ಪಾಸ್‌ಪೋರ್ಟ್ ಇದ್ದರೆ ಸಾಕಾಗಲ್ಲ! ಅದು ನಾಗರಿಕತ್ವದ ಅಂತಿಮ ಪುರಾವೆಯಲ್ಲ; ಕೇಂದ್ರ ಸ್ಪಷ್ಟನೆ
ಪಾಸ್‌ಪೋರ್ಟ್ ಹೊಂದಿರುವುದರಿಂದ ಮಾತ್ರ ಭಾರತೀಯ ನಾಗರಿಕತ್ವ ಸಾಬೀತಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ನಾಗರಿಕತ್ವ ನಿರ್ಧಾರಕ್ಕೆ ಕಾನೂನುಬದ್ಧ ದಾಖಲೆಗಳು ಹಾಗೂ ಸಂಬಂಧಿತ ನಿಯಮಗಳೇ ಅಂತಿಮ ಆಧಾರವಾಗಿವೆ.

ಭಾರತೀಯ ಪಾಸ್‌ಪೋರ್ಟ್ ಕುರಿತು ಹಲವು ವರ್ಷಗಳಿಂದ ಇರುವ ಗೊಂದಲಕ್ಕೆ ಕೇಂದ್ರ ಸರ್ಕಾರ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ. ಪಾಸ್‌ಪೋರ್ಟ್ ಹೊಂದಿರುವುದರಿಂದ ಮಾತ್ರ ವ್ಯಕ್ತಿಯ ಭಾರತೀಯ ನಾಗರಿಕತ್ವ ಸಾಬೀತಾಗುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಪ್ರಕಾರ, ಪಾಸ್‌ಪೋರ್ಟ್‌ನ ಮುಖ್ಯ ಉದ್ದೇಶ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಅಗತ್ಯವಿರುವ ಅಧಿಕೃತ ದಾಖಲೆ ಒದಗಿಸುವುದಾಗಿದೆ. ಇದನ್ನು ನಾಗರಿಕತ್ವದ ಅಂತಿಮ ಅಥವಾ ಏಕೈಕ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸಾಮಾನ್ಯವಾಗಿ ಭಾರತೀಯ ಪಾಸ್‌ಪೋರ್ಟ್ ಅನ್ನು ಭಾರತೀಯ ನಾಗರಿಕರಿಗೆ ಮಾತ್ರ ನೀಡಲಾಗುತ್ತದೆ. ಆದರೆ ನಾಗರಿಕತ್ವವನ್ನು ಕಾನೂನುಬದ್ಧವಾಗಿ ನಿರ್ಧರಿಸುವ ವೇಳೆ ಕೇವಲ ಪಾಸ್‌ಪೋರ್ಟ್ ಸಾಕಾಗುವುದಿಲ್ಲ. ಭಾರತೀಯ ನಾಗರಿಕತ್ವ ಕಾಯ್ದೆ ಹಾಗೂ ಅದರಡಿ ಜಾರಿಯಲ್ಲಿರುವ ನಿಯಮಗಳ ಪ್ರಕಾರವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಪಾಸ್‌ಪೋರ್ಟ್ ಹೊಂದಿರುವುದು ಭಾರತ ಸರ್ಕಾರವು ಆ ವ್ಯಕ್ತಿಗೆ ಪ್ರಯಾಣ ದಾಖಲೆ ನೀಡಿರುವುದನ್ನು ಸೂಚಿಸುತ್ತದೆ. ಆದರೆ ನಾಗರಿಕತ್ವ ದೃಢೀಕರಣ ಅಥವಾ ಕಾನೂನು ಸಂಬಂಧಿತ ಪರಿಶೀಲನೆ ವೇಳೆ ಜನನ ಪ್ರಮಾಣಪತ್ರ, ಕುಟುಂಬ ದಾಖಲೆಗಳು ಸೇರಿದಂತೆ ಅಗತ್ಯವಿರುವ ಇತರ ದಾಖಲೆಗಳನ್ನೂ ಅಧಿಕಾರಿಗಳು ಪರಿಶೀಲಿಸಬಹುದು.
14ನೇ ಪಾಸ್‌ಪೋರ್ಟ್ ಸೇವಾ ದಿನದ ಅಂಗವಾಗಿ ಈ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯ, ಈ ವಿಷಯದಲ್ಲಿ ಸಾರ್ವಜನಿಕರಲ್ಲಿ ಇರುವ ಗೊಂದಲ ನಿವಾರಣೆಯಾಗಲಿ ಎಂಬ ಉದ್ದೇಶದಿಂದ ಮತ್ತೊಮ್ಮೆ ತನ್ನ ನಿಲುವನ್ನು ಪುನರುಚ್ಚರಿಸಿದೆ.

