ದೇಶದಲ್ಲಿ ಮಿತಿಮೀರುತ್ತಿದೆ ಡೆಂಗ್ಯೂ ಜ್ವರ ಪ್ರಕರಣ – ಜಪಾನ್ ಮೂಲದ ಕ್ಯೂಡೆಂಗಾ ಲಸಿಕೆ ಬಳಿಕೆಗೆ ತಜ್ಞರ ಅನುಮತಿ – ಮಹಾಮಾರಿ ವಿರುದ್ಧ ಸಾರ್ವಜನಿಕರಿಗೆ ವ್ಯಾಕ್ಸಿನ್ ರಕ್ಷಣೆ
ದೇಶದಲ್ಲಿ ದಿನದಿಂದ ದಿನಕ್ಕೆ ಮಿತಿಮೀರುತ್ತಿರುವ ಡೆಂಗ್ಯೂ ಜ್ವರದಿಂದ ಮುಕ್ತಿ ಪಡೆಯುವ ಕಾಲ ಸನ್ನಿಹಿತವಾಗಿದೆ. ಪ್ಲೇಟ್ಲೆಟ್ ಸಂಖ್ಯೆಯಲ್ಲಿ ದಿಢೀರ್ ಕುಸಿತ ಕಂಡುಬಂದು ಅನೇಕರ ಸಾವಿಗೆ ಮುನ್ನುಡಿ ಬರೆಯುತ್ತಿದ್ದ ಡೆಂಗ್ಯೂ ಜ್ವರಕ್ಕೆ ಲಸಿಕೆ ಸ್ವೀಕರಿಸಲು ಕೇಂದ್ರ ಸರ್ಕಾರ ನಿಯೋಜಿತ ತಜ್ಞರ ಸಮಿತಿ ಅನುಮತಿ ನೀಡಿದ್ದು, ಶೀಘ್ರದಲ್ಲಿಯೇ ಭಾರತದಲ್ಲಿ ಡೆಂಗ್ಯೂ ಲಸಿಕೆಗಳು ಮಾರುಕಟ್ಟೆ ಪ್ರವೇಶಿಸಲಿವೆ.
ಡೆಂಗ್ಯೂ ಜ್ವರದ ವಿರುದ್ಧ ಹೋರಾಡಲು ಜಪಾನ್ ಮೂಲದ ಟಕೆಡಾ ಕಂಪನಿ ತಯಾರಿಸಿದ ಲಸಿಕೆ ಇದಾಗಿದ್ದು, ಈ ಲಸಿಕೆಗೆ ಕ್ಯೂಡೆಂಗಾ ಎಂದು ಹೆಸರಿಡಲಾಗಿದೆ. ಈ ಲಸಿಕೆಯು ಡೆಂಗ್ಯೂ ವೈರಸ್‌ನ ನಾಲ್ಕೂ ವಿಧಗಳಾದ Serotypes 1, 2, 3, ಮತ್ತು 4 ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಟಕೆಡಾ ಕಂಪನಿ ಹೇಳಿದೆ. ಈ ಕ್ಯೂಡೆಂಗಾ ಲಸಿಕೆಯನ್ನು ಬಳಕೆ ಮಾಡುವುದರ ಬಗ್ಗೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಅಡಿಯಲ್ಲಿ ಬರುವ ವಿಶೇಷ ತಜ್ಞರ ಸಮಿತಿಯು ಸಂಶೋಧನೆ ನಡೆಸಿತ್ತು.ಇದೀಗ ಈ ತಜ್ಞರ ಸಮಿತಿಯು ಕ್ಯೂಡೆಂಗಾ ಲಸಿಕೆಗೆ ಹಸಿರು ನಿಶಾನೆ ತೋರಿದೆ.
ಇದನ್ನೂ ಓದಿ: ವಿಟಮಿನ್ B12 ಕೊರತೆಯಾಗಿದ್ಯಾ? ದಿನಕ್ಕೊಂದು ಚಮಚ ಇದನ್ನು ಸೇವಿಸಿ ಸಾಕು!
ಕ್ಯೂಡೆಂಗಾ ಲಸಿಕೆ ಭಾರತದ ಮಾರುಕಟ್ಟೆ ಪ್ರವೇಶಿಸಲು, ಡಿಜಿಜಿಐ ಅನುಮತಿ ಪಡೆಯಬೇಕಿದೆ. ಈ ಹಂತದಲ್ಲಿಯೂ ಕ್ಯೂಡೆಂಗಾ ಲಸಿಕೆ ಪಾಸ್ ಆದಲ್ಲಿ,ಡೆಂಗ್ಯೂ ಬಂದವರು ಹಾಗೂ ಬಾರದವರೆಲ್ಲರೂ ಈ ಲಸಿಕೆಯನ್ನು ಪಡೆಯಬಹುದಾಗಿದೆ. ಅಲ್ಲದೇ ಈ ಮೂಲಕ ಕ್ಯೂಡೆಂಗಾ ಲಸಿಕೆಯು, ಭಾರತದಲ್ಲಿ ಲಭ್ಯವಿರುವ ಮೊದಲ ಡೆಂಗ್ಯೂ ವಿರುದ್ಧ ಲಸಿಕೆ ಎಂಬ ಕೀರ್ತಿಗೂ ಪಾತ್ರವಾಗಲಿದೆ.
ಈ ಲಸಿಕೆಯ ಆಗಮನದಿಂದಾಗಿ ಪ್ರತಿ ವರ್ಷ ಡೆಂಗ್ಯೂ ಜ್ವರದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಮತ್ತು ಡೆಂಗ್ಯೂನಿಂದ ಸಂಭವಿಸುವ ಸಾವು-ನೋವುಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಭಾರತೀಯ ವೈದ್ಯಕೀಯ ಲೋಕವಿದೆ.



