ಬಿಗ್ ಅಲರ್ಟ್: ಮಳೆಗಾಲದ ಜ್ವರ ಅಂತ ನಿರ್ಲಕ್ಷಿಸಬೇಡಿ! ನಿಮ್ಮ ಮನೆ ಬಾಗಿಲಿಗೇ ಬಂದಿದೆ ಹೆಮ್ಮಾರಿ!
ಕಳೆದ ಕೆಲವು ತಿಂಗಳುಗಳಿಂದ ತೀವ್ರ ಬಿಸಿಲಿನ ಬೇಗೆಯಿಂದ, ಕುಡಿಯುವ ನೀರಿಗೂ ಕಂಗಾಲಾಗಿದ್ದ ಜನರಿಗೆ ಈ ವರುಣದೇವ ತಂಪಾದ ವಾತಾವರಣವನ್ನೇನೋ ಕರುಣಿಸಿದ್ದಾನೆ. ಕೆರೆ-ಕಟ್ಟೆಗಳು ತುಂಬುತ್ತಿವೆ, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ ಈ ರಮಣೀಯ ಮಳೆಯ ಜೊತೆ ಜೊತೆಯಲ್ಲೇ, ಸದ್ದಿಲ್ಲದೆ ಮತ್ತೊಂದು ದೊಡ್ಡ ಕಂಟಕ ನಮ್ಮ ಮನೆ ಬಾಗಿಲಿಗೆ ಬಂದು ನಿಂತಿದೆ!

ರಾಜ್ಯಾದ್ಯಂತ ಮುಂಗಾರು ಮಳೆ ಭರ್ಜರಿಯಾಗಿಯೇ ಚುರುಕುಗೊಂಡಿದೆ. ಕಳೆದ ಕೆಲವು ತಿಂಗಳುಗಳಿಂದ ತೀವ್ರ ಬಿಸಿಲಿನ ಬೇಗೆಯಿಂದ, ಕುಡಿಯುವ ನೀರಿಗೂ ಕಂಗಾಲಾಗಿದ್ದ ಜನರಿಗೆ ಈ ವರುಣದೇವ ತಂಪಾದ ವಾತಾವರಣವನ್ನೇನೋ ಕರುಣಿಸಿದ್ದಾನೆ. ಕೆರೆ-ಕಟ್ಟೆಗಳು ತುಂಬುತ್ತಿವೆ, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ ಈ ರಮಣೀಯ ಮಳೆಯ ಜೊತೆ ಜೊತೆಯಲ್ಲೇ, ಸದ್ದಿಲ್ಲದೆ ಮತ್ತೊಂದು ದೊಡ್ಡ ಕಂಟಕ ನಮ್ಮ ಮನೆ ಬಾಗಿಲಿಗೆ ಬಂದು ನಿಂತಿದೆ! ನಾವು ಎಚ್ಚರ ತಪ್ಪಿದರೆ ಪ್ರಾಣಕ್ಕೇ ಕುತ್ತು ತರಬಲ್ಲ ‘ಡೆಂಗ್ಯೂ, ಮಲೇರಿಯಾ ಮತ್ತು ಚಿಕನ್ ಗುನ್ಯಾ’ ಜ್ವರದ ಭೀತಿ ಈಗ ಇಡೀ ರಾಜ್ಯವನ್ನು ಆವರಿಸಿಕೊಳ್ಳುತ್ತಿದೆ.”
ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ದೇಶಾದ್ಯಂತ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಕೀಟಜನ್ಯ ರೋಗಗಳ ಕಾಟ ದಿನದಿಂದ ದಿನಕ್ಕೆ ರಾಕೆಟ್ ವೇಗದಲ್ಲಿ ಹೆಚ್ಚಾಗ್ತಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಕೇಂದ್ರ ಆರೋಗ್ಯ ಸಚಿವಾಲಯ ಈಗಾಗಲೇ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ‘ಹೈ-ಅಲರ್ಟ್’ ಘೋಷಿಸಿದೆ.
ಮುಂಗಾರು ಮಳೆಯ ನೀರು ಎಲ್ಲೆಂದರಲ್ಲಿ ಶೇಖರಣೆಯಾಗುತ್ತಿರುವುದರಿಂದ ಸೊಳ್ಳೆಗಳ ಸಂತತಿ ತೀವ್ರವಾಗಿ ಹೆಚ್ಚುತ್ತಿದೆ. ಕೇವಲ ನಗರ ಪ್ರದೇಶ ಮಾತ್ರವಲ್ಲ, ಗ್ರಾಮೀಣ ಭಾಗಗಳಲ್ಲೂ ಜ್ವರದ ಪ್ರಕರಣಗಳು ಸೀಮಿತ ದಾಟುತ್ತಿವೆ. ಈ ಬಾರಿ ವಿಶೇಷವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಸಣ್ಣ ಮಕ್ಕಳು ಹಾಗೂ ವಯೋವೃದ್ಧರಲ್ಲಿ ವೈರಲ್ ಜ್ವರದ ಲಕ್ಷಣಗಳು ಅತ್ಯಂತ ತೀವ್ರವಾಗಿ ಕಾಣಿಸಿಕೊಳ್ಳುತ್ತಿರುವುದು ವೈದ್ಯ ಲೋಕಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಡೆಂಗ್ಯೂ ಪೀಡಿತ ರೋಗಿಗಳಲ್ಲಿ ರಕ್ತದ ಪ್ಲೇಟ್‌ಲೆಟ್‌ಗಳ ಸಂಖ್ಯೆ (Platelet Count) ದಿಢೀರನೆ ಕುಸಿಯುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.”
ಇದನ್ನೂ ಓದಿ : ಶೀಗೆಲ್ಲಾ ಅಟ್ಟಹಾಸಕ್ಕೆ ಕೇರಳ ನಡುಕ: ಸೋಂಕಿಗೆ ಮತ್ತೊಬ್ಬರು ಸಾವು, ದಿನೇ ದಿನೇ ಹೆಚ್ಚುತ್ತಿದೆ ಭೀತಿ!
ಡೆಂಗ್ಯೂ ಬಂದಿರುವುದನ್ನು ಪತ್ತೆ ಹಚ್ಚುವುದು ಹೇಗೆ?
* ಸತತ ಎರಡು ದಿನಗಳಿಗಿಂತ ಹೆಚ್ಚು ಕಾಲ ತೀವ್ರ ಜ್ವರ ಇರುವುದು,
* ಕಣ್ಣುಗಳ ಹಿಂಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು,
* ಮೂಳೆ, ಕೀಲುಗಳು ಮತ್ತು ಸ್ನಾಯುಗಳಲ್ಲಿ ಅಸಹನೀಯ ಮೈಕೈ ನೋವು,
* ತೀವ್ರ ನಿರಾಸಕ್ತಿ, ವಾಂತಿ ಅಥವಾ ವಾಕರಿಕೆಯ
ಇತಂಹ ಲಕ್ಷಣಗಳು ಕಂಡುಬಂದರೆ ಅದನ್ನು ಕೇವಲ ಸಾಮಾನ್ಯ ವೈರಲ್ ಜ್ವರ ಎಂದು ನಿರ್ಲಕ್ಷಿಸುವ ತಪ್ಪು ಮಾಡಲೇಬೇಡಿ. ಇದು ಸೊಳ್ಳೆ ಕಡಿತದಿಂದ ಬಂದಿರುವ ಡೆಂಗ್ಯೂ ಇರಬಹುದು!”
ಪಾಲಿಸಬೇಕಾದ 3 ಪ್ರಮುಖ ಜೀವರಕ್ಷಕ ಸೂತ್ರ
ಸೂತ್ರ 1: ನಿಂತ ನೀರಿಗೆ ಬ್ರೇಕ್ ಹಾಕಿ (Cleanliness First):
ನಮ್ಮ ಮನೆಯ ಟೆರೇಸ್, ಸುತ್ತಮುತ್ತ ಬಿದ್ದಿರುವ ಹಳೆಯ ಟೈರ್‌ಗಳು, ಪ್ಲಾಸ್ಟಿಕ್ ಕವರ್‌ಗಳು, ಒಡೆದ ಕುಂಡಗಳು ಅಥವಾ ತೆಂಗಿನ ಚಿಪ್ಪುಗಳಲ್ಲಿ ಮಳೆ ನೀರು ನಿಲ್ಲದಂತೆ ವಾರಕ್ಕೊಮ್ಮೆ ಕಡ್ಡಾಯವಾಗಿ ಪರಿಶೀಲಿಸಿ ಸ್ವಚ್ಛಗೊಳಿಸಿ. ಮಲೇರಿಯಾ ಹರಡುವ ಸೊಳ್ಳೆಗಳು ಕೊಳಕು ನೀರಿನಲ್ಲಿ ಬೆಳೆದರೆ, ಡೆಂಗ್ಯೂ ಹರಡುವ ‘ಈಡಿಸ್ ಈಜಿಪ್ಟಿ’ ಸೊಳ್ಳೆಗಳು ನಿಮ್ಮ ಮನೆಯ ಒಳಗಿರುವ ಫ್ರಿಡ್ಜ್ ಟ್ರೇ, ಮನಿ ಪ್ಲಾಂಟ್ ಕುಂಡ ಅಥವಾ ಏರ್ ಕೂಲರ್‌ನಲ್ಲಿರುವ ಅತ್ಯಂತ ಶುದ್ಧ ನೀರಲ್ಲೇ ಮೊಟ್ಟೆಯಿಡುತ್ತವೆ!
ಸೂತ್ರ 2: ಸೊಳ್ಳೆ ಕಡಿತದಿಂದ ಸ್ವಯಂ ರಕ್ಷಣೆ (Self Protection):
ಡೆಂಗ್ಯೂ ಹರಡುವ ಸೊಳ್ಳೆಗಳು ಹೆಚ್ಚಾಗಿ ಮುಂಜಾನೆ ಮತ್ತು ಹಗಲು ಹೊತ್ತಿನಲ್ಲೇ ಕಚ್ಚುತ್ತವೆ. ಹಾಗಾಗಿ, ಶಾಲೆಗೆ ಹೋಗುವ ಮಕ್ಕಳಿಗೆ ಪೂರ್ತಿ ತೋಳಿನ ಬಟ್ಟೆಗಳನ್ನು ಧರಿಸುವಂತೆ ಅರಿವು ಮೂಡಿಸಿ. ಮನೆಯ ಕಿಟಕಿ ಮತ್ತು ಬಾಗಿಲುಗಳಿಗೆ ಕಡ್ಡಾಯವಾಗಿ ಸೊಳ್ಳೆ ಜಾಲರಿಗಳನ್ನು (Mosquito Nets) ಬಳಸಿ. ಮಲಗುವಾಗ ಸೊಳ್ಳೆ ಪರದೆ ಅಥವಾ ಮಾಸ್ಕಿಟೋ ರಿಪೆಲೆಂಟ್‌ಗಳನ್ನು ಬಳಸುವುದು ಅತ್ಯಗತ್ಯ.
ಸೂತ್ರ 3: ಸ್ವಯಂ ವೈದ್ಯ ಪದ್ಧತಿ ಪ್ರಾಣಕ್ಕೆ ಕುತ್ತು (No Self Medication):
ಅನೇಕರು ಜ್ವರ ಬಂದ ತಕ್ಷಣ ಆಸ್ಪತ್ರೆಗೆ ಹೋಗುವ ಬದಲು ಮೆಡಿಕಲ್ ಶಾಪ್‌ಗೆ ಹೋಗಿ ತಾವಾಗಿಯೇ ಮಾತ್ರೆ ತಂದು ನುಂಗುತ್ತಾರೆ. ಆದರೆ ನೆನಪಿಡಿ, ಡೆಂಗ್ಯೂ ಜ್ವರವಿದ್ದಾಗ ಆಸ್ಪಿರಿನ್ (Aspirin), ಬ್ರೂಫೆನ್ (Ibuprofen) ನಂತಹ ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಂಡರೆ, ಅವು ರಕ್ತವನ್ನು ಮತ್ತಷ್ಟು ತೆಳುಗೊಳಿಸಿ ದೇಹದ ಒಳಗೆ ಆಂತರಿಕ ರಕ್ತಸ್ರಾವವನ್ನು (Internal Bleeding) ಉಂಟುಮಾಡಬಹುದು. ಜ್ವರವಿದ್ದಾಗ ಕೇವಲ ಪ್ಯಾರಸಿಟಮಲ್ ಮಾತ್ರ ಬಳಸಿ, ತಕ್ಷಣವೇ ವೈದ್ಯರ ಬಳಿ ಹೋಗಿ.”
ಈ ಮಳೆಗಾಲದ ರೋಗಗಳಿಗೆ ಕೇವಲ ಭಯ ಪಡುವುದರಿಂದ ಯಾವುದೇ ಪ್ರಯೋಜನವಿಲ್ಲ. ‘ಮುನ್ನೆಚ್ಚರಿಕೆಯೇ’ ಇವುಗಳಿಗೆ ಇರುವ ಅತ್ಯಂತ ಪ್ರಭಾವಶಾಲಿ ಮದ್ದು. ಜ್ವರ ಕಾಣಿಸಿಕೊಂಡ ತಕ್ಷಣ ತಡ ಮಾಡದೆ ಹತ್ತಿರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಅಗತ್ಯ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ. ಆರೋಗ್ಯವಾಗಿರಿ, ಸುರಕ್ಷಿತವಾಗಿರಿ.



