ನಿಮ್ಮ ಮಕ್ಕಳಿಗೆ ಪದೇ ಪದೇ ಅಲರ್ಜಿ ಆಗುತ್ತಿದ್ದರೆ ಖಂಡಿತ ನಿರ್ಲಕ್ಷಿಸಬೇಡಿ : ಔಷಧಿಯ ಜೊತೆಗೆ ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಿ
ಮಕ್ಕಳಲ್ಲಿ ಪದೇ ಪದೇ ಅಲರ್ಜಿ ಉಂಟಾಗಲು ಕಾರಣವೇನು? ಅಲರ್ಜಿ ಸಮಸ್ಯೆಯಿಂದ ಮಕ್ಕಳು ಬಳಲುತ್ತಿದ್ದರೆ ಪೋಷಕರು ಏನೇನು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

ಮಳೆಗಾಲ ಪ್ರಾರಂಭವಾಗಿದೆ. ಭಾರತದ ಕೆಲವಡೆ ಮಳೆ ತನ್ನ ಆರ್ಭಟ ತೋರಿಸುತ್ತಿದೆ. ಇದರಿಂದ ಬಹಳಷ್ಟು ಸಮಸ್ಯೆಗಳು ತಲೆದೂರುತ್ತಿವೆ. ಅದರಲ್ಲೂ ಮಕ್ಕಳು ಬಹಳ ಬೇಗನೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಮಕ್ಕಳ ದೇಹದಲ್ಲಿರುವ ಪ್ರತಿರಕ್ಷಣಾ ವ್ಯವಸ್ಥೆಯ ಕೊರತೆ ಇದಕ್ಕೆ ಕಾರಣ. ಜೊತೆಗೆ ಪರಿಸರದಲ್ಲಿನ ಧೂಳಿನ ಕಣಗಳು, ಹವಾಮಾನ ವೈಪರಿತ್ಯ, ಮಾಲಿನ್ಯ ಇವೆಲ್ಲವುಗಳಿಂದ ಮಕ್ಕಳ ಪ್ರತಿರಕ್ಷಣಾ ವ್ಯವಸ್ಥೆಯುಲ್ಲಿ ನ್ಯೂನ್ಯತೆ ಕಂಡುಬರುತ್ತದೆ. ಇದರಿಂದ ಮಕ್ಕಳಲ್ಲಿ ಮೂಗು ಸೋರುವುದು, ಸೀನುವುದು, ಚರ್ಮದ ಮೇಲೆ ದದ್ದುಗಳು, ತುರಿಕೆ, ಕೆಮ್ಮು, ವಾಂತಿ ಮತ್ತು ಅತಿಸಾರ ಮುಂತಾದ ಅಲರ್ಜಿ ಲಕ್ಷಣಗಳು ಉಲ್ಭಣಗೊಳ್ಳುತ್ತವೆ. ಹಾಗಾದರೆ ಮಕ್ಕಳಿಗೆ ಪದೇ ಪದೇ ಅಲರ್ಜಿಯಾಗಲು ಕಾರಣವೇನು? ಪೋಷಕರು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು ಎಂದು ನೋಡೋಣ.
ಅಲರ್ಜಿ ಹೇಗೆ ಉಂಟಾಗುತ್ತದೆ?
ಋತುಮಾನದ ಉಂಟಾಗುವ ಶೀತ ಮತ್ತು ಕೆಮ್ಮು ಕೆಲವೇ ದಿನಗಳವರೆಗೆ ಮಾತ್ರ ಇರುತ್ತದೆ. ಕ್ರಮೇಣ ವಾಸಿಯಾಗುತ್ತದೆ. ಆದರೆ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳಿಂದ ಉಂಟಾಗುವ ಕಾಯಿಲೆಗಳು ಸುಲಭದಲ್ಲಿ ಕಡಿಮೆಯಾಗುವುದಿಲ್ಲ. ಅವು ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಸವಾಲು ಹಾಕುತ್ತವೆ. ಅವುಗಳಿಂದ ಶೀತ, ಗಂಟಲು ನೋವು, ಕೀಲು ನೋವು, ಜ್ವರ, ತುರಿಕೆ, ಚರ್ಮದ ಮೇಲಿನ ದದ್ದು ಮುಂತಾದ ಲಕ್ಷಣಗಳು ಪದೇ ಪದೇ ಕಾಣಿಸಿಕೊಳ್ಳುತ್ತವೆ. ಕೆಮ್ಮು, ಕಣ್ಣಿನಿಂದ ನೀರು ಸಹ ಕಾಣಿಸಬಹುದು. ಇವೆಲ್ಲವನ್ನು ಗಮನಿಸಿ ಅಲರ್ಜಿ ಸಮಸ್ಯೆ ಉಂಟಾಗಿದೆ ಎನ್ನಲಾಗುತ್ತದೆ. ಮಕ್ಕಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳಲು ಅನೇಕ ಕಾರಣಗಳಿವೆ. ಹವಾಮಾನ ಬದಲಾವಣೆ, ಮಾಲಿನ್ಯ, ಆನುವಂಶಿಕ ಬದಲಾವಣೆಗಳು ಮತ್ತು ಜೀವನಶೈಲಿ ಪ್ರಮುಖ ಕಾರಣಗಳಾಗಿವೆ. ಚಿಕ್ಕ ವಯಸ್ಸಿನಲ್ಲಿ ಸೂಕ್ಷ್ಮಜೀವಿಗಳಿಗೆ ಒಡ್ಡಿಕೊಳ್ಳದಿರುವುದು ಸಹ ಒಂದು ಕಾರಣವಾಗಿದೆ. ಅಲರ್ಜಿ ತೀವ್ರವಾದರೆ ಅಸ್ತಮಾ ಉಂಟಾಗುತ್ತದೆ. ಉಸಿರಾಟದ ತಡೆ, ಎದೆಯಲ್ಲಿ ಬಿಗಿತ, ಗಂಟಲು ಊತ, ಕಡಿಮೆ ರಕ್ತದೊತ್ತಡ ಮುಂತಾದ ಸಮಸ್ಯೆ ಉಂಟಾಗುತ್ತದೆ.
ಇದನ್ನೂ ಓದಿ: ಈ ಮನೆಮದ್ದುಗಳನ್ನು ವಾರದಲ್ಲಿ ಕೇವಲ 2 ದಿನ ಉಪಯೋಗಿಸಿ ನೋಡಿ ! ಡಾಂಡ್ರಫ್ ಸಮಸ್ಯೆಗೆ ಸಿಗುತ್ತೆ ಸಂಪೂರ್ಣ ಮುಕ್ತಿ
ಏನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು?
ಮಕ್ಕಳಲ್ಲಿ ಅಥವಾ ಮನೆಯಲ್ಲಿ ಯಾರಿಗಾದರೂ ಅಲರ್ಜಿ ಸಮಸ್ಯೆಯಿದ್ದರೆ ಔಷಧ ತೆಗೆದುಕೊಳ್ಳುವುದರ ಜೊತೆಗೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯ.
- ಬೆಡ್‌ಶೀಟ್‌ಗಳನ್ನು ವಾರಕ್ಕೊಮ್ಮೆ ಬಿಸಿನೀರಿನಿಂದ ತೊಳೆಯಿರಿ.
- ಹಾಸಿಗೆ ಹಳೆಯದಾಗಿದ್ದರೆ ಅದನ್ನು ಬದಲಾಯಿಸಿ. ಇಲ್ಲವಾದರೆ ಡಬಲ್ ಬೆಡ್‌ಶೀಟ್ ಬಳಸಿ. ಏಕೆಂದರೆ ಧೂಳಿನ ಕಣಗಳು ಶ್ವಾಸಕೋಶ ಸೇರಿ ಅಲರ್ಜಿ ಉಲ್ಭಣವಾಗುವಂತೆ ಮಾಡುತ್ತವೆ.
- ಮನೆಯ ಕಿಟಕಿ, ಲಿಂಟಲ್ ಮೇಲೆ ಧೂಳು ಮತ್ತು ಕೊಳಕು ಶೇಖರಣೆಯಾಗದಂತೆ ಆಗಾಗ ಸ್ವಚ್ಛಗೊಳಿಸುತ್ತಿರಿ.
- ಫ್ಯಾನ್, ಕೂಲರ್, ಎಸಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.
- ಸಾಕುಪ್ರಾಣಿಗಳಿದ್ದರೆ ಅವುಗಳನ್ನು ಮಲಗುವ ಕೋಣೆಗೆ ತರಬೇಡಿ. ಆದಷ್ಟು ಅದರಿಂದ ದೂರವಿರಿ.
- ಧೂಮಪಾನದಿಂದ ದೂರವಿರಿ.
- ಮಕ್ಕಳಿಗೆ ಸಾಕಷ್ಟು ಬೆಚ್ಚಗಿನ ನೀರು, ಬಿಸಿ ಆಹಾರ ನೀಡಿ. ಕೆಲವು ಯೋಗಾಭ್ಯಾಸ ಅಥವಾ ವ್ಯಾಯಾಮವನ್ನು ನಿಯಮಿತವಾಗಿ ಮಾಡಿಸಿ. ಇದರಿಂದ ಮಕ್ಕಳಲ್ಲಿ ಇಮ್ಯೂನಿಟಿ ಹೆಚ್ಚಾಗುತ್ತದೆ.

