ಶಬರಿಮಲೆ ಭಕ್ತಾದಿಗಳಿಗೆ ಶುಭ ಸುದ್ದಿ : ರೈಲ್ವೆ ಇಲಾಖೆಯಿಂದ ಕರ್ನಾಟಕ – ಕೇರಳ ವಿಶೇಷ ರೈಲು
ರಾಜ್ಯದಲ್ಲಿ ಶಬರಿಮಲೆಗೆ ತೆರಳುತ್ತಿರುವ ಅಯ್ಯಪ್ಪ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಭಕ್ತರ ಸುಗಮ ಪ್ರಯಾಣಕ್ಕಾಗಿ ರೈಲ್ವೆ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಈ ತಿಂಗಳ ಅಂತ್ಯದ ವೇಳೆಗೆ ರಾಜ್ಯದಿಂದ ಕೇರಳಕ್ಕೆ 2 ವಿಶೇಷ ರೈಲು ಸಂಚರಿಸಲಿದೆ. ಡಿಸೆಂಬರ್ 27ರಿಂದ ಬೆಂಗಳೂರಿನಿಂದ ಕೊಲ್ಲಂಗೆ ವಿಶೇಷ ರೈಲು ತೆರಳಲಿದ್ದು ಲಕ್ಷಾಂತರ ಅಯ್ಯಪ್ಪ ಮಾಲಾಧಾರಿಗಳಿಗೆ ಅನುಕೂಲವಾಗಲಿದೆ.
ಶಬರಿಮಲೆ ಭಕ್ತಾದಿಗಳ ಜೊತೆಯಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕಾಗಿ ಪ್ರಯಾಣ ಬೆಳೆಸುವವರನ್ನೂ ಗಮನದಲ್ಲಿಟ್ಟುಕೊಂಡು ಈ ವಿಶೇಷ ರೈಲನ್ನು ಬಿಡಲಾಗಿದೆ. ಶಬರಿಮಲೆಗೆ ತೆರಳುವ ಭಕ್ತರು ಈ ರೈಲಿನ ಮೂಲಕ ಚೆಂಗನ್ನೂರ್ ನಿಲ್ದಾಣ, ಕೊಟ್ಟಾಯಂನಲ್ಲಿ ಇಳಿದು ಪಂಪಾಗೆ ರಸ್ತೆ ಮಾರ್ಗದ ಮೂಲಕ ತೆರಳಬಹುದಾಗಿದೆ.
ಡಿಸೆಂಬರ್ 27ರ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಹೊರಡುವ ಈ ರೈಲು ಮಾರನೇ ದಿನ ಬೆಳಗ್ಗೆ 7.25ಕ್ಕೆ ಕೊಲ್ಲಂ ತಲುಪಲಿದೆ. ಇನ್ನು ಕೊಲ್ಲಂನಿಂದ ಡಿಸೆಂಬರ್ 28ರ ಬೆಳಗ್ಗೆ 10.40ಕ್ಕೆ ಹೊರಡುವ ರೈಲು ಮಾರನೇ ದಿನ ಬೆಳಗ್ಗೆ 10:30ಕ್ಕೆ ಹುಬ್ಬಳ್ಳಿ ತಲುಪಲಿದೆ.
ಇದನ್ನೂ ಓದಿ: 3,000 ಕೋಟಿ ವೆಚ್ಚದ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಮಾರ್ಗ 2030ರೊಳಗೆ ಕಾರ್ಯಗತ; ಕೇಂದ್ರ ಸಚಿವ ಸೋಮಣ್ಣ ಘೋಷಣೆ
ಈ ವಿಶೇಷ ರೈಲುಗಳು ಹುಬ್ಬಳ್ಳಿ, ಹಾವೇರಿ, ರಾಣೇಬೆನ್ನೂರು, ದಾವಣಗೆರೆ, ಕಡೂರು, ಅರಸೀಕೆರೆ, ತುಮಕೂರು, ಎಸ್ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ ಮತ್ತು ಕಾಯಂಕುಲಂ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. 1 ಎಸಿ ಟು-ಟೈರ್, 3 ಎಸಿ ತ್ರಿ-ಟೈರ್, 12 ಸ್ಲೀಪರ್ ಕ್ಲಾಸ್ ಬೋಗಿಗಳು ಇರಲಿವೆ. ಇದರೊಂದಿಗೆ 1 ಎಸ್ಎಲ್ ಆರ್ಡಿ ಮತ್ತು 1 ಲಗೇಜ್, ಬ್ರೇಕ್ ಮತ್ತು ಜನರೇಟರ್ ವ್ಯಾನ್ ಸೇರಿದಂತೆ ಒಟ್ಟೂ 18 ಬೋಗಿಗಳನ್ನು ಈ ರೈಲು ಹೊಂದಿದೆ.



