ್ನು ಮಾಡಲಾಗುತ್ತಿದೆ. ಆದರೆ ಶಿಕ್ಷಕರು ತಮಗೆ ಅನ್ಯಾಯವಾಗುತ್ತಿದ್ದರೂ ಕೂಡ ಬದುಕಿನ ದೃಷ್ಠಿಯಿಂದ ಮೌನವಾಗಿರಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಪತ್ರ ಚಳುವಳಿಗೂ ಕ್ಯಾರೆ ಅಂದಿಲ್ಲ ಸಿಎಂ
ಖಾಸಗಿ ಶಾಲೆಗಳ ಶಿಕ್ಷಕರು ಕನಿಷ್ಠ ವೇತನ ಜಾರಿ, ಶಿಕ್ಷಕರ ಕಲ್ಯಾಣ ನಿಧಿ ಸ್ಥಾಪನೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪತ್ರ ಚಳುವಳಿಯನ್ನು ಹಮ್ಮಿಕೊಂಡಿದ್ದರು. ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಶಿಕ್ಷಕರು ಚಳುವಳಿ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೆ ಶಿಕ್ಷಕರ ಪತ್ರ ಚಳುವಳಿಗೆ ಸಿಎಂ ಯಡಿಯೂರಪ್ಪ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲವೆಂದು ಶಿಕ್ಷಕರು ಆರೋಪಿಸುತ್ತಿದ್ದಾರೆ.

ಕಣ್ಣೀರೊರೆಸದ ಶಿಕ್ಷಣ ಸಚಿವರು
ಕೊರೊನಾ ಸಂಕಷ್ಟದ ಕಾಲದಲ್ಲಿ ರಾಜ್ಯದ ಬಹುತೇಕ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಶಿಕ್ಷಕರ ನೆರವಿಗೆ ಬಂದಿಲ್ಲ. ಕನಿಷ್ಠ ವೇತನವೂ ಇಲ್ಲ, ಇನ್ನೊಂದೆಡೆ ಆಡಳಿತ ಮಂಡಳಿ ನಿಗದಿಪಡಿಸಿದ ಕನಿಷ್ಠ ಸಂಬಳವೂ ಇಲ್ಲದೇ ಕೆಲಸದಿಂದ ಕಿತ್ತು ಹಾಕುವ ಕಾರ್ಯವನ್ನು ಮಾಡಿದೆ. ಇನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ಸಚಿವ ಸುರೇಶ್ ಕುಮಾರ್ ಅವರು ಖಾಸಗಿ ಶಾಲೆ ಶಿಕ್ಷಕರು ಹೋರಾಟಕ್ಕೆ ಇಳಿಯುತ್ತಿದ್ದಂತೆಯೇ ಪ್ರತೀ ಶಿಕ್ಷಕರಿಗೆ 10,000 ರೂಪಾಯಿಯ ಪ್ಯಾಕೇಜ್ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಆದರೆ ಪ್ಯಾಕೇಜ್ ಇಂದಿಗೂ ಭರವಸೆಯಾಗಿಯೇ ಉಳಿದಿದೆ. ಸರಕಾರಿ ಶಿಕ್ಷಕರ ಕಲ್ಯಾಣ ನಿಧಿಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಯಿಂದ ಹಣವನ್ನು ಪಡೆಯುತ್ತಿದ್ದರೂ ಕೂಡ ಸರಕಾರ ಖಾಸಗಿ ಶಿಕ್ಷಕರಿಗೆ ಕಲ್ಯಾಣ ನಿಧಿಯಿಂದ ಯಾವುದೇ ಪ್ರಯೋಜನವನ್ನೂ ನೀಡುತ್ತಿಲ್ಲ. ಸರಕಾರ ಖಾಸಗಿ ಶಾಲೆಗಳ ಶಿಕ್ಷಕರ ಕಲ್ಯಾಣ ನಿಧಿ ಸ್ಥಾಪನೆ ಮಾಡಿ ಶಿಕ್ಷಕರ ನೆರವಿಗೆ ನಿಲ್ಲುವಂತೆ ಮನವಿ ಮಾಡಲಾಗಿದೆ. ಆದರೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಖಾಸಗಿ ಶಿಕ್ಷಕರನ್ನು ಕಲ್ಯಾಣ ನಿಧಿಗೆ ಸೇರಿಸಿಕೊಳ್ಳಲು ಹಲವು ಷರತ್ತುಗಳನ್ನು ವಿಧಿಸಿದ್ದಾರೆ. ಕೆಲಸಕ್ಕೆ ಸೇರಿ ನಾಲ್ಕು ವರ್ಷ ಕಳೆದವರು 3 ಸಾವಿರ ರೂಪಾಯಿ ನೀಡಿ ಸದಸ್ಯರಾಗಬಹುದು. ಆದರೆ ಸದಸ್ಯರಾಗಿ ಎರಡು ವರ್ಷದ ನಂತರ ಸಾಲ ಸೌಲಭ್ಯ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದಿದ್ದಾರೆ. ಆದರೆ ಸೌಲಭ್ಯ ನೀಡುವ ಖಚಿತ ಭರವಸೆ ನೀಡಿಲ್ಲ. ಅಷ್ಟೇ ಯಾಕೆ ಖಾಸಗಿ ಶಾಲಾ ಶಿಕ್ಷಕರಿಗೆ ಯಾವುದೇ ಸೌಲಭ್ಯವನ್ನು ನೀಡಲು ಸಚಿವರು ಮನಸ್ಸು ಮಾಡುತ್ತಿಲ್ಲ.

ಅತಿಥಿ ಶಿಕ್ಷಕರಿಗೂ ವಂಚನೆ
ರಾಜ್ಯದ ಸರಕಾರಿ ಖಾಸಗಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಈ ಶಿಕ್ಷಕರಿಗೆ 10 ಸಾವಿರ ರೂಪಾಯಿ ವೇತನವನ್ನು ಪಾವತಿಸುತ್ತಿದೆ. ನಿಯಮದ ಪ್ರಕಾರ ಸರಕಾರಿ ನೌಕರರಿಗೆ ಪಾವತಿ ಮಾಡುವ ವೇತನ ಶ್ರೇಣಿಯನ್ನೇ ಅತಿಥಿ ಶಿಕ್ಷಕರಿಗೂ ನೀಡಬೇಕೆಂಬ ನಿಯಮವಿದೆ. ಆದರೆ ರಾಜ್ಯ ಸರಕಾರವೇ ಈ ನಿಯಮವನ್ನು ಪಾಲನೆ ಮಾಡುತ್ತಿಲ್ಲ. ಒಂದೊಮ್ಮೆ ಈ ಬಗ್ಗೆ ಪ್ರಶ್ನಿಸಿದ್ರೆ ಕೆಲಸದಿಂದಲೇ ತೆಗೆಯುವ ಕಾರ್ಯ ನಡೆಯುತ್ತಿದೆ ಎನ್ನುತ್ತಾರೆ ಶಿಕ್ಷಕರು.

ಇದು ಕೇವಲ ಉಡುಪಿ ಜಿಲ್ಲೆಯ ಖಾಸಗಿ ಶಿಕ್ಷಕರ ಕಥೆಯಲ್ಲ. ಇಡೀ ರಾಜ್ಯದಲ್ಲಿಯೂ ಇದೇ ಸಂಕಷ್ಟವನ್ನು ಶಿಕ್ಷಕರು ಎದುರಿಸುತ್ತಿದ್ದಾರೆ. ಕೊರೊನಾ ಸಂಕಷ್ಟದಲ್ಲಿಯೂ ಪೋಷಕರಿಂದ ಶುಲ್ಕ ಕಟ್ಟಿಸಿಕೊಳ್ಳುವ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ನೀಡುವ ವೇತನದಲ್ಲಿ ತಾರತಮ್ಯ ಮಾಡುತ್ತಿವೆ. ಕಡಿಮೆ ವೇತನ ನೀಡಿ ಕನಿಷ್ಠ ವೇತನ ಪಾವತಿಸಿರುವ ಕುರಿತು ಹೇಳುತ್ತಿವೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿ ನಡೆಸುತ್ತಿರುವ ವಂಚನೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ರೂ ಮೌನವಾಗಿದ್ದಾರೆ. ಇನ್ನಾದ್ರೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಈ ಕುರಿತು ತನಿಖೆಯನ್ನು ನಡೆಸಿ ನೊಂದ ಖಾಸಗಿ ಶಾಲಾ ಶಿಕ್ಷಕರಿಗೆ ನೆರವಾಗಲೇ ಬೇಕಾದ ಅನಿವಾರ್ಯತೆಯಿದೆ.

Comments are closed.