ಆಯುಷ್ಮಾನ್ ಕಾರ್ಡ್ ಮಿತಿ ತಿಳಿದಿರಲಿ! ಈ ಸಂದರ್ಭಗಳಲ್ಲಿ ಉಚಿತ ಚಿಕಿತ್ಸೆ ಸಿಗುವುದಿಲ್ಲ

ಆರೋಗ್ಯ ಚಿಕಿತ್ಸೆ ವೇಳೆ ಆಯುಷ್ಮಾನ್ ಭಾರತ್ ಯೋಜನೆ ಹಲವರಿಗೆ ದೊಡ್ಡ ನೆರವಾಗುತ್ತಿದೆ. ಆದರೆ ಕಾರ್ಡ್ ಇದ್ದರೂ ಕೆಲವು ಸಂದರ್ಭಗಳಲ್ಲಿ ಉಚಿತ ಚಿಕಿತ್ಸೆ ಸಿಗುವುದಿಲ್ಲ. ಯೋಜನೆಯ ಮಿತಿ, ವಿಶೇಷ ಅನುಮತಿ ಹಾಗೂ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಆಯುಷ್ಮಾನ್ ಭಾರತ್ ಯೋಜನೆ ದೇಶದ ಲಕ್ಷಾಂತರ ಕುಟುಂಬಗಳಿಗೆ ದೊಡ್ಡ ಆಧಾರವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ ಸಿಗುತ್ತಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಈ ಯೋಜನೆ ನೆರವಾಗುತ್ತಿದೆ. ಆದರೆ ಕಾರ್ಡ್ ಇದ್ದರೆ ಯಾವಾಗಲೂ ಎಲ್ಲಾ ಚಿಕಿತ್ಸೆ ಉಚಿತ ಸಿಗುತ್ತದೆ ಎಂದು ಅನೇಕರು ಭಾವಿಸುತ್ತಾರೆ. ವಾಸ್ತವದಲ್ಲಿ ಕೆಲವು ನಿಯಮಗಳು ಮತ್ತು ಮಿತಿಗಳು ಇಲ್ಲಿ ಅನ್ವಯಿಸುತ್ತವೆ.

ವರ್ಷಕ್ಕೆ ಎಷ್ಟು ಚಿಕಿತ್ಸೆ ಸಿಗುತ್ತದೆ?

ಆಯುಷ್ಮಾನ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ವರ್ಷಕ್ಕೆ ₹5 ಲಕ್ಷವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಲಭ್ಯವಿರುತ್ತದೆ. ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಯೋಜನೆಗೆ ಸೇರಿರುವ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಬಹುದು. ಗಂಭೀರ ಕಾಯಿಲೆಗಳು, ಶಸ್ತ್ರಚಿಕಿತ್ಸೆಗಳು ಸೇರಿದಂತೆ ಹಲವು ಚಿಕಿತ್ಸೆಗಳು ಇದರ ಅಡಿಯಲ್ಲಿ ಬರುತ್ತವೆ.

ಆದರೆ ಈ ಸೌಲಭ್ಯಕ್ಕೆ ವಾರ್ಷಿಕ ಮಿತಿ ಇದೆ. ಒಂದು ಕುಟುಂಬ ಈಗಾಗಲೇ ₹5 ಲಕ್ಷ ಮಿತಿಯನ್ನು ಬಳಸಿಕೊಂಡಿದ್ದರೆ, ಅದೇ ವರ್ಷದ ಉಳಿದ ಚಿಕಿತ್ಸೆಗೆ ಸ್ವಂತ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಆಸ್ಪತ್ರೆ ಸೇರುವ ಮೊದಲು ಕಾರ್ಡ್‌ನ ಬಳಕೆ ಮಿತಿಯನ್ನು ಪರಿಶೀಲಿಸಿಕೊಳ್ಳುವುದು ಮುಖ್ಯವಾಗಿದೆ.

ಪ್ರತಿ ವರ್ಷ ಮತ್ತೆ ಲಾಭ ಸಿಗುತ್ತದೆಯೇ?

ಅನೇಕರು ₹5 ಲಕ್ಷ ಸೌಲಭ್ಯ ಜೀವನದಲ್ಲಿ ಒಮ್ಮೆ ಮಾತ್ರ ಸಿಗುತ್ತದೆ ಎಂದುಕೊಳ್ಳುತ್ತಾರೆ. ಆದರೆ ಅದು ತಪ್ಪು ಕಲ್ಪನೆ. ಆಯುಷ್ಮಾನ್ ಯೋಜನೆಯ ಮಿತಿ ಪ್ರತೀ ವರ್ಷ ನವೀಕರಿಸಲಾಗುತ್ತದೆ. ಹೊಸ ವರ್ಷದ ಆರಂಭದಲ್ಲಿ ಮತ್ತೆ ಹೊಸ ಮಿತಿಯೊಂದಿಗೆ ಚಿಕಿತ್ಸೆ ಪಡೆಯುವ ಅವಕಾಶ ಸಿಗುತ್ತದೆ.

ಒಂದು ವರ್ಷದಲ್ಲಿ ಸಂಪೂರ್ಣ ಮಿತಿ ಬಳಸಿದರೆ, ಅದೇ ಅವಧಿಯಲ್ಲಿ ಮುಂದಿನ ಚಿಕಿತ್ಸೆಗೆ ಹಣವನ್ನು ಸ್ವತಃ ಭರಿಸಬೇಕಾಗುತ್ತದೆ. ಮುಂದಿನ ವರ್ಷದಿಂದ ಮತ್ತೆ ಹೊಸ ಮಿತಿ ಪ್ರಾರಂಭವಾಗುತ್ತದೆ.

ಹಿರಿಯ ನಾಗರಿಕರಿಗೆ ಹೆಚ್ಚುವರಿ ನೆರವು

ಕೇಂದ್ರ ಸರ್ಕಾರ ಇತ್ತೀಚೆಗೆ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹೆಚ್ಚುವರಿ ಆರೋಗ್ಯ ನೆರವು ಘೋಷಿಸಿದೆ. ಈಗಾಗಲೇ ಇದ್ದ ಮಿತಿಗೆ ಹೆಚ್ಚುವರಿಯಾಗಿ ಸಹಾಯ ಸಿಗುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಯೋವೃದ್ಧರಿಗೆ ದುಬಾರಿ ಚಿಕಿತ್ಸೆ ಪಡೆಯಲು ಸ್ವಲ್ಪ ನೆಮ್ಮದಿ ದೊರಕಿದೆ.

ವಿಶೇಷ ಅನುಮತಿ ಪಡೆಯಬಹುದು

ಕೆಲವೊಮ್ಮೆ ರೋಗಿಯ ಸ್ಥಿತಿ ಗಂಭೀರವಾಗಿದ್ದರೆ ಅಥವಾ ಚಿಕಿತ್ಸೆ ವೆಚ್ಚ ಹೆಚ್ಚಾದರೆ, ಆರೋಗ್ಯ ಇಲಾಖೆಯಿಂದ ವಿಶೇಷ ಅನುಮತಿ ಪಡೆದು ಹೆಚ್ಚುವರಿ ನೆರವು ಪಡೆಯುವ ಅವಕಾಶವೂ ಇರುತ್ತದೆ. ಇದಕ್ಕಾಗಿ ಸಂಬಂಧಪಟ್ಟ ಆಸ್ಪತ್ರೆಯ ಆಡಳಿತ ವಿಭಾಗ ಅಥವಾ ಆಯುಷ್ಮಾನ್ ಸಹಾಯ ಕೇಂದ್ರವನ್ನು ಸಂಪರ್ಕಿಸಬೇಕು.

ಅಲ್ಲಿ ಅಗತ್ಯ ದಾಖಲೆಗಳು ಹಾಗೂ ಅರ್ಜಿ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ನಿಯಮಗಳು ಬದಲಾಗಿರುವ ಕಾರಣ, ಜಿಲ್ಲಾ ಆರೋಗ್ಯ ಇಲಾಖೆ ಮೂಲಕ ಮಾಹಿತಿ ಪಡೆಯುವುದು ಉತ್ತಮ.

ಚಿಕಿತ್ಸೆ ಸಿಗದ ಸಂದರ್ಭಗಳು ಯಾವುವು?

ಆಯುಷ್ಮಾನ್ ಕಾರ್ಡ್ ಇದ್ದರೂ ಮಿತಿಯನ್ನು ದಾಟಿದ ನಂತರ ಉಚಿತ ಚಿಕಿತ್ಸೆ ಸಿಗುವುದಿಲ್ಲ. ಹಾಗೆಯೇ ಯೋಜನೆಗೆ ಸೇರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಹಣ ಪಾವತಿಸಬೇಕಾಗುತ್ತದೆ. ಕೆಲವು ವಿಶೇಷ ಚಿಕಿತ್ಸೆಗಳು ರಾಜ್ಯದ ನಿಯಮಗಳಿಗೆ ಅನುಗುಣವಾಗಿ ಹೊರತಾಗಿರಬಹುದು.

ಆದ್ದರಿಂದ ಚಿಕಿತ್ಸೆ ಆರಂಭಿಸುವ ಮೊದಲು ಆಸ್ಪತ್ರೆ ಆಯುಷ್ಮಾನ್ ಯೋಜನೆಗೆ ಸೇರಿದ್ದೇನಾ, ಮಿತಿ ಉಳಿದಿದೆಯೇ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯವಾಗಿದೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories